ADVERTISEMENT

ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಮಾಡುವುದೊಂದೇ ಸೋನಿಯಾ ಗಾಂಧಿ ಗುರಿ: ಅಮಿತ್‌ ಶಾ

ಪಿಟಿಐ
Published 9 ಮಾರ್ಚ್ 2024, 11:18 IST
Last Updated 9 ಮಾರ್ಚ್ 2024, 11:18 IST
<div class="paragraphs"><p>ಅಮಿತ್‌ ಶಾ</p></div>

ಅಮಿತ್‌ ಶಾ

   

ಪಟ್ನಾ: ಕಾಂಗ್ರೆಸ್‌ ಮತ್ತು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ನಾಯಕರು ತಮ್ಮ ಕುಟುಂಬಗಳ ಒಳಿತಿಗಾಗಿ ಕೆಲಸ ಮಾಡುತ್ತಾರೆಯೇ ಹೊರತು, ಬಡವರಿಗಾಗಿ ಏನನ್ನೂ ಮಾಡಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ.

ಪಟ್ನಾದ ಪಾಲಿಗಂಜ್‌ ಪ್ರದೇಶದಲ್ಲಿ ಏರ್ಪಡಿಸಿದ್ದ ಬಿಜೆಪಿ ಒಬಿಸಿ ಮೋರ್ಚಾದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮಾತ್ರ ಬಡವರಿಗೆ ಒಳ್ಳೆಯದನ್ನು ಮಾಡುತ್ತಾರೆ’ ಎಂದು ಹೇಳಿದ್ದಾರೆ.

ADVERTISEMENT

‘ಕಾಂಗ್ರೆಸ್‌ನ ನಾಯಕರು ಯಾವಾಗಲೂ ತಮ್ಮ ಕುಟುಂಬಗಳ ಕಾಳಜಿಯನ್ನು ಮಾತ್ರ ನೋಡಿಕೊಳ್ಳುತ್ತವೆ. ಹಿಂದುಳಿದ ಜನರ ಹೆಸರಿನಲ್ಲಿ ಲಾಲು ಪ್ರಸಾದ್‌ ಅವರು ತಮ್ಮ ಇಡೀ ಜೀವನವನ್ನು ತಮ್ಮ ಕುಟುಂಬಕ್ಕಾಗಿಯೇ ಬದುಕಿದ್ದಾರೆ. ರಾಹುಲ್‌ ಗಾಂಧಿ ಅವರನ್ನು ಪ್ರಧಾನ ಮಂತ್ರಿ ಮಾಡುವುದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಗುರಿಯಾಗಿದೆ. ತಮ್ಮ ಮಗನನ್ನು (ತೇಜಸ್ವಿ ಯಾದವ್‌) ಮುಖ್ಯಮಂತ್ರಿಯಾಗಿ ಮಾಡುವುದು ಲಾಲು ಅವರ ಉದ್ದೇಶವಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಬಡವರಿಗಾಗಿ ಯಾರಾದರೂ ಒಳ್ಳೆಯದನ್ನು ಮಾಡಿದ್ದಾರೆ ಎಂದರೆ ಅದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮಾತ್ರ. ಬಡವರ ಭೂಮಿಯನ್ನು ಕಬಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಒಂದು ಸಮಿತಿಯನ್ನು ರಚಿಸಲಿದೆ’ ಎಂದು ಅವರು ಹೇಳಿದ್ದಾರೆ.

‘ಹಿಂದುಳಿದ ವರ್ಗಗಳು ಹಾಗೂ ಬಡ ಜನರ ಭೂಮಿಯನ್ನು ಕಬಳಿಸುವ ಕೆಲಸವನ್ನು ಲಾಲು ಪ್ರಸಾದ್‌ ಅವರು ಮಾಡಿದ್ದಾರೆ. ಬಿಹಾರದಲ್ಲಿ ಮತ್ತೆ ಡಬಲ್‌ ಎಂಜಿನ್‌ ಸರ್ಕಾರ ರಚನೆಯಾಗಲಿದ್ದು, ನಮ್ಮ ಸರ್ಕಾರವು ಭೂ ಮಾಫಿಯಾ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂಬ ಎಚ್ಚರಿಕೆಯನ್ನು ಲಾಲು ಪ್ರಸಾದ್‌ ಅವರ ಪಕ್ಷಕ್ಕೆ ನೀಡಲು ಬಂದಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್‌ ಮತ್ತು ಆರ್‌ಜೆಡಿ ಪಕ್ಷಗಳು ದೀರ್ಘಕಾಲ ಅಧಿಕಾರದಲ್ಲಿದ್ದರೂ, ಹಿರಿಯ ನಾಯಕ ಕರ್ಪೂರಿ ಠಾಕೂರ್‌ ಅವರಿಗೆ ಗೌರವ ನೀಡಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಕರ್ಪೂರಿ ಠಾಕೂರ್‌ ಅವರಿಗೆ ‘ಭಾರತ ರತ್ನ’ ಘೋಷಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ ಎಂದು ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.