ADVERTISEMENT

ಬುಲ್ಡೋಜರ್‌ನಾಥ ವಿಧ್ವಂಸಕ ಸರ್ಕಾರ: ಯೋಗಿ ವಿರುದ್ಧ ಕಾಂಗ್ರೆಸ್‌ ಆಕ್ರೋಶ

ಲಖನೌ: ಮಹಿಳಾ ಮ್ಯಾರಥಾನ್‌ಗೆ ಅವಕಾಶ ನೀಡದ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಪಿಟಿಐ
Published 27 ಡಿಸೆಂಬರ್ 2021, 2:49 IST
Last Updated 27 ಡಿಸೆಂಬರ್ 2021, 2:49 IST
ಯೋಗಿ ಆದಿತ್ಯನಾಥ್‌
ಯೋಗಿ ಆದಿತ್ಯನಾಥ್‌   

ಲಖನೌ: ಲಖನೌನಲ್ಲಿ ಕಾಂಗ್ರೆಸ್‌ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ‘ಲಡಕೀ ಹೂ, ಲಡ್‌ ಸಕತೀ ಹೂ’ (ನಾನು ಹುಡುಗಿ, ಹೋರಾಡಬಲ್ಲೆ) ಮಹಿಳಾ ಮ್ಯಾರಥಾನ್‌ ಅನ್ನು ನಡೆಸಲು ಲಖನೌ ಪೊಲೀಸರು ಅನುಮತಿ ನಿರಕಾರಿಸಿದ್ದಾರೆ. ಈ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಿರುವ ಉತ್ತರ ಪ್ರದೇಶ ಕಾಂಗ್ರೆಸ್‌ ಘಟಕವು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ‘ಬುಲ್ಡೋಜರ್‌ನಾಥ್’ ಎಂದು ಹೀಯಾಳಿಸಿದೆ.

ಆದರೆ ಝಾನ್ಸಿಯಲ್ಲಿ ಕರೆನೀಡಿದ್ದ ಮ್ಯಾರಥಾನ್‌ನಲ್ಲಿ ಸಾವಿರಾರು ಯುವತಿಯರು ಮತ್ತು ಮಹಿಳೆಯರು ಭಾಗಿಯಾಗಿದ್ದಾರೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ಮ್ಯಾರಥಾನ್‌ನ ವಿಡಿಯೊಗಳನ್ನು ಕಾಂಗ್ರೆಸ್‌ ಪಕ್ಷವು ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶ ಉಸ್ತುವಾರಿಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಹಿಳಾ ಸಬಲೀಕರಣವನ್ನು ಕೇಂದ್ರವಾಗಿಸಿಕೊಂಡು ರಾಜ್ಯದ ವಿಧಾನಸಭಾ ಚುನಾವಣೆಯ ಪ್ರಚಾರವನ್ನು ಮುನ್ನಡೆಸುತ್ತಿದ್ದಾರೆ. ಒಟ್ಟು ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ 40ರಷ್ಟು ಟಿಕೆಟ್‌ಗಳನ್ನು ಕಾಂಗ್ರೆಸ್‌ ಮೀಸಲಿರಿಸಿದೆ. ಇದರ ಭಾಗವಾಗಿ ಪ್ರಿಯಾಂಕಾ ಅವರು, ‘ಲಡಕೀ ಹೂ, ಲಡ್‌ ಸಕತೀ ಹೂ’ ಎಂಬ ಘೋಷಣೆಯನ್ನು ಮಾಡಿದ್ದರು. ಈ ಘೋಷಣೆಯನ್ನೇ ಈಗ ಪ್ರಚಾರದ ಪ್ರಮುಖ ಅಸ್ತ್ರವಾಗಿ ಕಾಂಗ್ರೆಸ್‌ ಬಳಸುತ್ತಿದೆ.

ADVERTISEMENT

ಮಹಿಳಾ ಕೇಂದ್ರಿತ ಪ್ರಚಾರದ ಭಾಗವಾಗಿಯೇ ಲಖನೌ ಮತ್ತು ಝಾನ್ಸಿಯಲ್ಲಿ 5 ಕಿ.ಮೀ.ಗಳ ಮಹಿಳಾ ಮ್ಯಾರಥಾನ್‌ ಅನ್ನು ಕಾಂಗ್ರೆಸ್‌ ಪಕ್ಷವುಭಾನುವಾರ ಆಯೋಜಿಸಿತ್ತು. ಆದರೆ ಲಖನೌನಲ್ಲಿ ಮ್ಯಾರಥಾನ್ ನಡೆಸಲು ಶನಿವಾರ ತಡರಾತ್ರಿ ಅನುಮತಿ ನಿರಾಕರಿಸಲಾಯಿತು. ಇದರ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಲಖನೌ ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಕಾರರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಲಾಯಿತು.

