ADVERTISEMENT

Constitution Amendment Bill | ಜಂಟಿ ಸಂಸದೀಯ ಸಮಿತಿಗೆ ಸೇರುವುದಿಲ್ಲ: ಎಎಪಿ

ಪಿಟಿಐ
Published 24 ಆಗಸ್ಟ್ 2025, 13:57 IST
Last Updated 24 ಆಗಸ್ಟ್ 2025, 13:57 IST
   

ನವದೆಹಲಿ: ಸತತ 30 ದಿನ ಜೈಲುವಾಸಕ್ಕೆ ಒಳಗಾದರೆ ಪ್ರಧಾನಿ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿ ಮತ್ತು ಸಚಿವರನ್ನು ಹುದ್ದೆಯಿಂದ ಪದಚ್ಯುತಗೊಳಿಸಲು ಅವಕಾಶ ಕಲ್ಪಿಸುವ ಸಂವಿಧಾನ (130ನೇ ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸುವ ಜಂಟಿ ಸಂಸದೀಯ ಸಮಿತಿಗೆ (ಜೆಸಿಪಿ) ಸೇರುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್‌, ಸಮಾಜವಾದಿ ಪಕ್ಷಗಳು ಹೇಳಿದ್ದ ಬೆನ್ನಲ್ಲೇ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವೂ (ಎಎಪಿ) ಭಾನುವಾರ ಘೋಷಿಸಿದೆ.

ಈ ಪ್ರಸ್ತಾವಿತ ಕಾನೂನುಗಳ ಉದ್ದೇಶವು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದಲ್ಲ. ಬದಲಿಗೆ ವಿರೋಧ ಪಕ್ಷಗಳ ಸರ್ಕಾರಗಳನ್ನು ಉರುಳಿಸುವುದು. ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ 3 ಮಸೂದೆಗಳು ಅಸಾಂವಿಧಾನಿಕವಾದವು. ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸುತ್ತವೆ ಎಂದು ಎಎಪಿ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಆರೋಪಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಭ್ರಷ್ಟಾಚಾರ ಹಾಗೂ ಬಿಜೆಪಿ ನಡುವಿನ ಸಂಬಂಧವು ಲೈಲಾ–ಮಜ್ನು, ರೋಮಿಯೊ–ಜೂಲಿಯೆಟ್‌ ಇದ್ದಂತೆ. ಪ್ರಧಾನಿ ಮೋದಿ ಹಾಗೂ ಬಿಜೆಪಿಯವರು ಭ್ರಷ್ಟರನ್ನು ಪ್ರೀತಿಸುತ್ತಾರೆ. ಅಜಿತ್‌ ಪವಾರ್‌, ನಾರಾಯಣ ರಾಣೆ, ಜಿ.ಜನಾರ್ದನ ರೆಡ್ಡಿ, ಬಿ.ಎಸ್‌. ಯಡಿಯೂರಪ್ಪ, ಮುಕುಲ್‌ ರಾಯ್‌, ಹಿಮವಂತ್‌ ಬಿಸ್ವಾ ಶರ್ಮಾ, ಸುವೇಂದು ಅಧಿಕಾರಿ ಯಾವ ಪಕ್ಷದಲ್ಲಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT

ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025

ಪ್ರಧಾನಿ, ಮುಖ್ಯಮಂತ್ರಿ ಮತ್ತು ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಚಿವರನ್ನು ಹುದ್ದೆಯಿಂದ ಪದಚ್ಯುತಿಗೊಳಿಸಲು ಸಾಧ್ಯವಾಗುವಂತಹ ಮೂರು ಮಸೂದೆಗಳನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ. ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025, ಕೇಂದ್ರಾಡಳಿತ ಸರ್ಕಾರ ತಿದ್ದುಪಡಿ ಮಸೂದೆ, ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ ತಿದ್ದುಪಡಿ ಮಸೂದೆ– 2025 ಅನ್ನು ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ್ದಾರೆ.

ವಿರೋಧ ಪಕ್ಷಗಳು ಹೇಳುವುದೇನು?

  • ಮಸೂದೆಗಳು ತೀವ್ರ ತುರ್ತುಪರಿಸ್ಥಿತಿಯತ್ತ (ಸೂಪರ್ ಎಮರ್ಜೆನ್ಸಿ) ಇಟ್ಟಿರುವ ಹೆಜ್ಜೆಯಾಗಿವೆ; ಭಾರತದಲ್ಲಿ ಎಂದೆಂದಿಗೂ ಪ್ರಜಾಪ್ರಭುತ್ವವನ್ನು ಅಂತ್ಯಗೊಳಿಸುವ ಪ್ರಯತ್ನವಾಗಿದೆ

