ADVERTISEMENT

ಗೋವಾದಲ್ಲಿ ನಾಲ್ಕು ದಿನ ಲಾಕ್‌ಡೌನ್‌: ಮುಖ್ಯಮಂತ್ರಿ ನಿರ್ಧಾರ

ಪಿಟಿಐ
Published 28 ಏಪ್ರಿಲ್ 2021, 10:25 IST
Last Updated 28 ಏಪ್ರಿಲ್ 2021, 10:25 IST
ಪ್ರಮೋದ್ ಸಾವಂತ್
ಪ್ರಮೋದ್ ಸಾವಂತ್   

ಪಣಜಿ: ‘ಏಪ್ರಿಲ್ 29 ರಿಂದ ಮೇ 3 ರವರೆಗೆ ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಗೊಳಿಸಲು ನಿರ್ಧರಿಸಲಾಗಿದೆ’ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ತಿಳಿಸಿದ್ಧಾರೆ.

ಮಾಧ್ಯಮದವರಿಗೆ ಪತ್ರಿಕ್ರಿಯಿಸಿದ ಅವರು, ‘ಲಾಕ್‌ಡೌನ್‌ ವೇಳೆಯಲ್ಲಿ ಅಗತ್ಯ ಸೇವೆಗಳು ಮತ್ತು ಕೈಗಾರಿಕೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಆದರೆ ಸಾರ್ವಜನಿಕ ಸಾರಿಗೆಗಳು ಇರುವುದಿಲ್ಲ’ ಎಂದು ಹೇಳಿದರು.

‘ಕೊರೊನಾ ಸೋಂಕಿನ ಸರಪಳಿಯನ್ನು ಮುರಿಯುವ ನಿಟ್ಟಿನಲ್ಲಿ ಲಾಕ್‌ಡೌನ್‌ ಹೇರಲಾಗುತ್ತಿದ್ದು, ಇದು ಗುರುವಾರ ಸಂಜೆಯಿಂದ ಸೋಮವಾರ ಮುಂಜಾನೆ ತನಕ ಜಾರಿಯಲ್ಲಿ ಇರಲಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ಲಾಕ್‌ಡೌನ್‌ ಸಂದರ್ಭದಲ್ಲಿ ವಾರದ ಸಂತೆಗೆ ನಿರ್ಬಂಧ ವಿಧಿಸಲಾಗಿದೆ. ಕ್ಯಾಸಿನೋಗಳು ಕೂಡ ಮುಚ್ಚಿರಲಿವೆ. ಆದರೆ ಕೈಗಾರಿಕೆಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಈ ಲಾಕ್‌ಡೌನ್‌ ಸೋಮವಾರ ಬೆಳಿಗ್ಗೆ ಅಂತ್ಯವಾಗಲಿದೆ. ವ್ಯವಹಾರಗಳು ಮೊದಲಿನಂತೆ ಪುನರಾರಂಭಗೊಳ್ಳಲಿದೆ. ಹಾಗಾಗಿ ಕಾರ್ಮಿಕರು ಚಿಂತಿಸುವ ಅಗತ್ಯವಿಲ್ಲ’ ಎಂದು ಅವರು ತಿಳಿಸಿದರು.

ಗೋವಾದಲ್ಲಿ ಮಂಗಳವಾರ 2,110 ಹೊಸ ಪ್ರಕರಣಗಳು ವರದಿಯಾಗಿದ್ದು, 31 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 81,908 ಮತ್ತು ಮೃತರ ಸಂಖ್ಯೆ 1,086ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.