ಭೋಪಾಲ್: ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ‘ಆಪರೇಷನ್ ಸಿಂಧೂರ’ ಯಶಸ್ಸಿನ ಲಾಭ ಪಡೆಯುವ ಸಮಾವೇಶಗಳ ಪೈಪೋಟಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇ 31ರಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮಹಿಳಾ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅದೇ ದಿನ ಜಬಲ್‌ಪುರದಲ್ಲಿ ಕಾಂಗ್ರೆಸ್ ಕೂಡ ‘ಜೈ ಹಿಂದ್ ಸಭಾ’ ಹೆಸರಿನಲ್ಲಿ ರ್‍ಯಾಲಿ ಹಮ್ಮಿಕೊಂಡಿದೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಮತ್ತು ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸೇರಿ ಹಲವು ನಾಯಕರು ಜಬಲ್‌ಪುರದ ರ್‍ಯಾಲಿಯಲ್ಲಿ ಭಾಗಿಯಾಗಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಅಭಿನವ್ ಬರೋಲಿಯಾ ತಿಳಿಸಿದ್ದಾರೆ.
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿದ ಭಾರತೀಯ ಯೋಧರ ಶೌರ್ಯ ಶ್ಲಾಘಿಸಿ ಬಿಜೆಪಿ ನಡೆಸುತ್ತಿರುವ ‘ತಿರಂಗಾ ಯಾತ್ರೆ’ಗೆ ಪ್ರತಿಯಾಗಿ ಕಾಂಗ್ರೆಸ್ ‘ಜೈ ಹಿಂದ್ ಸಭಾ’ ನಡೆಸುತ್ತಿದೆ.
‘ಸೇನಾ ವ್ಯವಸ್ಥೆಗಳು ಮತ್ತು ರಕ್ಷಣಾ ಕ್ಷೇತ್ರದ ಕಾರ್ಖಾನೆಗಳ ಪ್ರಮುಖ ಕೇಂದ್ರ ಜಬಲ್‌ಪುರ. ಪಾಕಿಸ್ತಾನಕ್ಕೆ ನಾಲ್ಕು ದಿನಗಳಲ್ಲೇ ಮಣ್ಣು ಮುಕ್ಕಿಸುವಲ್ಲಿ ಇಲ್ಲಿನ ಅಸ್ತ್ರಗಳೂ ಬಳಕೆಯಾಗಿವೆ. ಹೀಗಾಗಿ ಜಬಲ್‌ಪುರದಲ್ಲಿ ರ್‍ಯಾಲಿ ನಡೆಸುತ್ತಿದ್ದೇವೆ’ ಎಂದು ಬರೋಲಿಯಾ ತಿಳಿಸಿದ್ದಾರೆ.
ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ್ ದೇವಡಾ, ಸಚಿವ ವಿಜಯ್ ಶಾ ಮತ್ತು ಬಿಜೆಪಿ ಶಾಸಕ ನರೇಂದ್ರ ಪ್ರಜಾಪತಿ ‘ಆಪರೇಷನ್ ಸಿಂಧೂರ’ ಕುರಿತಂತೆ ನೀಡಿದ ವಿವಾದಿತ ಹೇಳಿಕೆಗಳನ್ನು ಪ್ರಧಾನಿ ಖಂಡಿಸದೆ ಮೌನ ವಹಿಸಿದ್ದಾರೆ ಎಂಬ ಅಂಶವನ್ನೇ ರ್‍ಯಾಲಿಯಲ್ಲಿ ಪ್ರಮುಖ ಅಸ್ತ್ರ ಮಾಡಿಕೊಳ್ಳಲು ಕಾಂಗ್ರೆಸ್ ಸಜ್ಜಾಗಿದೆ ಎಂದು ಬರೋಲಿಯಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.