ADVERTISEMENT

ನರೇಗಾ ಬಗ್ಗೆ ತಪ್ಪು ಮಾಹಿತಿ: ಕೇಂದ್ರ ಸಚಿವರ ವಿರುದ್ಧ ಹಕ್ಕುಚ್ಯುತಿ ನೋಟಿಸ್

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2025, 10:29 IST
Last Updated 26 ಮಾರ್ಚ್ 2025, 10:29 IST
<div class="paragraphs"><p>ಚಂದ್ರಶೇಖರ್ ಪೆಮ್ಮಸಾನಿ</p></div>

ಚಂದ್ರಶೇಖರ್ ಪೆಮ್ಮಸಾನಿ

   

ನವದೆಹಲಿ: ಸದನದಲ್ಲಿ ನರೇಗಾ ಯೋಜನೆಯ ಅನುದಾನದ ಬಗ್ಗೆ ದಾರಿ ತಪ್ಪಿಸುವ ಮಾಹಿತಿ ನೀಡಿದ ಕೇಂದ್ರ ಸಚಿವ ಚಂದ್ರಶೇಖರ್ ಪೆಮ್ಮಸಾನಿ ವಿರುದ್ಧ ಕಾಂಗ್ರೆಸ್‌ನ ಲೋಕಸಭೆ ಮುಖ್ಯ ಸಚೇತಕ ಮಾಣಿಕಂ ಟಾಗೋರ್ ಅವರು ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.

‘ಕಳೆದ 5 ತಿಂಗಳಿನಲ್ಲಿ ತಮಿಳುನಾಡಿಗೆ ನರೇಗಾ ಯೋಜನೆಯಡಿ ₹ 4,034 ಕೋಟಿ ಅನುದಾನ ಬಿಡುಗಡೆಯಲ್ಲಿ ವಿಳಂಬದ ಬಗ್ಗೆ ಪ್ರಶ್ನೋತ್ತರ ಅವಧಿಯಲ್ಲಿ ಡಿಎಂಕೆ ಸಂಸದೆ ಕನಿಮೊಳಿ ಅವರು ಕೇಳಿದ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವರು ಮಂಗಳವಾರ ನೀಡಿದ ಮಾಹಿತಿ ವಾಸ್ತವಿಕವಾಗಿ ತಪ್ಪಾಗಿದೆ’ ಎಂದು ಅವರು ಸ್ಪೀಕರ್ ಓಂ ಬಿರ್ಲಾಗೆ ನೀಡಿದ ನೋಟಿಸ್‌ನಲ್ಲಿ ಹೇಳಿದ್ದಾರೆ.

ADVERTISEMENT

‘7 ಕೋಟಿ ಜನಸಂಖ್ಯೆ ಇರುವ ತಮಿಳುನಾಡು, 20 ಕೋಟಿ ಜನಸಂಖ್ಯೆ ಇರುವ ಉತ್ತರಪ್ರದೇಶದಕ್ಕಿಂತ ಹೆಚ್ಚು ನರೇಗಾ ಅನುದಾನ ಪಡೆಯುತ್ತಿದೆ. ಉತ್ತರ ಪ್ರದೇಶಕ್ಕೆ ಈ ಯೋಜನೆಯಡಿ ₹ 10 ಸಾವಿರ ಕೋಟಿ ಲಭಿಸಿದರೆ, ತಮಿಳುನಾಡಿಗೆ ಅದಕ್ಕಿಂತೆ ಹೆಚ್ಚು ಸಿಗುತ್ತಿದೆ ಎಂದು ಪೆಮ್ಮಸಾನಿ ಹೇಳಿದ್ದರು’ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಆದರೆ ನರೇಗಾ ವೆಬ್‌ಸೈಟ್ ಪ್ರಕಾರ ಈ ಹಣಕಾಸು ಅವಧಿಯಲ್ಲಿ ಉತ್ತರ ಪ್ರದೇಶಕ್ಕೆ ₹ 11,860 ಕೋಟಿ ಲಭಿಸಿದರೆ, ತಮಿಳುನಾಡಿಗೆ ₹ 10,687 ಕೋಟಿ ಸಿಕ್ಕಿದೆ ಎಂದು ಟಾಗೋರ್ ಹೇಳಿದ್ದಾರೆ.

‘ಕೇಂದ್ರ ಸರ್ಕಾರವು ಈ ವರ್ಷದಲ್ಲಿ ಉತ್ತರ ಪ್ರದೇಶಕ್ಕೆ ₹9,758 ಕೋಟಿ ಹಾಗೂ ತಮಿಳುನಾಡಿಗೆ ₹7,414 ಕೋಟಿ ಬಿಡುಗಡೆ ಮಾಡಿದೆ. ನರೇಗಾ ಹಣವನ್ನು ಜನಸಂಖ್ಯಾ ಗಾತ್ರದಲ್ಲಿ ಹಂಚಿಕೆ ಮಾಡಲಾಗುವುದಿಲ್ಲ. ಕೆಲಸದ ದಿನಗಳ ಮೇಲೆ ಹಂಚಿಕೆ ಮಾಡಲಾಗುತ್ತದೆ. ಆದ್ದರಿಂದ ಜನಸಂಖ್ಯೆ ಆಧಾರದಲ್ಲಿ ನರೇಗಾ ಅನುದಾನ ಹಂಚಿಕೆ ಮಾಡಲಾಗುತ್ತದೆ ಎನ್ನುವ ಸಚಿವರ ಮಾತು ದಾರಿ ತಪ್ಪಿಸುವಂಥದ್ದು’ ಎಂದು ಅವರ ನೋಟಿಸ್‌ನಲ್ಲಿ ಹೇಳಿದ್ದಾರೆ.

‘ಗಾಮೀಣಾಭಿವೃದ್ಧಿ ಸಚಿವರ ಹೇಳಿಕೆ ದಿಕ್ಕುತಪ್ಪಿಸುವಂಥದ್ದು ಹಾಗೂ ವಾಸ್ತವಿಕವಾಗಿ ತಪ್ಪು. ನರೇಗಾ ಅನುದಾನ ಹಂಚಿಕೆ ಮತ್ತು ವೆಚ್ಚಕ್ಕೆ ಸಂಬಂಧಿಸಿದ ಪ್ರಮುಖ ವಿಷಯದ ಬಗ್ಗೆ ಗೊಂದಲ ಮತ್ತು ಸದನವನ್ನು ದಾರಿತಪ್ಪಿಸಲು ಇದು ಕಾರಣವಾಗಿದೆ’ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸ್ಪೀಕರ್ ಅವರನ್ನು ಕೋರಿರುವ ಟಾಗೋರ್, ನಿಯಮಗಳನುಸಾರ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.