ನವದೆಹಲಿ: ರಾಷ್ಟ್ರ ನಿರ್ಮಾಣದಲ್ಲಿ ಆರ್‌ಎಸ್‌ಎಸ್‌ನ ಪಾತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಆದರೆ ಸಂಘದ ಚಟುವಟಿಕೆಗಳು ಮಹಾತ್ಮ ಗಾಂಧಿಯವರ ಹತ್ಯೆಗೆ ಕಾರಣವಾದ ವಾತಾವರಣವನ್ನು ಸೃಷ್ಟಿಸಿದ್ದವು ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಹಿಂದೆಯೇ ಹೇಳಿದ್ದರು ಎಂದು ಕಾಂಗ್ರೆಸ್ ನೆನಪಿಸಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಪ್ರಧಾನಿ ಬುಧವಾರ ಬೆಳಿಗ್ಗೆ ಆರ್‌ಎಸ್‌ಎಸ್ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ. ಆದರೆ ಸರ್ದಾರ್ ಪಟೇಲ್ ಅವರು 1948ರ ಜುಲೈ 18ರಂದು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ಬರೆದ ಪತ್ರದ ಬಗ್ಗೆ ಅವರಿಗೆ ತಿಳಿದಿದೆಯೇ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಅಂದಿನ ಗೃಹ ಸಚಿವ ಪಟೇಲ್ ಅವರು ಮುಖರ್ಜಿ ಅವರಿಗೆ ಬರೆದ ಪತ್ರದ ಆಯ್ದ ಭಾಗಗಳನ್ನು ಜೈರಾಮ್ ರಮೇಶ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
‘ಹಿಂದೂ ಮಹಾಸಭಾದ ತೀವ್ರವಾದಿಗಳು ಗಾಂಧಿ ಹತ್ಯೆ ಸಂಚಿನಲ್ಲಿ ಭಾಗಿಯಾಗಿರುವ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ. ಆರ್‌ಎಸ್‌ಎಸ್‌ನ ಚಟುವಟಿಕೆಗಳು ದೇಶ ಮತ್ತು ಸರ್ಕಾರದ ಅಸ್ತಿತ್ವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿವೆ. ನಿಷೇಧದ ಹೊರತಾಗಿಯೂ ಆರ್‌ಎಸ್‌ಎಸ್ ಕಾರ್ಯಾಚರಿಸುತ್ತಿದೆ ಎಂದು ನಮ್ಮ ವರದಿಗಳು ತಿಳಿಸಿವೆ’ ಎಂದು ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ಬರೆದಿದ್ದ ಪತ್ರದಲ್ಲಿ ಪಟೇಲರು ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೇ 1948ರ ಡಿಸೆಂಬರ್ 19ರಂದು ಜೈಪುರದ ಗಾಂಧಿನಗರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪಟೇಲ್ ಅವರು, ದೇಶವನ್ನು ಗುಲಾಮಗಿರಿ ಅಥವಾ ವಿಘಟನೆಯ ಹಾದಿಗೆ ತಳ್ಳಲು ಆರ್‌ಎಸ್‌ಎಸ್ ಅಥವಾ ಯಾವುದೇ ಇತರ ಕೋಮು ಸಂಘಟನೆಗೆ ನಾವು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಬಗ್ಗೆ ಮರುದಿನ 'ಹಿಂದೂಸ್ತಾನ್ ಟೈಮ್ಸ್'ನಲ್ಲಿ ಪ್ರಕಟವಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯ ಪ್ರತಿಯನ್ನು ಜೈರಾಮ್ ರಮೇಶ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಬುಧವಾರ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹಿಂದೂ ರಾಷ್ಟ್ರೀಯವಾದಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮಾಜದ ವಿವಿಧ ವರ್ಗಗಳೊಂದಿಗೆ ‘ದೇಶ ಮೊದಲು‘ ಎಂಬ ತತ್ವದ ಆಧಾರದ ಮೇಲೆ ಕೆಲಸ ಮಾಡುತ್ತದೆ. ಆದರೆ, ಎಂದಿಗೂ ವಿರೋಧಾಭಾಸಗಳನ್ನು ಎದುರಿಸುವಂತೆ ಸನ್ನಿವೇಶ ಎದುರಾಗಿಲ್ಲ‘ ಎಂದು ಪ್ರತಿಪಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.