ADVERTISEMENT

ಕೇಂದ್ರ ಬಿಜೆಪಿ ನಾಯಕರೊಂದಿಗೆ ಮುನಿಸು: ವರದಿ ತಳ್ಳಿಹಾಕಿದ CM ಯೋಗಿ ಆದಿತ್ಯನಾಥ್

ಪಿಟಿಐ
Published 1 ಏಪ್ರಿಲ್ 2025, 12:40 IST
Last Updated 1 ಏಪ್ರಿಲ್ 2025, 12:40 IST
<div class="paragraphs"><p>ಯೋಗಿ ಆದಿತ್ಯನಾಥ್</p></div>

ಯೋಗಿ ಆದಿತ್ಯನಾಥ್

   

ಲಖನೌ: ‘ಬಿಜೆಪಿಯಿಂದಾಗಿ ಇಂದು ನಾನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದೇನೆ. ಪಕ್ಷದ ಕೇಂದ್ರದ ನಾಯಕರ ವಿರುದ್ಧ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪಷ್ಟಪಡಿಸಿದ್ದಾರೆ.

ಮುಂದಿನ ಪ್ರಧಾನಿಯಾಗುವಿರೆಂದು ಹಲವರು ಮಾತನಾಡುತ್ತಿರುವ ಕುರಿತು ಕೇಳಿದ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ರಾಜಕೀಯ ನನ್ನ ಪೂರ್ಣ ಪ್ರಮಾಣದ ವೃತ್ತಿಯಲ್ಲ. ಯೋಗಿ ಸದಾ ಹೃದಯದಲ್ಲಿರಲು ಬಯಸುವವ’ ಎಂದಿದ್ದಾರೆ.

ADVERTISEMENT

‘ಕೇಂದ್ರದ ನಾಯಕರೊಂದಿಗೆ ಭಿನ್ನಾಭಿಪ್ರಾಯ ಇಟ್ಟುಕೊಂಡು ಈ ಕುರ್ಚಿಯಲ್ಲಿ ಕೂತಿರಲು ಸಾಧ್ಯವೇ? ಹಾಗೆಂದ ಮಾತ್ರಕ್ಕೆ ಇಂಥ ವದಂತಿ ಹರಡುವವರ ಬಾಯಿ ಮುಚ್ಚಿಸಲು ಹೋಗುವುದಿಲ್ಲ’ ಎಂದಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವು ನಿಮ್ಮ ಬೆಂಬಲಕ್ಕೆ ನಿಲ್ಲಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಭಾರತಕ್ಕೆ ಬದ್ಧರಾಗಿರುವ ಯಾರೇ ಆಗಿರಲಿ, ಹಿಂದುತ್ವ ಸಂಘಟನೆಗಳು ಅವರನ್ನು ಖಂಡಿತವಾಗಿಯೂ ಬೆಂಬಲಿಸುತ್ತದೆ. ನನ್ನ ಮೊದಲ ಕರ್ತವ್ಯ ಪಕ್ಷ ನನಗೆ ಕೊಟ್ಟ ಜವಾಬ್ದಾರಿಯಾದ ಉತ್ತರ ಪ್ರದೇಶ ಜನರ ಕೆಲಸ ಮಾಡುವುದರಲ್ಲಿ ನಾನು ನಿರತನಾಗಿದ್ದೇನೆ’ ಎಂದಿದ್ದಾರೆ.

ಧರ್ಮ ಮತ್ತು ರಾಜಕೀಯ ನಡುವಿನ ವ್ಯತ್ಯಾಸ ಕುರಿತು ಮಾತನಾಡಿರುವ ಯೋಗಿ ಆದಿತ್ಯನಾಥ್, ‘ಕೆಲ ಸ್ಥಳಗಳಿಗೆ ಧರ್ಮವನ್ನೂ, ಕೆಲ ಜನರಿಗೆ ಮಾತ್ರ ರಾಜಕೀಯವನ್ನೂ ಸೀಮಿತಗೊಳಿಸಿದ್ದೇವೆ. ಇದು ಸಮಸ್ಯೆಗೆ ಕಾರಣವಾಗಿದೆ. ತಮ್ಮ ವೈಯಕ್ತಿಕ ಅಭಿಲಾಷೆಗೆ ರಾಜಕೀಯಕ್ಕೆ ಬಂದರೆ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಸರ್ವ ಜನರ ಹಿತಕ್ಕಾಗಿ ರಾಜಕೀಯ ಆಯ್ದುಕೊಂಡರೆ, ಎಲ್ಲಾ ಸಮಸ್ಯೆಗೂ ಪರಿಹಾರ ದೊರಕಲಿದೆ. ಆಯ್ಕೆ ನಮ್ಮದು. ಧರ್ಮ ಕಲಿಸುವುದೂ ಇದನ್ನೇ’ ಎಂದಿದ್ದಾರೆ.

‘ನನಗೆ ನನ್ನ ರಾಷ್ಟ್ರದ ಹಿತವೇ ಮುಖ್ಯ. ರಾಷ್ಟ್ರ ಸುರಕ್ಷಿತವಾಗಿದ್ದರೆ, ಧರ್ಮವೂ ಸುರಕ್ಷಿತವಾಗಿರಲಿದೆ. ಧರ್ಮ ಸುರಕ್ಷಿತವಾಗಿದ್ದರೆ, ಕಲ್ಯಾಣ ಕಾರ್ಯಗಳು ಸಹಜವಾಗಿ ನಡೆಯುತ್ತಲಿರುತ್ತವೆ’ ಎಂದು ಯೋಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.