
ಮುಂಬೈ: ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿರುವ ಮುಂಬೈನಲ್ಲಿ ಪ್ರಿಂಟಿಂಗ್ ಆಕ್ಸಿಲರಿ ಡಿಸ್‌ಪ್ಲೇ ಘಟಕ (ಇವಿಎಂನಲ್ಲಿ ಸಮಸ್ಯೆಯಾದಾಗ ಬಳಸುವ ಸಾಧನ) ಖರೀದಿಯು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ 140 ಪ್ರಿಂಟಿಂಗ್ ಆಕ್ಸಿಲರಿ ಡಿಸ್‌ಪ್ಲೇ ಘಟಕಗಳನ್ನು (ಪಿಎಡಿಯು) ಬೃಹನ್ ಮುಂಬೈ ನಗರ ಪಾಲಿಕೆಯು ಖರೀದಿಸಿದೆ. ಒಟ್ಟು 29 ಪಾಲಿಕೆಗಳಲ್ಲಿ ಮುಂಬೈನಲ್ಲಿ ಮಾತ್ರ ಪಿಎಡಿಯು ಬಳಕೆ ಮಾಡಲಾಗುತ್ತಿದೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ, ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್, ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಈ ವಿಚಾರವಾಗಿ ರಾಜ್ಯ ಚುನಾವಣಾ ಆಯೋಗ ಮತ್ತು ನಗರ ಪಾಲಿಕೆಯನ್ನು ಪ್ರಶ್ನಿಸಿದೆ.
ಪಿಎಡಿಯು ಬಳಸುವ ಬಗ್ಗೆ ಸ್ಪಷ್ಟನೆ ನೀಡುವಂತೆ ಉದ್ಧವ್ ಠಾಕ್ರೆ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
‘ಇವಿಎಂಗೆ ಜೊತೆಗೆ ಬೇರೆ ಸಾಧನವನ್ನು ಬಳಸುವ ಬಗ್ಗೆ ಮೊದಲೇ ಯಾಕೆ ಮಾಹಿತಿ ನೀಡಿಲ್ಲ. ಏನು ನಡೆಯುತ್ತಿದೆ? ಯಾವ ರೀತಿಯ ಪ್ರಜಾಪ್ರಭುತ್ವವಿದು’ ಎಂದು ಉದ್ಧವ್ ಮತ್ತು ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.
‘ಪಿಎಡಿಎ ಸಾಧನವನ್ನು ಬಳಕೆಯನ್ನು ಆಯೋಗ ಕೈಬಿಡಬೇಕು. ಇವಿಎಂನಲ್ಲಿ ಸಮಸ್ಯೆಯಾದರೆ ಚುನಾವಣೆ ಅನೂರ್ಜಿತವಾಗುತ್ತದೆ’ ಎಂದು ಎಎಪಿ ಮುಂಬೈ ಘಟಕದ ಅಧ್ಯಕ್ಷೆ ಪ್ರೀತಿ ಶರ್ಮಾ ಮೆನನ್ ಹೇಳಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಾಲಿಕೆ ಆಯುಕ್ತ ಭೂಷಣ್ ಗಗರಣಿ ಅವರು, ‘ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಪಿಡಿಎಯು ಬಳಕೆ ಮಾಡಲಾಗುತ್ತದೆ. ಮೊದಲ ಬಾರಿಗೆ ಅದನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ. ಒಂದು ವೇಳೆ ಇವಿಎಂನ ಡಿಸ್‌ಪ್ಲೇ’ ಸ್ಥಗಿತಗೊಂಡರೆ. ಪಿಎಡಿಯು ಅನ್ನು ಬಳಸಿಕೊಂಡು ಮತ ಎಣಿಕೆ ಮಾಡಲಾಗುತ್ತದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.