
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೇ ‘ದೊಡ್ಡ ನಾಟಕಕಾರ’ ಎಂದು ಕಾಂಗ್ರೆಸ್ ಹರಿಹಾಯ್ದಿದೆ.
‘ಸಂಸತ್ತಿನಲ್ಲಿ ವಿರೋಧ ಪಕ್ಷಗಳು ನಾಟಕ ಮಾಡುತ್ತಿವೆ ಎಂಬ ಅವರ ಆರೋಪವು ‘ಬೂಟಾಟಿಕೆ’ಯಲ್ಲದೆ ಮತ್ತೇನೂ ಅಲ್ಲ’ ಎಂದು ಅದು ಕಿಡಿಕಾರಿದೆ.
‘ಪ್ರಧಾನಿ ಮೋದಿ ಅವರು ನೈಜ ವಿಚಾರಗಳ ಬಗ್ಗೆ ಧ್ವನಿ ಎತ್ತುವುದನ್ನು ಬಿಟ್ಟು, ಮತ್ತೆ ಅದೇ ರೀತಿ ಹಳೆಯ ನಾಟಕದ ಮಾತುಗಳನ್ನಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಎಕ್ಸ್’ನಲ್ಲಿ ಆರೋಪಿಸಿದರು. ‘ಸರ್ಕಾರವು ಕಳೆದ 11 ವರ್ಷಗಳಿಂದ ನಿರಂತರವಾಗಿ ಸಂಸದೀಯ ಶಿಷ್ಟಾಚಾರ ಮತ್ತು ವ್ಯವಸ್ಥೆಯನ್ನು ಹಾಳುಮಾಡುತ್ತಿದೆ. ಇಂಥ ಪ್ರಕರಣಗಳ ಪಟ್ಟಿಯೇ ಇದೆ’ ಎಂದು ಹೇಳಿದರು.
‘ಜನರ ಗಮನವನ್ನು ಬೇರೆಡೆ ಸೆಳೆಯುವ ನಾಟಕವನ್ನು ಬಿಜೆಪಿಯು ನಿಲ್ಲಿಸಬೇಕು. ನೈಜ ವಿಚಾರಗಳ ಕುರಿತು ಸಂಸತ್‌ನಲ್ಲಿ ಚರ್ಚೆ ನಡೆಸುವ ಮೂಲಕ ಜನರನ್ನು ಎದುರಿಸಬೇಕು’ ಎಂದರು.
‘ಕಳೆದ ಮುಂಗಾರು ಅಧಿವೇಶನ ದಲ್ಲಿ ಕನಿಷ್ಠ 12 ಮಸೂದೆಗಳನ್ನು ತರಾತುರಿಯಲ್ಲಿ ಅಂಗೀಕರಿಸಲಾಯಿತು. ಕೆಲವು ಮಸೂದೆಗಳ ಬಗ್ಗೆ ಚರ್ಚೆಯನ್ನೂ ನಡೆಸಿಲ್ಲ’ ಎಂದು ಹೇಳಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ‘ಸಾರ್ವಜನಿಕ ಮಹತ್ವ ಇರುವ ವಿಷಯಗಳ ಬಗ್ಗೆ ಧ್ವನಿ ಎತ್ತಲು ವಿರೋಧ ಪಕ್ಷಗಳಿಗೆ ಅವಕಾಶ ನೀಡದಿರುವ ಪ್ರಧಾನಿ ಅವರ ಹಟಮಾರಿತನದಿಂದಲೇ ಸುಗಮ ಕಲಾಪ ಸಾಧ್ಯವಾಗುತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.