ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ನವದೆಹಲಿ: ಮುಂದಿನ ಬಿಹಾರ ವಿಧಾನಸಭೆ ಚುನಾವಣೆಗೆ ತಂತ್ರ ರೂಪಿಸಲು ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ಸೆಪ್ಟೆಂಬರ್ 24ರಂದು ಪಟ್ನಾದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಇದು ವಿಸ್ತರಿತ ಸಿಡಬ್ಲ್ಯುಸಿ ಸಭೆಯಾಗಿರಲಿದ್ದು, ಶಾಶ್ವತ ಹಾಗೂ ವಿಶೇಷ ಆಹ್ವಾನಿತ ಪ್ರತಿನಿಧಿಗಳು, ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಭಾಗಿಯಾಗಲಿದ್ದಾರೆ.
ಈ ಸಭೆಯಲ್ಲಿ ಬಿಹಾರ ಚುನಾವಣೆ, ಪಕ್ಷದ ಪ್ರಚಾರ ಕಾರ್ಯ ವೈಖರಿ, ಭವಿಷ್ಯದ ಚುನಾವಣೆಗಳು ಹಾಗೂ ಮತಗಳ್ಳತನ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 24 ರಂದು ಬೆಳಿಗ್ಗೆ 10ರಿಂದ ಸಭೆ ನಡೆಯಲಿದ್ದು, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್‌ನ ಪ್ರಮುಖರು ಭಾಗಿಯಾಗಲಿದ್ದಾರೆ.
ಮತಗಳ್ಳತನ ವಿರೋಧಿಸಿ ಮತದಾರರ ಅಧಿಕಾರ ಯಾತ್ರೆ ಬಳಿಕ ಆರ್‌ಜೆಡಿ ಜೊತೆಗೆ ಸೀಟು ಹಂಚಿಕೆ ಚರ್ಚೆ ಪ್ರಗತಿಯಲ್ಲಿ ಇರುವಾಗಲೇ ಈ ಸಭೆ ನಡೆಯಲಿದೆ.
ಚುನಾವಣೆಗೂ ಮುನ್ನ ಪ್ರದೇಶ ಚುನಾವಣೆ ಸಮಿತಿಯನ್ನು ಕಾಂಗ್ರೆಸ್ ಮಂಗಳವಾರ ರಚಿಸಿದೆ. ಇದರಲ್ಲಿ ಪ್ರಮುಖ ನಾಯಕರಾದ ರಾಕೇಶ್ ರಾಮ್, ಶಕೀಲ್ ಅಹಮದ್ ಖಾನ್, ಮದನ್ ಮೋಹನ್ ಝಾ ಇದ್ದಾರೆ.
39 ಸದಸ್ಯರ ಈ ಸಮಿತಿಯಲ್ಲಿ ಬಿಹಾರದ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಎಐಸಿಸಿ ಕಾರ್ಯದರ್ಶಿಗಳು ಹಾಗೂ ಸಿಡಬ್ಲ್ಯುಸಿ ಸದಸ್ಯರು ಇದ್ದಾರೆ.
ಈ ವರ್ಷ ನವೆಂಬರ್‌ನಲ್ಲಿ ಬಿಹಾರದಲ್ಲಿ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.