ADVERTISEMENT

ಸಂವಿಧಾನ ನಿರ್ಮಾತೃಗಳಿಗೆ ದ್ರೋಹ: ಜಗದೀಪ್‌ ಧನಕರ್‌

ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನ ಪೀಠಿಕೆಯ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 15:29 IST
Last Updated 28 ಜೂನ್ 2025, 15:29 IST
ಜಗದೀಪ್‌ ಧನಕರ್ ಕೃತಿ ಬಿಡುಗಡೆ ಮಾಡಿದರು. ವಿಆರ್‌ಎಲ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಿಜಯ ಸಂಕೇಶ್ವರ, ಲೇಖಕ ಡಿ.ಎಸ್‌.ವೀರಯ್ಯ ಚಿತ್ರದಲ್ಲಿದ್ದಾರೆ 
ಜಗದೀಪ್‌ ಧನಕರ್ ಕೃತಿ ಬಿಡುಗಡೆ ಮಾಡಿದರು. ವಿಆರ್‌ಎಲ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಿಜಯ ಸಂಕೇಶ್ವರ, ಲೇಖಕ ಡಿ.ಎಸ್‌.ವೀರಯ್ಯ ಚಿತ್ರದಲ್ಲಿದ್ದಾರೆ    

ನವದೆಹಲಿ: ‘ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆಯಬೇಕು’ ಎಂದು ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕರೆ ನೀಡಿರುವ ಬೆನ್ನಲ್ಲೇ, ‘ಈ ಪದಗಳನ್ನು ಸಂವಿಧಾನ ಪೀಠಿಕೆಯಲ್ಲಿ ಸೇರಿಸುವ ಮೂಲಕ ಸಂವಿಧಾನ ನಿರ್ಮಾತೃಗಳಿಗೆ ದ್ರೋಹ ಬಗೆಯಲಾಗಿದೆ’ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಪ್ರತಿಪಾದಿಸಿದರು. 

ಉಪರಾಷ್ಟ್ರಪತಿ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ನ ಮಾಜಿ ಸದಸ್ಯ ಡಿ.ಎಸ್‌.ವೀರಯ್ಯ ಅವರ ‘ಅಂಬೇಡ್ಕರ್‌ ಅವರ ಸಂದೇಶಗಳು’ ಕೃತಿಯ ಇಂಗ್ಲಿಷ್‌ ಹಾಗೂ ಹಿಂದಿ ಅವತರಣಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ‘ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪೀಠಿಕೆಗೆ ಸೇರಿಸಲಾದ ಪದಗಳು ಕೊಳೆಯುತ್ತಿರುವ ಗಾಯ (ನಸೂರ್‌). ಇದು ಸನಾತನ ಧರ್ಮದ ಚೈತನ್ಯ ಹಾಗೂ ಆತ್ಮಕ್ಕೆ ಮಾಡಿದ ಅಪಮಾನ’ ಎಂದು ವ್ಯಾಖ್ಯಾನಿಸಿದರು. 

‘1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ತರುವ ಮೂಲಕ 'ಸಮಾಜವಾದಿ', 'ಜಾತ್ಯತೀತ' ಮತ್ತು 'ಸಮಗ್ರತೆ' ಎಂಬ ಪದಗಳನ್ನು ಸೇರಿಸುವ ಮೂಲಕ ಪೀಠಿಕೆಯನ್ನು ಬದಲಾಯಿಸಲಾಗಿದೆ’ ಎಂದು ಒತ್ತಿ ಹೇಳಿದ ಅವರು, ‘ಇದೊಂದು ಅನ್ಯಾಯದ ಕೆಲಸ. ನಾವು ಬದಲಾಯಿಸಬಾರದದ್ದನ್ನು ಬದಲಾಯಿಸಿದ್ದೇವೆ. ಅದು ಕೂಡ ದೇಶದಲ್ಲಿ ತುರ್ತು ಪರಿಸ್ಥಿತಿ ಇದ್ದಾಗ. ಪೀಠಿಕೆಯು ಸಂವಿಧಾನದ ಆತ್ಮ. ಅದನ್ನು ಗೌರವಿಸಬೇಕಿತ್ತು. ಅದನ್ನು ವಿರೂಪಗೊಳಿಸಬಾರದು ಮತ್ತು ಕೆಡವಬಾರದು’ ಎಂದರು. 

