ADVERTISEMENT

ಕೃಷಿ ಕಾಯ್ದೆ ರದ್ದು: ರೈತರ ಪರವಾಗಿ ನಾಳೆ ಕಾಂಗ್ರೆಸ್‌ನಿಂದ ‘ರೈತ ವಿಜಯ ದಿನ’

ಪಿಟಿಐ
Published 19 ನವೆಂಬರ್ 2021, 16:13 IST
Last Updated 19 ನವೆಂಬರ್ 2021, 16:13 IST
ಕೃಷಿ ಕಾಯ್ದೆ ವಿರೋಧಿ ಕಾಂಗ್ರೆಸ್‌ ನಡೆಸಿದ್ದ ಪ್ರತಿಭಟನೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಅಧೀರ್‌ ರಂಜನ್‌ ಚೌಧರಿ ಮತ್ತಿತರರು
ಕೃಷಿ ಕಾಯ್ದೆ ವಿರೋಧಿ ಕಾಂಗ್ರೆಸ್‌ ನಡೆಸಿದ್ದ ಪ್ರತಿಭಟನೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಅಧೀರ್‌ ರಂಜನ್‌ ಚೌಧರಿ ಮತ್ತಿತರರು    

ನವದೆಹಲಿ: ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ ಅಂಗವಾಗಿ ನಾಳೆ (ನ. 20) ದೇಶದಾದ್ಯಂತ 'ರೈತ ವಿಜಯ ದಿನ (ಕಿಸಾನ್‌ ವಿಜಯ್‌ ದಿವಸ್‌)' ಆಚರಿಸಲು ಕಾಂಗ್ರೆಸ್ ನಿರ್ಧರಿಸಿದೆ. ರೈತರ ಪರವಾಗಿ ಕಾಂಗ್ರೆಸ್‌ ವಿಜಯೋತ್ಸವ ಆಚರಿಸಲಿದೆ.

ಚಳವಳಿಯ ವೇಳೆ ಮೃತಪಟ್ಟಿದ್ದ 700 ಕ್ಕೂ ಹೆಚ್ಚು ರೈತರ ಕುಟುಂಬಗಳನ್ನು ವಿಜಯೋತ್ಸವದ ದಿನ ಭೇಟಿ ಮಾಡಲಿರುವ ಕಾಂಗ್ರೆಸ್‌ ನಾಯಕರು ಅಗಲಿದವರ ಆತ್ಮಕ್ಕೆ ಶಾಂತಿ ಕೋರಲು ಮೋಂಬತ್ತಿ ಮೆರವಣಿಗೆಗಳನ್ನೂ ನಡೆಸಲಿದ್ದಾರೆ.

ರಾಜ್ಯ, ಜಿಲ್ಲೆ ಮತ್ತು ಬ್ಲಾಕ್ ಮಟ್ಟದಲ್ಲಿ ಇಂತಹ ರ್‍ಯಾಲಿಗಳು ಮತ್ತು ಮೋಂಬತ್ತಿ ಮೆರವಣಿಗೆ ಆಯೋಜಿಸುವಂತೆ ಎಲ್ಲಾ ರಾಜ್ಯ ಘಟಕಗಳಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ಸೂಚಿಸಿದ್ದಾರೆ.

ADVERTISEMENT

ಇಂದು (ಶುಕ್ರವಾರ) ಬೆಳಿಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಮೂರೂ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ನಿರ್ಧರಿಸಿರುವುದಾಗಿ ಘೋಷಿಸಿದ್ದರು. ಸುಮಾರು ಒಂದು ವರ್ಷದಿಂದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯ ಗಡಿ ಭಾಗಗಳಲ್ಲಿ ಹೋರಾಟ ನಡೆಸುತ್ತಿದ್ದು, ಕೊನೆಗೂ ಕೇಂದ್ರ ಸರ್ಕಾರವು ಕಾಯ್ದೆಗಳ ರದ್ದತಿ ನಿರ್ಧಾರ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.