ADVERTISEMENT

ಕಾಂಗ್ರೆಸ್‌ ಒಂದು ಸಿದ್ಧಾಂತ; ಅದಕ್ಕೆ ಸಾವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಪಿಟಿಐ
Published 28 ಡಿಸೆಂಬರ್ 2025, 13:55 IST
Last Updated 28 ಡಿಸೆಂಬರ್ 2025, 13:55 IST
<div class="paragraphs"><p>ನವದೆಹಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿ ಇಂದಿರಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಪಕ್ಷದ 140ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ಪಕ್ಷದ ನಾಯಕಿ ಸೋನಿಯಾ ಗಾಂಧಿ ಉಪಸ್ಥಿತರಿದ್ದರು&nbsp; </p></div>

ನವದೆಹಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿ ಇಂದಿರಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಪಕ್ಷದ 140ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ಪಕ್ಷದ ನಾಯಕಿ ಸೋನಿಯಾ ಗಾಂಧಿ ಉಪಸ್ಥಿತರಿದ್ದರು 

   

ಪಿಟಿಐ ಚಿತ್ರ 

ನವದೆಹಲಿ: ‘ಕಾಂಗ್ರೆಸ್‌ ಎಂಬುದು ಒಂದು ಸಿದ್ಧಾಂತ. ಸಿದ್ಧಾಂತಗಳು ಎಂದಿಗೂ ಸಾವು ಇಲ್ಲ’ ಎಂದು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದ್ದಾರೆ.

ADVERTISEMENT

ಕಾಂಗ್ರೆಸ್‌ನ 140ನೇ ಸಂಸ್ಥಾಪನಾ ದಿನದ ಅಂಗವಾಗಿ ಪಕ್ಷದ ಕೇಂದ್ರ ಕಚೇರಿ ‘ಇಂದಿರಾ ಭವನ’ದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ಪಕ್ಷ ನಾಶವಾಯಿತು ಎಂದು ಕೆಲವರು ಹೇಳುತ್ತಿದ್ದಾರೆ. ಪಕ್ಷದ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಅಂಥವರಿಗೆ ನಾನು ಹೇಳುವುದಿಷ್ಟೆ, ಪಕ್ಷವು ಅಧಿಕಾರ ಕಳೆದುಕೊಂಡಿರಬಹುದು ಆದರೆ, ನಮ್ಮ ಬೆನ್ನೆಲುಬು ಬಲಿಷ್ಠವಾಗಿದೆ. ಅಧಿಕಾರಕ್ಕಾಗಿ ನಾವು ಚೌಕಾಸಿ ಮಾಡುವುದಿಲ್ಲ’ ಎಂದು ಹೇಳಿದರು.

‘ಪಕ್ಷದ ಸಿದ್ಧಾಂತದೊಂದಿಗೆ ನಾವು ರಾಜಿ ಆಗಿಲ್ಲ. ಸಂವಿಧಾನದ ಆಶಯಗಳು ಅಥವಾ ಜಾತ್ಯತೀತ ತತ್ವಗಳು ಇಲ್ಲವೇ ಬಡ ಜನರ ಹಕ್ಕುಗಳೊಂದಿಗೂ ರಾಜಿ ಆಗಿಲ್ಲ. ಪಕ್ಷವು ಯಾವತ್ತೂ ಧರ್ಮದ ಹೆಸರಿನಲ್ಲಿ ಮತ ಕೇಳಿಲ್ಲ. ಮಂದಿರ–ಮಸೀದಿ ಹೆಸರಿನಲ್ಲಿ ದ್ವೇಷ ಹಬ್ಬಿಸಿಲ್ಲ’ ಎಂದು ಖರ್ಗೆ ಹೇಳಿದರು.

‘ಕಾಂಗ್ರೆಸ್‌ ಪಕ್ಷವು ಜನರನ್ನು ಒಂದುಗೂಡಿಸಿದರೆ, ಬಿಜೆಪಿ ವಿಭಜಿಸುತ್ತದೆ. ಕಾಂಗ್ರೆಸ್‌ ಪಕ್ಷವು ಧರ್ಮವನ್ನು ಒಂದು ನಂಬಿಕೆಯನ್ನಾಗಿ ಮಾತ್ರ ಪರಿಗಣಿಸುತ್ತದೆ. ಕೆಲವರು ಧರ್ಮವನ್ನು ರಾಜಕೀಯವನ್ನಾಗಿ ಮಾಡಿಕೊಂಡಿದ್ದಾರೆ’ ಎಂದರು.

ಕೆ.ಸಿ.ವೇಣುಗೋಪಾಲ್, ಅಜಯ್‌ ಮಾಕೇನ್, ಶಶಿ ತರೂರ್, ದಿಗ್ವಿಜಯ್‌ ಸಿಂಗ್‌ ಸೇರಿ ಹಲವರು ನಾಯಕರು ಉಪಸ್ಥಿತರಿದ್ದರು. ಪ್ರಿಯಾಂಕಾ ಗಾಂಧಿ ವಾದ್ರಾ ಗೈರಾಗಿದ್ದರು.

