ಕಾಂಗ್ರೆಸ್ ಧ್ವಜ
ನವದೆಹಲಿ: 1984ರಲ್ಲಿ ನಡೆದ 'ಆಪರೇಷನ್ ಬ್ಲೂ ಸ್ಟಾರ್'ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ನೀಡಿದ ಹೇಳಿಕೆಗಳಿಂದ ಪಕ್ಷ ಅಸಮಾಧಾನಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಶನಿವಾರ ನಡೆದ ಖುಷ್ವಂತ್ ಸಿಂಗ್ ಸಾಹಿತ್ಯ ಉತ್ಸವದಲ್ಲಿ ಪತ್ರಕರ್ತ ಹರಿಂದರ್ ಬವೇಜಾ ಅವರ 'ದೇ ವಿಲ್ ಶೂಟ್ ಯು, ಮೇಡಂ ' ಪುಸ್ತಕದ ಕುರಿತ ಚರ್ಚೆಯ ವೇಳೆ ಚಿದಂಬರಂ ಆಪರೇಷನ್ ‘ಬ್ಲೂ ಸ್ಟಾರ್ ಕುರಿತು ಹೇಳಿಕೆ ನೀಡಿದ್ದರು.
'ಅಮೃತಸರದ ಸಿಖ್‌ರ ಪವಿತ್ರ ಸ್ಥಳಗಳಲ್ಲಿ ಅಡಗಿದ್ದ ಉಗ್ರಗಾಮಿಗಳನ್ನು ಸೆರೆಹಿಡಿಯಲು 'ಆಪರೇಷನ್ ಬ್ಲೂ ಸ್ಟಾರ್' ಕಾರ್ಯಾಚರಣೆಯ ಬದಲು ಬೇರೆ ಮಾರ್ಗವನ್ನು ಅನುಸರಿಸಬೇಕಿತ್ತು. ಆಪರೇಷನ್ ಬ್ಲೂ ಸ್ಟಾರ್ ಎಂಬ ತಪ್ಪು ನಿರ್ಧಾರದಿಂದಾಗಿ ಇಂದಿರಾ ಗಾಂಧಿ ಅವರು ತಮ್ಮ ಪ್ರಾಣವನ್ನೇ ತೆತ್ತರು' ಎಂದು ಚಿದಂಬರಂ ಹೇಳಿದ್ದರು.
'ಆಪರೇಷನ್ ಬ್ಲೂ ಸ್ಟಾರ್ ನಿರ್ಧಾರವನ್ನು ಕೇವಲ ಇಂದಿರಾ ಗಾಂಧಿ ಅವರು ಮಾತ್ರ ಕೈಗೊಂಡಿರಲಿಲ್ಲ, ಬದಲಾಗಿ ಆಗಿನ ಸೇನೆ, ಪೊಲೀಸರು, ಗುಪ್ತಚರ ಇಲಾಖೆ ಒಗ್ಗೂಡಿ ಕೈಗೊಂಡ ನಿರ್ಣಯವಾಗಿತ್ತು. ಆದರೆ ಇಂದಿರಾ ಗಾಂಧಿಯವರನ್ನೇ ದೂಷಿಸುವುದು ಸರಿಯಲ್ಲ' ಎಂದಿದ್ದಾರೆ.
ಹಿರಿಯ ನಾಯಕರು ಈ ರೀತಿ ಪದೇ ಪದೇ ನೀಡುವ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದು, ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿದೆ. ಇಂತಹ ಬೆಳವಣಿಗೆಗಳು ಸರಿಯಲ್ಲ. ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುವಾಗ ಎಚ್ಚರಿಕೆಯಿಂದ ಇರಬೇಕೆಂದು ಕಾಂಗ್ರೆಸ್ ಪಕ್ಷ ತಿಳಿಸಿದೆ.
ಕಾಂಗ್ರೆಸ್‌ನ ಉನ್ನತ ಮಟ್ಟದ ನಾಯಕರು ಅಸಮಾಧಾನಗೊಂಡಿದ್ದಾರೆ. ಪದೇ ಪದೇ ಈ ರೀತಿಯ ಹೇಳಿಕೆಗಳಿಂದ ಪಕ್ಷದ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.