  • ಮಸೂದೆಯು ಕ್ರಿಮಿನಲ್ ನ್ಯಾಯದ ನ್ಯಾಯಶಾಸ್ತ್ರಕ್ಕೆ ವಿರುದ್ಧವಾಗಿದ್ದು, ಸಂಸದೀಯ ಪ್ರಜಾಪ್ರಭುತ್ವವನ್ನು ವಿರೂಪಗೊಳಿಸುತ್ತದೆ. ಅಧಿಕಾರ ದುರುಪಯೋಗಕ್ಕೆ ಬಾಗಿಲು ತೆರೆಯಲಿದ್ದು, ಸಂವಿಧಾನದತ್ತವಾದ ಎಲ್ಲ ರಕ್ಷೆಗಳನ್ನೂ ಗಾಳಿಗೆ ತೂರುತ್ತದೆ

  • ಸರ್ಕಾರದ ಮುಖ್ಯ ಹುದ್ದೆಗಳಲ್ಲಿರುವವರು 30 ದಿನ ಜೈಲುವಾಸ ಅನುಭವಿಸಿದರೆ, ವಿಚಾರಣೆಯ ಹಂತದಲ್ಲೇ ಅವರನ್ನು ಪದಚ್ಯುತಗೊಳಿಸಲು ಮಸೂದೆಯು ಅವಕಾಶ ನೀಡುತ್ತದೆ. ಆದರೆ, ನ್ಯಾಯಾಲಯದಲ್ಲಿ ಅಪರಾಧಿ ಎಂದು ಸಾಬೀತಾಗುವವರೆಗೆ ಅವರು ಕೇವಲ ಆರೋಪಿ ಆಗಿರುತ್ತಾರೆ ಎನ್ನುವುದು ನಮ್ಮ ಸಂವಿಧಾನದ ಮುಖ್ಯ ಅಂಶವಾಗಿದೆ. ಹಾಗಾಗಿ ಈ ಮಸೂದೆ ಸಂವಿಧಾನ ವಿರೋಧಿ.

ಮಸೂದೆಯಲ್ಲೇನಿದೆ?

ಸಂವಿಧಾನ (130ನೇ ತಿದ್ದುಪಡಿ) ಮಸೂದೆಯು ಸಂವಿಧಾನದ 75, 164 ಮತ್ತು 239ಎಎ ವಿಧಿಗಳಿಗೆ ತಿದ್ದುಪಡಿ ತರುವ ಉದ್ದೇಶ ಹೊಂದಿದೆ.

ಕೇಂದ್ರ ಸಚಿವ ಸಂಪುಟಕ್ಕೆ ಪ್ರಧಾನಿ ಸೇರಿದಂತೆ ಸಚಿವರ ನೇಮಕ ಮತ್ತು ಅವರ ಜವಾಬ್ದಾರಿಗಳನ್ನು 75ನೇ ವಿಧಿಯು ವಿವರಿಸುತ್ತದೆ. 164ನೇ ವಿಧಿಯು ರಾಜ್ಯಗಳಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರ ನೇಮಕ ಪ್ರಕ್ರಿಯೆ ಹಾಗೂ ಅವರ ಹೊಣೆಗಾರಿಕೆಗಳೇನು ಎಂಬುದನ್ನು ತಿಳಿಸುತ್ತದೆ. 239ಎಎ ವಿಧಿಯು ರಾಷ್ಟ್ರೀಯ ರಾಜಧಾನಿ ದೆಹಲಿಯ ಆಡಳಿತಕ್ಕೆ ಸಂಬಂಧಿಸಿದಂತೆ ವಿಶೇಷ ಅವಕಾಶಗಳನ್ನು ಕಲ್ಪಿಸುತ್ತದೆ.

1991ರಲ್ಲಿ ಈ ವಿಧಿಯನ್ನು ಸಂವಿಧಾನಕ್ಕೆ ಸೇರ್ಪಡೆಗೊಳಿಸಲಾಗಿದ್ದು, ದೆಹಲಿಯಲ್ಲಿ ವಿಧಾನಸಭೆ ಸ್ಥಾಪನೆ ಮತ್ತು ಸಚಿವ ಸಂಪುಟ ರಚನೆಯ ಅಧಿಕಾರ ನೀಡಿದೆ. ಪೊಲೀಸ್‌, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭೂಮಿಗೆ ಸಂಬಂಧಿಸಿದ ವಿಷಯಗಳನ್ನು ಬಿಟ್ಟು, ಉಳಿದ ವಿಚಾರಗಳಲ್ಲಿ ದೆಹಲಿಗೆ ಸೀಮಿತವಾಗಿ ಕಾನೂನುಗಳನ್ನು ರೂಪಿಸುವ ಅಧಿಕಾರವನ್ನು ಇದು ದೆಹಲಿಯ ವಿಧಾನಸಭೆಗೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.