ADVERTISEMENT

ಪಹಲ್ಗಾಮ್‌ ದಾಳಿ | ಉಗ್ರರು ಏನಾದ್ರು?: ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಮೇ 2025, 15:33 IST
Last Updated 12 ಮೇ 2025, 15:33 IST
ಭೂಪೇಶ್‌ ಬಘೇಲ್
ಭೂಪೇಶ್‌ ಬಘೇಲ್   

ನವದೆಹಲಿ: ‘ಪಹಲ್ಗಾಮ್‌ ಭಯೋತ್ಪಾದಕರ ದಾಳಿ ನಡೆಸಿದ ಅಪರಾಧಿಗಳನ್ನು ಬಂಧಿಸಲಾಗಿದೆಯೇ ಅಥವಾ ಹತ್ಯೆ ಮಾಡಲಾಗಿದೆಯೇ? ಹೀಗಿರುವಾಗಲೇ, ‘ಆಪರೇಷನ್‌ ಸಿಂಧೂರ’ ಯಶಸ್ವಿಯಾಗಿದೆ ಎಂದು ಬಿಜೆಪಿ ಹೇಗೆ ಪರಿಗಣಿಸುತ್ತಿದೆ. ಉಗ್ರರ ದಾಳಿಯಿಂದ 26 ಮಂದಿ ಸಾವಿಗೆ ಕಾರಣವಾದ ಭದ್ರತಾ ವೈಫಲ್ಯಕ್ಕೆ ಯಾರು ಹೊಣೆ ಎಂದು ಸರ್ಕಾರ ಉತ್ತರಿಸಬೇಕು’ ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ನವದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಭೂಪೇಶ್‌ ಬಘೇಲ್, ‘ಉಭಯ ದೇಶಗಳ ನಡುವಿನ ಕದನ ವಿರಾಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಘೋಷಿಸಿದರು. ಇದು ಸರ್ಕಾರದ ರಾಜತಾಂತ್ರಿಕ, ದೇಶದ ನಾಯಕತ್ವದ ವೈಫಲ್ಯವಾಗಿದೆ. ಈ ವಿಚಾರದಲ್ಲಿ ಮೂರನೇ ವ್ಯಕ್ತಿಗೆ ಮಧ್ಯಸ್ಥಿಕೆ ಮಾಡಲು ಅವಕಾಶ ನೀಡುವಂತೆ ದೇಶದ ವಿದೇಶಾಂಗ ನೀತಿಯಲ್ಲಿ ಬದಲಾವಣೆ ಮಾಡಲಾಗಿದೆಯೇ’ ಎಂದು ಪ್ರಶ್ನಿಸಿದ್ದಾರೆ.

‘ಏ.22ರಂದು ಸಂಭವಿಸಿದ ಪಹಲ್ಗಾಮ್‌ ದಾಳಿಯನ್ನು ಬಿಜೆಪಿಯು ಸಾಮಾಜಿಕ ಜಾಲತಾಣದಲ್ಲಿ ರಾಜಕೀಯಕರಣಗೊಳಿಸಿದ್ದು, ಜನರ ಭಾವನೆಗಳೊಂದಿಗೆ ಸರ್ಕಾರ ಆಟವಾಡುತ್ತಿದೆ. ಈಗಿನ ಕಾರ್ಯಾಚರಣೆಯನ್ನು ಪರಿಗಣಿಸಿ, ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ವನ್ನು ಭಾರತವು ವಶಕ್ಕೆ ಪಡೆಯುವ ಉತ್ತಮ ಅವಕಾಶವಿದೆ ಎಂದು ಪರಿಗಣಿಸಿದ್ದರು, ಅದು ಈಡೇರಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ಭಯೋತ್ಪಾದಕ ದಾಳಿ ಹಾಗೂ ‘ಆಪರೇಷನ್‌ ಸಿಂಧೂರ’ಕ್ಕೆ ಸಂಬಂಧಿಸಿದಂತೆ, ತಕ್ಷಣವೇ ವಿಶೇಷ ಅಧಿವೇಶನ ಕರೆಯಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಸಬೇಕು’ ಎಂದು ಬಘೇಲ್‌ ಒತ್ತಾಯಿಸಿದರು.

‘ಪ್ರಧಾನಿ ಮೋದಿ ಅವರು ಸರ್ವಪಕ್ಷ ಸಭೆಗೆ ಹಾಜರಾಗದಿದ್ದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಆ ಸಭೆಯಲ್ಲಿ ಭಾಗವಹಿಸುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.