ಕಾಂಗ್ರೆಸ್‌ ಪಕ್ಷದ ಮಹಾನ್‌ ನಾಯಕರ ಶ್ರಮ ಹಾಗೂ ಬಲಿದಾನದ ಫಲವಾಗಿ ಇಂದು ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಖರ್ಗೆ ಭಾಷಣದ ಪ್ರಮುಖ ಅಂಶಗಳು
  • ಬಿಜೆಪಿ ಕೈಯಲ್ಲಿ ಈಗ ಅಧಿಕಾರ ಇದೆ ಆದರೆ ಅವರು ಸತ್ಯ ಹೇಳುತ್ತಿಲ್ಲ. ಇದೇ ಕಾರಣಕ್ಕೆ ಅವರು ಕೆಲವೊಮ್ಮೆ ದತ್ತಾಂಶವನ್ನು ಮುಚ್ಚಿಟ್ಟರೆ ಕೆಲವು ಸಲ ಜನಗಣತಿ ಕಾರ್ಯಯನ್ನು ಸ್ಥಗಿತಗೊಳಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಸಂವಿಧಾನ ಬದಲಾಯಿಸುವ ಮಾತುಗಳನ್ನಾಡುತ್ತಾರೆ

  • ಇಂದು ಕೆಲವರು ಇತಿಹಾಸದ ಬಗ್ಗೆ ಭಾಷಣ ಮಾಡುತ್ತಿದ್ದಾರೆ. ಆದರೆ ಅವರ ಪೂರ್ವಜರು ಇತಿಹಾಸದಿಂದಲೇ ವಿಮುಖರಾಗುತ್ತಿದ್ದರು

  • ರಾಜಕೀಯವಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕ ಹಕ್ಕುಗಳಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂದು ಸಂವಿಧಾನ ಹೇಳುತ್ತದೆ. ಸಂವಿಧಾನ ಪ್ರತಿಪಾದಿಸುವ ಈ ಆಶಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬಲವಾದ ನಂಬಿಕೆ ಇದೆ 

ಭಾರತದ ಆತ್ಮದ ದನಿಯಂತೆ: ರಾಹುಲ್‌
‘ಕಾಂಗ್ರೆಸ್‌  ಒಂದು ರಾಜಕೀಯ ಪಕ್ಷ ಮಾತ್ರವಲ್ಲ ಪ್ರತಿಯೊಬ್ಬ ದುರ್ಬಲ ಶೋಷಿತ ವ್ಯಕ್ತಿ ಹಾಗೂ ಶ್ರಮಜೀವಿಯ ಪರ ನಿಲ್ಲುವ ಭಾರತದ ಆತ್ಮದ ಧ್ವನಿಯೇ ಆಗಿದೆ’ ಎಂದು ಪಕ್ಷದ ನಾಯಕ ರಾಹುಲ್‌ ಗಾಂಧಿ ಹೇಳಿದರು. ‘ದ್ವೇಷ ಅನ್ಯಾಯ ಹಾಗೂ ಸರ್ವಾಧಿಕಾರ ಧೋರಣೆಯಿಂದ ಸಂವಿಧಾನ ರಕ್ಷಿಸುವ ಸಲುವಾಗಿ ಮತ್ತಷ್ಟು ಪ್ರಬಲ ಹೋರಾಟ ನಡೆಸುವುದು ನಮ್ಮ ಅಚಲ ನಿರ್ಧಾರ’ ಎಂದು ಅವರು ಕಾಂಗ್ರೆಸ್‌ ಸಂಸ್ಥಾಪನಾ ದಿನ ಕಾರ್ಯಕ್ರಮದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಪ್ರತಿಯೊಬ್ಬ ಕಾಂಗ್ರೆಸ್‌ ಸದಸ್ಯಗೆ ಶುಭಾಶಯಗಳು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಹಾಗೂ ಸಂವಿಧಾನ ಪ್ರಜಾಪ್ರಭುತ್ವ ಜಾತ್ಯತೀತ ತತ್ವ ಸಾಮಾಜಿಕ ನ್ಯಾಯ ಮತ್ತು ಸಮಾನತೆಯಂತಹ ಮೌಲ್ಯಗಳನ್ನು ಗಟ್ಟಿಗೊಳಿಸುವುದಕ್ಕೆ ಭದ್ರ ತಳಪಾಯ ಹಾಕಿದ ಪರಂಪರೆಗೆ ಹಾಗೂ ಬಲಿದಾನಗಳಿಗೆ ಗೌರವ ಸಲ್ಲಿಸುವೆ’ ಎಂದು ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.