ಬಿಲಾಸ್ಪುರ(ಛತ್ತೀಸಗಢ): ಮಾನವ ಕಳ್ಳಸಾಗಣೆ, ಬಲವಂತದ ಮತಾಂತರದ ಆರೋಪದಲ್ಲಿ ಬಂಧನಕ್ಕೀಡಾಗಿದ್ದ ಇಬ್ಬರು ಸನ್ಯಾಸಿನಿಯರು ಸೇರಿದಂತೆ ಮೂವರಿಗೆ ಛತ್ತೀಸಗಢದ ಬಿಲಾಸ್‌ಪುರ ಜಿಲ್ಲಾ ವಿಶೇಷ ನ್ಯಾಯಾಲಯವು ಶನಿವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
₹50000 ಬಾಂಡ್‌ನೊಂದಿಗೆ ಇಬ್ಬರು ಸಾಕ್ಷಿದಾರರಿಂದ ಶ್ಯೂರಿಟಿ ಪಡೆದ ನ್ಯಾಯಾಲಯವು, ಸನ್ಯಾಸಿನಿಯರು ಹಾಗೂ ಮತ್ತೊಬ್ಬ ವ್ಯಕ್ತಿ ದೇಶ ತೊರೆಯದಂತೆ ಮತ್ತು ಅವರ ಪಾಸ್‌ಪೋರ್ಟ್‌ಗಳನ್ನು ಒಪ್ಪಿಸುವಂತೆ ಷರತ್ತು ವಿಧಿಸಿದೆ.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿರಾಜುದ್ದೀನ್ ಖುರೇಷಿ ಅವರು, ಕೇರಳದ ಕ್ಯಾಥೋಲಿಕ್ ಸನ್ಯಾಸಿನಿಯರಾದ ಪ್ರೀತಿ ಮೇರಿ, ವಂದನಾ ಫ್ರಾನ್ಸಿಸ್ ಹಾಗೂ ಸುಕಮಾನ್ ಮಾಂಡವಿ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ಪ್ರಕರಣವೇನು?
ನಾರಾಯಣಪುರದಿಂದ ಮೂವರು ಬಾಲಕಿಯರನ್ನು ಬಲವಂತರವಾಗಿ ಮತಾಂತರಿಸಿ ಕಳ್ಳಸಾಗಾಣಿಕೆ ಮಾಡುತ್ತಿದ್ದ ಆರೋಪದ ಮೇಲೆ ಸ್ಥಳೀಯ ಬಜರಂಗದಳದ ಕಾರ್ಯಕರ್ತರು ನೀಡಿದ ದೂರಿನ ಅನ್ವಯ ಸರ್ಕಾರಿ ರೈಲ್ವೇ ಪೊಲೀಸರು ಜುಲೈ 25ರಂದು ದುರ್ಗ್ ರೈಲು ನಿಲ್ದಾಣದ ಬಳಿ ಸನ್ಯಾಸಿನಿಯರನ್ನು ಬಂಧಿಸಿದ್ದರು.
ಕ್ರೈಸ್ತ ಸನ್ಯಾಸಿನಿಯರ ಬಂಧನ ಖಂಡಿಸಿದ ವಿರೋಧ ಪಕ್ಷದ ನಾಯಕರು, ಬಿಜೆಪಿಯ ದ್ವೇಷದ ಕ್ರಮ ಎಂದು ಆರೋಪಿಸಿದ್ದರು. ಮುಂಗಾರು ಅಧಿವೇಶನದ ವೇಳೆ ಸಂಸತ್ ಆವರಣದಲ್ಲಿ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.