ಪೊಲೀಸರ ಈ ಕ್ರಮದ ವಿರುದ್ಧ ರಾಜ್ಯ ಕಾಂಗ್ರೆಸ್‌ ಘಟಕವು ಕಿಡಿಕಾರಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆಣತಿಯಂತೆಯೇ ಪೊಲೀಸರು ಹೀಗೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

‘ಈ ಬುಲ್ಡೋಜರ್‌ನಾಥ್ ನೇತೃತ್ವದ ವಿಧ್ವಂಸಕ ಸರ್ಕಾರವು ಯುವಜನರ ಕನಸುಗಳನ್ನು ಪದೇ ಪದೇ ತುಳಿಯುತ್ತಲೇ ಇದೆ. ಒಮ್ಮೆ ಪ್ರಶ್ನೆ ಪತ್ರಿಕೆ ಸೋರಿಕೆ ಮೂಲಕ, ಇನ್ನೊಮ್ಮೆ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಸದೇ ಇರುವ ಮೂಲಕ, ಮತ್ತೊಮ್ಮೆ ಅವರ ಮೇಲೆ ಬಲ ಪ್ರಯೋಗಿಸುವ ಮೂಲಕ ಯುವಜನರ ಕನಸುಗಳನ್ನು ಹತ್ತಿಕ್ಕುತ್ತಿದೆ. ಈ ಬಾರಿ ಯೋಗಿ ಅವರ ಮಹಿಳಾ ವಿರೋಧಿ ಬುಲ್ಡೋಜರ್‌, ಈ ಧೈರ್ಯಶಾಲಿ ಹೆಣ್ಣುಮಕ್ಕಳ
ಕನಸುಗಳ ಮೇಲೆ ಹರಿದಿದೆ’ ಎಂದು ಕಾಂಗ್ರೆಸ್‌ ಟ್ವೀಟ್ ಮಾಡಿದೆ.

‘ಯೋಗಿ ಆದಿತ್ಯನಾಥಜೀ, ನೀವು ಮಹಿಳೆಯರನ್ನು ನಿಯಂತ್ರಿಸುವ ಮಾತುಗಳನ್ನಾಡುವ ಮೂಲಕ
ಮಹಿಳೆಯರ ವಿರುದ್ಧವಿದ್ದೀರಿ. ಈ ಕಾರಣದಿಂದಲೇ ಲಖನೌನಲ್ಲಿ ಮಹಿಳೆಯರು ಭಾಗಿಯಾಗಬೇಕಿದ್ದ ಮ್ಯಾರಥಾನ್‌ ನಡೆಯಲು ನೀವು ಬಿಡಲಿಲ್ಲ. ಆದರೆ ನಿಮ್ಮ ಈ ದಬ್ಬಾಳಿಕೆಯನ್ನು ಸಹಿಸಿಕೊಳ್ಳುವುದಿಲ್ಲ ಮತ್ತು ತಮ್ಮ ಹಕ್ಕುಗಳಿಗಾಗಿ ಹೋರಾಡಿಯೇ ತೀರುತ್ತೇವೆ ಎಂಬ ಸಂದೇಶವನ್ನು ಝಾನ್ಸಿಯ ಯುವತಿಯರು ರವಾನಿಸಿದ್ದಾರೆ’ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

ಯೋಗಿ ಆದಿತ್ಯನಾಥ ಅವರು ಮಹಿಳೆಯರಿಗೆ ಹೆದರುತ್ತಿದ್ದಾರೆ. ಹೀಗಾಗಿಯೇ ಅವರು ಮ್ಯಾರಥಾನ್‌ಗೆ ಅನುಮತಿ ನೀಡಿಲ್ಲ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಇದರ ಭಾಗವಾಗಿ ಕಾಂಗ್ರೆಸ್‌ ಸಾಮಾಜಿಕ ಜಾಲತಾಣಗಳಲ್ಲಿ#ladki_se_darta_hai_Yogi ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಪೋಸ್ಟ್‌ ಮಾಡಿದೆ. ಈ ಹ್ಯಾಷ್‌ಟ್ಯಾಗ್ ಭಾನುವಾರ ಕೆಲವು ಗಂಟೆಗಳವರೆಗೆ ಟ್ವಿಟರ್ ಟ್ರೆಂಡ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.