ADVERTISEMENT

ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ ಸೋಲಾಗಲಿದೆ: ಅಶ್ವನಿ ಕುಮಾರ್‌ ಹೇಳಿಕೆ

ಐಎಎನ್ಎಸ್
Published 16 ಫೆಬ್ರುವರಿ 2022, 2:14 IST
Last Updated 16 ಫೆಬ್ರುವರಿ 2022, 2:14 IST
ಅಶ್ವನಿ ಕುಮಾರ್‌ - ಪಿಟಿಐ ಚಿತ್ರ
ಅಶ್ವನಿ ಕುಮಾರ್‌ - ಪಿಟಿಐ ಚಿತ್ರ   

ನವದೆಹಲಿ: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಾಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಅಶ್ವನಿ ಕುಮಾರ್ ಹೇಳಿದ್ದಾರೆ.

ಹಲವು ದಶಕಗಳಿಂದ ಕಾಂಗ್ರೆಸ್‌ನಲ್ಲಿದ್ದ ಅವರು ಮಂಗಳವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷ ತ್ಯಜಿಸಿದ ಬೆನ್ನಲ್ಲೇ ಅವರು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಐಎಎನ್‌ಎಸ್’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ತಾನು ಬಡ ಕುಟುಂಬದವನು ಎಂದು ಚನ್ನಿ ಹೇಳುತ್ತಾರೆ. ಹಾಗಾದರೆ ಅವರ ಮನೆಯಲ್ಲಿ ₹10–12 ಕೋಟಿ ಹಣ ಎಲ್ಲಿಂದ ಬಂತು? ಅಂದರೆ ಕಾಂಗ್ರೆಸ್‌ನಲ್ಲಿ, ವಿಶೇಷವಾಗಿ ಚನ್ನಿ ವಿಚಾರದಲ್ಲಿ ಬಡತನದ ವ್ಯಾಖ್ಯಾನ ಬದಲಾಗಿದೆ. ಪಂಜಾಬ್‌ನಲ್ಲಿ ಎಷ್ಟು ಜನರಲ್ಲಿ ₹10–12 ಕೋಟಿ ಹಣ ಇದೆ ಎಂದು ನೋಡೋಣ, ಅವರೆಲ್ಲ ಖಂಡಿತವಾಗಿಯೂ ಕಾಂಗ್ರೆಸ್‌ಗೆ ಮತ ನೀಡಲಿದ್ದಾರೆ. ಕಾಂಗ್ರೆಸ್ ಅನ್ನು ಪಂಜಾಬ್‌ನಲ್ಲಿ ಗೇಲಿ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.

ADVERTISEMENT

ಇಬ್ಬರು–ಮೂವರು ನಾಯಕರನ್ನು ಹೊರತುಪಡಿಸಿದರೆ ಯಾರೊಬ್ಬರೂ ಪಕ್ಷಕ್ಕಾಗಿ ಏನನ್ನೂ ಮಾಡಿಲ್ಲ. ಇಂಥ ಪರಿಸ್ಥಿತಿಯಲ್ಲಿ ಹಳೆಯ ಪಕ್ಷ ಹೇಗೆ ಮುಂದೆ ಸಾಗಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ನಾನು ತಿಳಿದ ಮಟ್ಟಿಗೆ ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ ಸೋಲಾಗಲಿದೆ. ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಅವರು ಹೇಳಿದ್ದಾರೆ.

ಇದೇ 20ರಂದು ಪಂಜಾಬ್‌ ವಿಧಾನಸಭಾ ಚುನಾವಣೆ ನಡೆಯಲಿದೆ.

‘ನಾನು ಕಳೆದ ಕೆಲವು ತಿಂಗಳುಗಳಿಂದ ಪಕ್ಷದಲ್ಲಿ ಕಡೆಗಣಿಸಲ್ಪಟ್ಟವ, ಅಸಹಾಯಕನಾಗಿದ್ದೆ. ಪಕ್ಷಕ್ಕೆ ನನ್ನ ಅಗತ್ಯ ಇಲ್ಲ ಎಂಬುದೂ ನನಗೆ ಮನವರಿಕೆಯಾಗಿತ್ತು. ಹೀಗಾಗಿ ಪಕ್ಷ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದೆ’ ಎಂದೂ ಅಶ್ವನಿ ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದಲ್ಲಿ ಅಶ್ವನಿ ಕುಮಾರ್‌ ಅವರು ಕಾನೂನು ಸಚಿವ, ಕೇಂದ್ರದ ಕೈಗಾರಿಕಾ ನೀತಿ ಇಲಾಖೆಯ ರಾಜ್ಯ ಸಚಿವ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು. 1991ರಲ್ಲಿ ಅವರನ್ನು ಭಾರತದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ನೇಮಕ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.