ADVERTISEMENT

ಲಾಕ್‌ಡೌನ್‌ ಪರಿಣಾಮ: ಆಹಾರ, ವಸತಿ ಇಲ್ಲದೇ ತತ್ತರಿಸಿದ ವಲಸೆ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 2:11 IST
Last Updated 30 ಮಾರ್ಚ್ 2020, 2:11 IST
   

ನವದೆಹಲಿ: ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಸಲುವಾಗಿ ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆಯಾಗಿದ್ದು, ಲಕ್ಷಾಂತರ ಕೂಲಿ-ಕಾರ್ಮಿಕರು, ವಲಸಿಗರನ್ನು ಸಂಕಷ್ಟಕ್ಕೀಡು ಮಾಡಿದೆ.

ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ದೇಶದ ಇತರ ಮಹಾನಗರಗಳಲ್ಲಿ ವಾಸಿಸುತ್ತಿದ್ದ ವಲಸೆ ಕಾರ್ಮಿಕರು ತಮ್ಮ ಮನೆಗೆ ತೆರಳಲು ಕಾಲ್ನಡಿಗೆ ಮೂಲಕ ದೀರ್ಘ ಪ್ರಯಾಣ ಪ್ರಾರಂಭಿಸಿದ್ದಾರೆ.

ಲಾಕ್‌ಡೌನ್‌ ಘೋಷಣೆಯಾದ ನಂತರ ಮಹಾನಗರಗಳಲ್ಲಿನ ವ್ಯಾಪಾರ ವಹಿವಾಟುಗಳು ಸಂಪೂರ್ಣವಾಗಿ ನಿಂತಿವೆ. ತಾವು ಕೆಲಸಕ್ಕಿದ್ದ ಜಾಗದಲ್ಲೇ ಆಹಾರ ಮತ್ತು ನೆಲೆ ಕಂಡುಕೊಂಡಿದ್ದ ವಲಸೆ ಕಾರ್ಮಿಕರು ಅತಂತ್ರರಾಗಿದ್ದು, ಈಗ ಅವರು ತಮ್ಮ ಮನೆಗೆ ತೆರಳಲೇಬೇಕಾದ ಅನಿವಾರ್ಯತೆ ಬಂದೊದಗಿದೆ.

ADVERTISEMENT

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೆಲಸಕ್ಕಿದ್ದ ವಲಸೆ ಕಾರ್ಮಿಕರು ತಮಗೆ ಸಂಬಂಧಿಸಿದ ಸಾಮಾನು, ಹಾಸಿಗೆ, ಹೊದಿಗೆಗಳನ್ನು ತೆಗೆದುಕೊಂಡು ಕಾಲ್ನಡಿಗೆಯಲ್ಲಿಯೇ ತಮ್ಮ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಇದೆಲ್ಲದರ ನಡುವೆ ಕೆಲವರು ಪೊಲೀಸರ ಲಾಠಿ ಏಟನ್ನು ಸಹ ತಿಂದಿದ್ದಾರೆ.

ಭಾರತದಾದ್ಯಂತ ಲಾಕ್‌ಡೌನ್‌ ಮಾಡಿರುವುದನ್ನು ಖಂಡಿಸಿ ದಕ್ಷಿಣ ಕೇರಳದಲ್ಲಿ ಸಾವಿರಾರು ವಲಸೆ ಕಾರ್ಮಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಸರಿಯಾಗಿ ಊಟ ಮಾಡಿಲ್ಲವೆಂದು ಅವರು ಆರೋಪಿಸಿದ್ದಾರೆ.

ವಲಸೆ ಕಾರ್ಮಿಕರಲ್ಲಿ ಅನೇಕರು ತಾವು ಕೆಲಸ ಮಾಡುವ ಅಂಗಡಿ, ಕಟ್ಟಡ ನಿರ್ಮಾಣ ಸ್ಥಳ ಮತ್ತು ಹೋಟೆಲ್‌ಗಳಲ್ಲೇ ಆಹಾರ ಮತ್ತು ಆಶ್ರಯ ಪಡೆದಿದ್ದರು. ಕೊರೊನಾ ವೈರಸ್‌ ಸೋಂಕು ಹರಡುವಿಕೆ ಸಂಬಂಧ ಘೋಷಿಸಿದ ಹಠಾತ್‌ ಲಾಕ್‌ಡೌನ್‌ ಪರಿಣಾಮ ಆ ಎಲ್ಲ ಕಾರ್ಮಿಕರು ಆಹಾರ ಮತ್ತು ಆಶ್ರಯ ಕಳೆದುಕೊಳ್ಳುವಂತಾಗಿದೆ.

ಇದೇ ಪರಿಸ್ಥಿತಿ ಮುಂದುವರೆದರೆ ಕಾರ್ಮಿಕರಲ್ಲಿ ಹತಾಶೆ ಹೆಚ್ಚುಗುತ್ತದೆ. ಇದರಿಂದ ಹಿಂಸಾಚಾರ ಭುಗಿಲೆದ್ದು ಪರಿಸ್ಥಿತಿ ಹದಗೆಡಬಹುದು ಎಂದು ಕಾರ್ಮಿಕ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.