ನವದೆಹಲಿ: ಚೀನಾ ಜತೆಗಿನ ಗಡಿ ಸಂಘರ್ಷ ಹೆಚ್ಚಾಗಿರುವ ಮಧ್ಯೆಯೇ ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮುಖ್ಯಸ್ಥ ಎಸ್.ಎಸ್.ದೇಸ್ವಾಲ್ ಅವರು ಲಡಾಖ್ ಗಡಿಯಲ್ಲಿ ಆರು ದಿನ ವಾಸ್ತವ್ಯ ಹೂಡಿದ್ದಾರೆ. ಐಟಿಬಿಪಿ ಯೋಧರ ಸಿದ್ಧತೆ ಪರಿಶೀಲಿಸುವುದಕ್ಕಾಗಿ ಮತ್ತು ಸೇನೆಯ ಜತೆಗಿನ ಸಹಕಾರ ಹೆಚ್ಚಿಸುವ ಸಲುವಾಗಿ ಅವರು ಈ ಕ್ರಮ ಕೈಗೊಂಡಿದ್ದಾರೆ.
ಲಡಾಖ್‌ನಲ್ಲಿ ಸುಮಾರು 5,000 ಐಟಿಬಿಪಿ ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ. ಲಡಾಖ್ ಸೇರಿದಂತೆ ಸುತ್ತಲಿನ ಎಲ್ಲ ಪ್ರಮುಖ ಪ್ರದೇಶಗಳಿಗೆ ದೇಸ್ವಾಲ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಭೇಟಿ ವೇಳೆ, ಐಟಿಬಿಪಿ ಯೋಧರ ಜತೆ ಮಾತುಕತೆ ನಡೆಸಿದ ಅವರು, ಚೀನಾ ಗಡಿ ಉಲ್ಲಂಘನೆ ಯತ್ನಗಳನ್ನು ವಿಫಲಗೊಳಿಸಿದ ಯೋಧರನ್ನು ಅಭಿನಂದಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಉನ್ನತ ಮಟ್ಟದ ಸೇನಾ ಕಮಾಂಡರ್‌ಗಳ ಜತೆಗೂ ಮಾತುಕತೆ ನಡೆಸಿದ ಅವರು, ಉಭಯ ಪಡೆಗಳ ನಡುವೆ ಸಂಪೂರ್ಣ ಸಹಕಾರ ಹಾಗೂ ಸಮನ್ವಯದ ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.