ರಾಹುಲ್ ಗಾಂಧಿ
ನವದೆಹಲಿ: ಶುದ್ಧ ಗಾಳಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದವರನ್ನು ಬಂಧಿಸಿದ್ದಕ್ಕಾಗಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 'ನಾಗರಿಕರನ್ನು ಅಪರಾಧಿಗಳಂತೆ ನೋಡಲಾಗುತ್ತಿದೆ' ಎಂದು ಟೀಕಿಸಿದ್ದಾರೆ.
'ಶುದ್ಧ ಗಾಳಿಗಾಗಿ 'ಇಂಡಿಯಾ ಗೇಟ್'ನಲ್ಲಿ ಪ್ರತಿಭಟಿಸಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಕರೆದುಕೊಂಡು ಹೋಗಿ ಬಸ್‌ಗೆ ಹತ್ತಿಸಿದರು' ಎಂದು ಪರಿಸರವಾದಿ ವಿಮಲೇಂದು ಝಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್, 'ಶುದ್ಧ ಗಾಳಿಗಾಗಿ ಶಾಂತಿಯುತವಾಗಿ ಬೇಡಿಕೆ ಇಟ್ಟಿದ್ದ ನಾಗರಿಕರನ್ನು ಅಪರಾಧಿಗಳಂತೆ ಏಕೆ ನಡೆಸಿಕೊಳ್ಳಲಾಗುತ್ತಿದೆ' ಎಂದು ಪ್ರಶ್ನಿಸಿದ್ದಾರೆ.
'ಶುದ್ಧ ಗಾಳಿಯು ಮನುಷ್ಯನ ಮೂಲಭೂತ ಹಕ್ಕು ಆಗಿದೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಹಕ್ಕನ್ನು ನಮ್ಮ ಸಂವಿಧಾನವು ಖಾತ್ರಿಪಡಿಸುತ್ತದೆ' ಎಂದು ಅವರು ಉಲ್ಲೇಖಿಸಿದ್ದಾರೆ.
'ವಾಯು ಮಾಲಿನ್ಯವು ಕೋಟ್ಯಂತರ ಭಾರತೀಯರ ಮೇಲೆ ಪರಿಣಾಮ ಬೀರುತ್ತಿದೆ. ನಮ್ಮ ದೇಶದ, ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದೆ. ಆದರೆ ಮತಕಳವಿನ ಮೂಲಕ ಅಧಿಕಾರಕ್ಕೆ ಬಂದ ಸರ್ಕಾರ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ಬಿಕ್ಕಟ್ಟನ್ನು ಬಗೆಹರಿಸಲು ಯತ್ನಿಸುತ್ತಿಲ್ಲ' ಎಂದು ಆರೋಪಿಸಿದ್ದಾರೆ.
'ಶುದ್ಧ ಗಾಳಿಗಾಗಿ ಒತ್ತಾಯಿಸಿದ್ದ ನಾಗರಿಕರ ಮೇಲೆ ದಾಳಿ ಮಾಡುವ ಬದಲು ವಾಯು ಮಾಲಿನ್ಯದ ವಿರುದ್ಧ ನಾವು ಸ್ಪಷ್ಟ ನಿರ್ಣಯ ತೆಗೆದುಕೊಳ್ಳಬೇಕು' ಎಂದಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಿರುವುದನ್ನು ವಿರೋಧಿಸಿ ಪೋಷಕರು ಹಾಗೂ ಪರಿಸರ ಕಾರ್ಯಕರ್ತರು ಸೇರಿದಂತೆ ಹಲವು ಮಂದಿ ಭಾನುವಾರ ಇಂಡಿಯಾ ಗೇಟ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಅನುಮತಿ ಇಲ್ಲದೆ ಸಭೆ ಸೇರಿದ್ದಕ್ಕಾಗಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.