ADVERTISEMENT

ಪ್ರಶ್ನೆಗಳಿಗೆ ಮೋದಿ ಹೆದರುತ್ತಾರೆ: ಉದಯ್ ಭಾನು ಬಂಧನದ ಬಳಿಕ ಕಾಂಗ್ರೆಸ್‌ ಕಿಡಿ

ಪಿಟಿಐ
Published 24 ಫೆಬ್ರುವರಿ 2026, 7:18 IST
Last Updated 24 ಫೆಬ್ರುವರಿ 2026, 7:18 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಧ್ವಜ</p></div>

ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಧ್ವಜ

   

ನವದೆಹಲಿ: ಎ.ಐ ಶೃಂಗಸಭೆಯಲ್ಲಿ ಅಂಗಿ ತೆಗೆದು ಪ್ರತಿಭಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್‌ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ಬಂಧಿಸಿದ ಬೆನ್ನಲ್ಲೇ ಕಾಂಗ್ರೆಸ್‌ ಪ್ರತಿಕ್ರಿಯಿಸಿದ್ದು, ಪ್ರಶ್ನೆಗಳಿಗೆ ಮೋದಿ ಹೆದರುತ್ತಾರೆ ಎಂದು ಕಿಡಿಕಾರಿದೆ.

ಚಿಬ್ ಬಂಧನದ ಕುರಿತು ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಪ್ರತಿಕ್ರಿಯಿಸಿದ್ದು, ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವುದು ವಿರೋಧ ಪಕ್ಷದ ಕರ್ತವ್ಯ. ಆದರೆ ಸರ್ವಾಧಿಕಾರಿಗೆ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಎಷ್ಟೇ ದಬ್ಬಾಳಿಕೆಯನ್ನು ನಡೆಸಿದರೂ, ಜನರ ಸಮಸ್ಯೆಗಳಿಗೆ ಧ್ವನಿಯಾಗುವುದನ್ನು ಮುಂದುವರಿಸುತ್ತೇವೆ. ಇದೇ ಕಾಂಗ್ರೆಸ್‌ನ ಇತಿಹಾಸ ಎಂದು ಖೇರಾ ಹೇಳಿದ್ದಾರೆ.

ಇತ್ತೀಚೆಗೆ ಎ.ಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಕಾಂಗ್ರೆಸ್‌ ಯುವ ಘಟಕದ ಸದಸ್ಯರು ಅಂಗಿ ತೆಗೆದು ಪ್ರತಿಭಟನೆ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಚಿಬ್‌ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುವ ಕಾಂಗ್ರೆಸ್‌ ಕಾರ್ಯಕರ್ತರ ಗುಂಪೊಂದು ಎ.ಐ ಶೃಂಗಸಭೆಯ ‘ಎಕ್ಸ್‌ಪೋ’ ನಡೆದಿದ್ದ ಹಾಲ್‌ನಲ್ಲಿ ಶುಕ್ರವಾರ ಕೆಲಹೊತ್ತು ಪ್ರತಿಭಟನೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಎಂಟು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಿಬ್ ಬಂಧನದ ಹಿನ್ನೆಲೆ ದೆಹಲಿಯಲ್ಲಿ ಪ್ರತಿಭಟನೆಗಳು ನಡೆಯುವ ಸಾಧ್ಯತೆವಿದ್ದು, ಹೀಗಾಗಿ ಬಿಗಿ ಪೊಲೀಸ್‌ ಬಂದೊಬಸ್ತ್ ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.