ADVERTISEMENT

ಕಾಪ್ಟರ್‌ ಪತನ: ವಿಡಿಯೊ ಸೆರೆಹಿಡಿದಿದ್ದ ವ್ಯಕ್ತಿ ಫೋನ್ ವಿಧಿ ವಿಜ್ಞಾನ ಪರೀಕ್ಷೆಗೆ

ಪಿಟಿಐ
Published 12 ಡಿಸೆಂಬರ್ 2021, 16:38 IST
Last Updated 12 ಡಿಸೆಂಬರ್ 2021, 16:38 IST
ಪತನವಾದ ಹೆಲಿಕಾಪ್ಟರ್‌ನದ್ದು ಎನ್ನಲಾದ ಚಿತ್ರ
ಪತನವಾದ ಹೆಲಿಕಾಪ್ಟರ್‌ನದ್ದು ಎನ್ನಲಾದ ಚಿತ್ರ   

ಚೆನ್ನೈ: ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜನರಲ್‌ ಬಿಪಿನ್‌ ರಾವತ್‌ ಅವರು ಪ್ರಯಾಣಿಸುತ್ತಿದ್ದರು ಎನ್ನಲಾದ ಹೆಲಿಕಾಪ್ಟರ್‌ನ ಕೊನೇ ಕ್ಷಣದ ಹಾರಾಟವನ್ನು ಚಿತ್ರೀಕರಿಸಿದ್ದ ವ್ಯಕ್ತಿಯ ಮೊಬೈಲ್‌ ಫೋನ್‌ ಅನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಮಿಳುನಾಡಿನ ಸೂಳೂರು ಎಂಬಲ್ಲಿ ಸಂಭವಿಸಿದ ವಾಯುಪಡೆಯ ಹೆಲಿಕಾಪ್ಟರ್‌ ದುರಂತದಲ್ಲಿ ಸಿಡಿಎಸ್‌ ಬಿಪಿನ್‌ ರಾವತ್‌ ಮತ್ತು ಅವರ ಪತ್ನಿ ಮಧುಲಿಕಾ ಸೇರಿ 13 ಮಂದಿ ಮಡಿದಿದ್ದರು. ಈ ಹೆಲಿಕಾಪ್ಟರ್‌ ಹಾರಾಟ ನಡೆಸುತ್ತಿರುವಾಗಲೇ ಮಂಜಿನಲ್ಲಿ ಮರೆಯಾಗುವುದು, ಅದರ ಹಾರಾಟದ ಸದ್ದು ಏಕಾಏಕಿ ನಿಲ್ಲುವ ಅಂಶಗಳುಳ್ಳ ವಿಡಿಯೊವನ್ನು ಕೊಯಮತ್ತೂರು ಮೂಲದ ಮದುವೆ ಛಾಯಾಗ್ರಾಹ ಜೋ ಎಂಬುವವರು ತಮ್ಮ ಮೊಬೈಲ್‌ ಫೋನ್‌ನಲ್ಲಿ ಚಿತ್ರೀಕರಿಸಿದ್ದರು.

ನೀಲಗಿರಿ ಜಿಲ್ಲೆಯ ಸೂಳೂರು ಸಮೀಪದ ಕಟ್ಟೇರಿಗೆ ತನ್ನ ಸ್ನೇಹಿತರೊಂದಿಗೆ ತೆರಳಿದ್ದ ಜೋ, ಕುತೂಹಲದಿಂದ ಹೆಲಿಕಾಪ್ಟರ್‌ನ ಹಾರಾಟದ ದೃಶ್ಯವನ್ನು ಸೆರೆ ಹಿಡಿದಿದ್ದರು. ಈ ಗುಂಪು, ಕಾಡುಪ್ರಾಣಿಗಳ ನಿರಂತರ ಸಂಚಾರವಿರುವ ನಿಷೇಧಿತ, ನಿರ್ಜನ, ದಟ್ಟ ಅರಣ್ಯಕ್ಕೆ ಏಕೆ ತೆರಳಿತ್ತು ಎಂಬುದರ ನಿಟ್ಟಿನಲ್ಲೂ ತಮಿಳುನಾಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ADVERTISEMENT

ಇದಿಷ್ಟೇ ಅಲ್ಲದೆ, ಪೊಲೀಸರು ದುರಂತ ನಡೆದ ದಿನದ ಸ್ಥಳೀಯ ಹವಾಮಾನ ವರದಿಗಳನ್ನೂ ತನಿಖೆಯ ಭಾಗವಾಗಿ ಭಾರತೀಯ ಹವಾಮಾನ ಇಲಾಖೆಯಿಂದ ತರಿಸಿಕೊಂಡಿದ್ದಾರೆ. ಸ್ಥಳೀಯರ ವಿಚಾರಣೆಯನ್ನೂ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.