ADVERTISEMENT

‘ಭಾರತೀಯ ಸಂವಿಧಾನದ ಪೀಠಿಕೆ ವಿಶಿಷ್ಟವಾಗಿದೆ. ಭಾರತ ಹೊರತುಪಡಿಸಿ ವಿಶ್ವದ ಯಾವುದೇ ದೇಶದಲ್ಲಿ ಸಂವಿಧಾನದ ಪೀಠಿಕೆಯನ್ನು ಬದಲಿಸಿಲ್ಲ. ಪೀಠಿಕೆಯು ಇಡೀ ಸಂವಿಧಾನದ ಅಡಿಪಾಯ. ಆದರೆ, ಭವ್ಯ ಹಾಗೂ ಉದಾತ್ತ ದೃಷ್ಟಿಕೋನವನ್ನು ಮೃದುಗೊಳಿಸಲಾಯಿತು’ ಎಂದರು. 

‘ತುರ್ತು ಪರಿಸ್ಥಿತಿಯು ಭಾರತೀಯ ಪ್ರಜಾಪ್ರಭುತ್ವದ ಅತ್ಯಂತ ಕರಾಳ ಅವಧಿ. ಜನರು ಜೈಲುಗಳಲ್ಲಿದ್ದಾಗ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಗಿತ್ತು. ಜನರು ಬಂಧನದಲ್ಲಿದ್ದು, ವಾಸ್ತವಿಕವಾಗಿ ಗುಲಾಮರಾಗಿದ್ದ ಸಮಯದಲ್ಲಿ ಸಂವಿಧಾನದ ಆತ್ಮವನ್ನು ಬದಲಾಯಿಸಲಾಯಿತು. ಈ ಕೆಲಸವನ್ನು ಹಾಸ್ಯಾಸ್ಪದವಾಗಿ, ಯಾವುದೇ ಔಚಿತ್ಯದ ಪ್ರಜ್ಞೆಯಿಲ್ಲದೆ ಮಾಡಲಾಯಿತು’ ಎಂದರು. 

‘ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಡಾ. ಬಿ.ಆರ್‌. ಅಂಬೇಡ್ಕರ್ ಆಳವಾಗಿ ಯೋಚಿಸಿ ಸಂವಿಧಾನ ರಚನೆ ಮಾಡಿದ್ದಾರೆ. ನಮ್ಮ ಸಂವಿಧಾನದ ನಿರ್ಮಾತೃಗಳು ಪೀಠಿಕೆಯಲ್ಲಿರುವ ಪದಗಳನ್ನು ಸೂಕ್ತವೆಂದು ಭಾವಿಸಿ ಸೇರಿಸಿದರು. ಸಂವಿಧಾನ ಸಭೆಯಿಂದ ಅನುಮೋದಿಸಲ್ಪಟ್ಟ ಪೀಠಿಕೆಯನ್ನು ತಿರುಚುವ, ಬದಲಾಯಿಸುವ ಮತ್ತು ನಾಶಮಾಡುವ ಬದಲು ಗೌರವಿಸಬೇಕಾಗಿತ್ತು’ ಎಂದು ಅಭಿಪ್ರಾಯಪಟ್ಟರು. 

‘ಅಂಬೇಡ್ಕರ್ ಅವರು ನಮ್ಮ ಹೃದಯದಲ್ಲಿದ್ದಾರೆ. ಅವರ ಸಂದೇಶಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. ಅವರ ಸಂದೇಶಗಳು ಪ್ರತಿ ಮನೆಯನ್ನು ತಲುಪಬೇಕು. ಅಂಬೇಡ್ಕರ್ ಅವರ ಸಂದೇಶವನ್ನು ಮೊದಲು ಸಂಸದರು ಮತ್ತು ಶಾಸಕರು ಗೌರವಿಸಿ ಅನುಕರಿಸಬೇಕು’ ಎಂದು ಸಲಹೆ ನೀಡಿದರು. 

ಈ ಕೃತಿಯನ್ನು ಇಂಗ್ಲಿಷ್‌ಗೆ ಡಾ.ಎಚ್‌.ಎಸ್‌.ಎಂ. ಪ್ರಕಾಶ್‌ ಅನುವಾದಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.