ADVERTISEMENT

ದೇಶದ 75 ಪ್ರಮುಖ ಸ್ಥಳಗಳಲ್ಲಿ ಯೋಗ ದಿನ ಆಚರಣೆ: ಪ್ರಧಾನಿ ನರೇಂದ್ರ ಮೋದಿ

ಪಿಟಿಐ
Published 29 ಮೇ 2022, 14:36 IST
Last Updated 29 ಮೇ 2022, 14:36 IST
   

ನವದೆಹಲಿ: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ದೇಶದ 75 ಪ್ರಮುಖ ಸ್ಥಳಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್'ನಲ್ಲಿ ಹೇಳಿದ್ದಾರೆ.

ಜೂನ್‌ 21 ರಂದು 8ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ‘ಮಾನವೀಯತೆಗೆ ಯೋಗ’ ಎಂಬ ವಿಷಯದಲ್ಲಿ ಆಚರಿಸಲಾಗುವುದು. ಜನರು ಉತ್ಸಾಹದಿಂದ ಪಾಲ್ಗೊಳ್ಳಬೇಕು ಮತ್ತು ಕೋವಿಡ್‌ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದೂ ಹೇಳಿದ್ದಾರೆ.

ಕೋವಿಡ್‌ ಸಾಂಕ್ರಾಮಿಕವು ಜನರು ಆರೋಗ್ಯದ ಮಹತ್ವವನ್ನು ಅರಿತುಕೊಳ್ಳುವಂತೆ ಮಾಡಿದೆ. ಯೋಗದ ಮೂಲಕ ದೈಹಿಕ, ಆಧ್ಯಾತ್ಮಿಕ ಮತ್ತು ಬೌದ್ಧಿಕ ಯೋಗಕ್ಷೇಮ ಎಷ್ಟರಮಟ್ಟಿಗೆ ವೃದ್ಧಿಯಾಗುತ್ತಿದೆ ಎಂಬುದನ್ನು ಜನರು ಅರಿತುಕೊಂಡಿದ್ದಾರೆ.ವಿಶ್ವದಾದ್ಯಂತ ಯೋಗಕ್ಕೆ ಸಿಗುತ್ತಿರುವ ಜನಪ್ರಿಯತೆಗೆ ಸಾಕ್ಷಿಯಾಗುತ್ತಿರುವುದು ನಿಮಗೆ ಸಂತೋಷ ತರಲಿದೆ ಎಂಬುದು ನನ್ನ ವಿಶ್ವಾಸ ಎಂದು ಮೋದಿ ತಿಳಿಸಿದ್ದಾರೆ.

‘ಶಾಂತಿಗಾಗಿ ಮನವಿ ಮಾಡಿ’:ದೇಶದಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿ ಬಿಜೆಪಿಯನ್ನು ಭಾನುವಾರ ಟೀಕಿಸಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್, ‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್‌ ಕಿ ಬಾತ್‌’ನಲ್ಲಿ ಶಾಂತಿಗಾಗಿ ಮನವಿ ಮಾಡಬೇಕು’ ಎಂದು ಕಾರ್ಯಕ್ರಮ ಪ್ರಸಾರವಾಗುವುದಕ್ಕೆ ಮುನ್ನ ಕೋರಿದ್ದರು.

‘ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರೇ, ಎಲ್ಲಾ ವಿರೋಧ ಪಕ್ಷಗಳ ನಾಯಕರು, ಬುದ್ಧಿಜೀವಿಗಳು, ಪತ್ರಕರ್ತರು, ಬರಹಗಾರರು ಮತ್ತು ಶಾಂತಿಯುತ ಜೀವನ ನಡೆಸಲು ಬಯಸುವ ನಾಗರಿಕರು ದೇಶದಾದ್ಯಂತ ಇರುವ ಉದ್ವಿಗ್ನ ವಾತಾವರಣದ ನಡುವೆ ‘ಮನ್‌ ಕಿ ಬಾತ್‌’ನಲ್ಲಿ ಶಾಂತಿಗಾಗಿ ಮನವಿ ಮಾಡಲು ತಮ್ಮಲ್ಲಿ ಮನವಿ ಮಾಡುತ್ತಿದ್ದಾರೆ’ ಎಂದು ಗೆಹಲೋತ್ ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.