ಬೀಜಿಂಗ್, ನವದೆಹಲಿ: ಗಡಿ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಬಾಲ್ ಜತೆ ಮಾತುಕತೆ ನಡೆಸುವ ಸಂಬಂಧ ವಾಂಗ್ ಯಿ ಅವರು ಭಾರತಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ಸೋಮವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ವಾಂಗ್ ಯಿ ಅವರನ್ನು ವಿದೇಶಾಂಗ ಸಚಿವಾಲಯದ ಪೂರ್ವ ಏಷ್ಯಾ ವಿಭಾಗದ ಜಂಟಿ ಕಾರ್ಯದರ್ಶಿ ಗೌರಂಗಲಾಲ್ ದಾಸ್ ಸ್ವಾಗತಿಸಿದರು.
ಡೊಬಾಲ್ ಮತ್ತು ವಾಂಗ್ ಯಿ ಅವರು ಗಡಿ ಸಮಸ್ಯೆ ಪರಿಹಾರಕ್ಕಾಗಿ ಎರಡೂ ದೇಶಗಳಿಂದ ನಿಯೋಜನೆಗೊಂಡಿರುವ ವಿಶೇಷ ಪ್ರತಿನಿಧಿಗಳಾಗಿದ್ದಾರೆ. ಇದು 24ನೇ ಸುತ್ತಿನ ಚರ್ಚೆಯಾಗಿದೆ.
23ನೇ ಸುತ್ತಿನ ಮಾತುಕತೆಗಾಗಿ ಡೊಬಾಲ್ ಅವರು ಕಳೆದ ಡಿಸೆಂಬರ್‌ನಲ್ಲಿ ಚೀನಾಕ್ಕೆ ಭೇಟಿ ನೀಡಿ ವಾಂಗ್ ಜೊತೆ ಮಾತುಕತೆ ನಡೆಸಿದ್ದರು. ಇದಕ್ಕೂ ಮುನ್ನ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಕೂಡ ಮಾತುಕತೆಗಳನ್ನು ಮತ್ತೆ ಆರಂಭಿಸಲು ಒಪ್ಪಿಗೆ ಸೂಚಿಸಿದ್ದರು.
ವಾಂಗ್ ಯಿ ಮತ್ತು ಡೊಬಾಲ್ ಅವರು ಮಂಗಳವಾರ ಮಾತುಕತೆ ನಡೆಸಲಿದ್ದಾರೆ. ಗ್ವಾಲನ್ ಕಣಿವೆಯಲ್ಲಿ 2020ರಲ್ಲಿ ನಡೆದ ಘರ್ಷಣೆಯ ನಂತರ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯಲಿದೆ ಎಂದು ವಿಶ್ಲೇಷಿಸಲಾಗಿದೆ.
ಗಡಿ ವಿಚಾರಗಳಿಗೆ ಸಂಬಂಧಿಸಿದಂತೆ ಈ ಹಿಂದೆ ನಡೆದ ಮಾತುಕತೆಯ ಸಂದರ್ಭದಲ್ಲಿ ಉಭಯ ರಾಷ್ಟ್ರಗಳು ತೆಗೆದುಕೊಂಡ ನಿರ್ಧಾರದಂತೆ ಕಾರ್ಯನಿರ್ವಹಿಸಲು ಉತ್ಸುಕವಾಗಿರುವುದಾಗಿ ಚೀನಾ ತಿಳಿಸಿದೆ.
ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಚೀನಾಗೆ ತೆರಳಲಿದ್ದಾರೆ. ಪ್ರಧಾನಿ ಅವರ ಪ್ರವಾಸಕ್ಕೆ ಮುನ್ನ ವಾಂಗ್ ಯಿ ಭಾರತಕ್ಕೆ ಭೇಟಿ ನೀಡಿರುವುದು ಮಹತ್ವ ಪಡೆದಿದೆ.
ಪ್ರಧಾನಿ ಮೋದಿ ಅವರನ್ನು ವಾಂಗ್ ಯಿ ಮಂಗಳವಾರ ಸಂಜೆ 5.30ಕ್ಕೆ ಭೇಟಿಯಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಈ ವಾರವೇ ಪಾಕಿಸ್ತಾನಕ್ಕೆ ಭೇಟಿ
ಇಸ್ಲಾಮಾಬಾದ್: ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಇದೇ ವಾರದಲ್ಲಿ ಇಸ್ಲಾಮಾಬಾದ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಉಭಯ ರಾಷ್ಟ್ರಗಳ ನಡುವೆ ನಾಗರಿಕ ಹಾಗೂ ಸೇನಾ ನಾಯಕತ್ವ ದ್ವಿಪಕ್ಷೀಯ ಒಪ್ಪಂದ ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಲಿದ್ದಾರೆ.
‘ಆಗಸ್ಟ್ 21ರಂದು ಇಸ್ಲಾಮಾಬಾದ್‌ಗೆ ಬಂದಿಳಿಯಲಿದ್ದು ಎರಡು ದಿನಗಳ ಕಾಲ ಬಹುಮುಖ್ಯವಾದ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ’ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ನ್ಯೂಸ್‌ಪೇಪರ್ ವರದಿ ಮಾಡಿದೆ.
ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸುವ ಸಂಬಂಧ ಈ ತಿಂಗಳ ಅಂತ್ಯದಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಚೀನಾಕ್ಕೆ ಭೇಟಿ ನೀಡಲಿದ್ದಾರೆ. ವಾಂಗ್ ಯಿ ಭೇಟಿ ವೇಳೆ ಈ ಪ್ರವಾಸದ ಕಾರ್ಯಸೂಚಿಯನ್ನು ಅಂತಿಮಗೊಳಿಸಲಿದ್ದಾರೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.