ADVERTISEMENT

ಲಡಾಖ್‌ನಲ್ಲಿ ಉಭಯ ಸೇನೆ ಹಿಂತೆಗೆತ ಶುರು

ಉಭಯ ಸೇನೆಗಳ ಮಾತುಕತೆಯ ನಿರ್ಧಾರದಂತೆ ಕ್ರಮ: ಚೀನಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 16:41 IST
Last Updated 10 ಫೆಬ್ರುವರಿ 2021, 16:41 IST
ಭಾರತ–ಚೀನಾ ಪಡೆಗಳ ನಡುವೆ ಘರ್ಷಣೆ ನಡೆದಿದ್ದ ಗಾಲ್ವನ್ ಕಣಿವೆಯ ಉಪಗ್ರಹ ಚಿತ್ರ–ಸಂಗ್ರಹ ಚಿತ್ರ
ಭಾರತ–ಚೀನಾ ಪಡೆಗಳ ನಡುವೆ ಘರ್ಷಣೆ ನಡೆದಿದ್ದ ಗಾಲ್ವನ್ ಕಣಿವೆಯ ಉಪಗ್ರಹ ಚಿತ್ರ–ಸಂಗ್ರಹ ಚಿತ್ರ   

ಬೀಜಿಂಗ್/ನವದೆಹಲಿ: ‘ಸೇನಾ ಮಾತುಕತೆಯ ಒಪ್ಪಂದದ ಭಾಗವಾಗಿ, ಚೀನಾ ಹಾಗೂ ಭಾರತೀಯ ಪಡೆಗಳು ಪ್ಯಾಂಗೊಂಗ್ ಸರೋವರ ಪ್ರದೇಶದಲ್ಲಿ ಏಕಕಾಲದಲ್ಲಿ ಮತ್ತು ವ್ಯವಸ್ಥಿತ ವಾಗಿ ಸೇನೆಯನ್ನು ಹಿಂಪಡೆದುಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿವೆ’ ಎಂದು ಚೀನಾದ ರಕ್ಷಣಾ ಸಚಿವಾಲಯ ಹೇಳಿದೆ.

9ನೇ ಸುತ್ತಿನ ಮಿಲಿಟರಿ ಕಮಾಂಡರ್ ಮಟ್ಟದ ಮಾತುಕತೆಯ ಸಂದರ್ಭದಲ್ಲಿ ತಲುಪಿದ ಒಮ್ಮತದ ಪ್ರಕಾರ, ಚೀನಾ ಮತ್ತು ಭಾರತೀಯ ಗಡಿ ಪಡೆಗಳು ಬುಧವಾರ ಹಿಂದಕ್ಕೆ ಸರಿಯಲು ಪ್ರಾರಂಭಿಸಿದವು ಎಂದು ಚೀನಾದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಸರ್ಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಚೀನಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ವು ಕಿಯಾನ್ ನೀಡಿದ ಹೇಳಿಕೆಗೆ ಭಾರತದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಚೀನಾ ಮತ್ತು ಭಾರತದ ಸೇನೆಗಳು ಕಳೆದ ವರ್ಷದ ಮೇ ಆರಂಭದಿಂದ ಪೂರ್ವ ಲಡಾಖ್‌ನಲ್ಲಿ ಜಮಾವಣೆಗೊಂಡ ಕಾರಣ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಸೇನಾ ಮುಖಾಮುಖಿ ತಪ್ಪಿಸಲು ಉಭಯ ದೇಶಗಳು ಹಲವಾರು ಸುತ್ತಿನ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಗಳನ್ನು ನಡೆಸಿವೆ.

ADVERTISEMENT

ಜನವರಿ 24ರಂದು, 9ನೇ ಸುತ್ತಿನ ಚೀನಾ-ಭಾರತದ ಕಮಾಂಡರ್ ಮಟ್ಟದ ಸಭೆ ಚೀನಾದ ಮೊಲ್ಡೊ-ಚುಶುಲ್ ಗಡಿಯಲ್ಲಿ ನಡೆದಿತ್ತು. ಸಕಾರಾತ್ಮಕ, ಪ್ರಾಯೋಗಿಕ ಮತ್ತು ರಚನಾತ್ಮಕವಾಗಿದ್ದ ಮಾತುಕತೆಯಲ್ಲಿ ಮುಂಚೂಣಿ ನೆಲೆಗಳಿಂದ ಸೈನ್ಯವನ್ನು ಶೀಘ್ರವಾಗಿ ವಾಪಸ್‌ ಕರೆಸಿಕೊಳ್ಳಲು ಎರಡೂ ಕಡೆಯವರು ಒಪ್ಪಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.