ADVERTISEMENT

ಲಾಕ್‌ಡೌನ್ 3.0: ಕಾರ್ಮಿಕ ಆಯುಕ್ತರ ಬಳಿ ಇನ್ನೂ ಇಲ್ಲ ವಲಸೆ ಕಾರ್ಮಿಕರ ಅಂಕಿಅಂಶ

ಆರ್‌ಟಿಐ ಅರ್ಜಿಯಿಂದ ಮಾಹಿತಿ ಬಹಿರಂಗ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮೇ 2020, 10:27 IST
Last Updated 6 ಮೇ 2020, 10:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್–19 ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಲಾಕ್‌ಡೌನ್ ಘೋಷಿ ತಿಂಗಳೇ ಕಳೆದರೂ ದೇಶದ ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಅಂಕಿಅಂಶ ಲಭ್ಯವಿಲ್ಲವಂತೆ. ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅನ್ವಯ ಸಲ್ಲಿಕೆಯಾದ ಅರ್ಜಿಯೊಂದಕ್ಕೆ ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿ ನೀಡಿರುವ ಉತ್ತರದಿಂದ ಈ ಮಾಹಿತಿ ಬಹಿರಂಗವಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಮೂರು ದಿನಗಳ ಒಳಗೆ ದೇಶದಾದ್ಯಂತ ಇರುವ ವಲಸೆ ಕಾರ್ಮಿಕರ ಸಮೀಕ್ಷೆ ನಡೆಸುವಂತೆ ಏಪ್ರಿಲ್ ಆರಂಭದಲ್ಲಿ ಆದೇಶಿಸಲಾಗಿತ್ತು. ಈ ಬಗ್ಗೆ ಮುಖ್ಯ ಕಾರ್ಮಿಕ ಆಯುಕ್ತ ರಾಜನ್ ವರ್ಮಾ ಅವರು ಏಪ್ರಿಲ್ 8ರಂದು ದೇಶದಾದ್ಯಂತ ಇರುವ 20 ಪ್ರಾದೇಶಿಕ ಕಚೇರಿಗಳಿಗೆ ಪತ್ರ ಬರೆದಿದ್ದರು. ಪರಿಹಾರ ಶಿಬಿರಗಳಲ್ಲಿರುವ ಮತ್ತು ಇತರ ವಲಸೆ ಕಾರ್ಮಿಕರ ಜಿಲ್ಲೆ ಮತ್ತು ರಾಜ್ಯವಾರು ಸಮೀಕ್ಷೆಯನ್ನು ಮೂರು ದಿನಗಳ ಒಳಗಾಗಿ ನಡೆಸುವಂತೆ ಅವರು ನಿರ್ದೇಶನ ನೀಡಿದ್ದರು. ಪ್ರತಿ ದಿನದ ವಿವರವನ್ನು ಸಲ್ಲಿಸಬೇಕೆಂದೂ ಕಟ್ಟುನಿಟ್ಟಿನ ಸೂಚನೆಯನ್ನೂ ಪತ್ರದ ಮೂಲಕ ನೀಡಿದ್ದರು.

ಆದಾಗ್ಯೂ, ವಲಸೆ ಕಾರ್ಮಿಕರ ಅಂಕಿಅಂಶದ ಮಾಹಿತಿ ಕೋರಿ ಸಲ್ಲಿಸಿರುವ ಅರ್ಜಿಗೆ, ಅಂತಹ ಮಾಹಿತಿ ನಮ್ಮ ಬಳಿ ಇಲ್ಲ ಎಂದು ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿಯ ಮುಖ್ಯ ಮಾಹಿತಿ ಅಧಿಕಾರಿ ಉತ್ತರ ನೀಡಿದ್ದಾರೆ. ಆರ್‌ಟಿಐ ಕಾರ್ಯಕರ್ತ ವೆಂಕಟೇಶ್ ನಾಯಕ್ ಅವರು ಅರ್ಜಿ ಸಲ್ಲಿಸಿದ್ದರು.

ADVERTISEMENT

ಲಾಕ್‌ಡೌನ್‌ನಿಂದಾಗಿ ಹತ್ತಾರು ಸಾವಿರ ವಲಸೆ ಕಾರ್ಮಿಕರು ದೇಶದ ವಿವಿಧ ನಗರಗಳು ಮತ್ತು ಪಟ್ಟಣಗಳಲ್ಲಿ ಸಿಲುಕಿದ್ದಾರೆ. ಉದ್ಯೋಗ, ಆದಾಯವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ.

ಕಾರ್ಮಿಕರ ಸಮೀಕ್ಷೆ ನಡೆಸುವಂತೆ ಏಪ್ರಿಲ್ 8ರಂದು ಮುಖ್ಯ ಕಾರ್ಮಿಕ ಆಯುಕ್ತರು ಬರೆದ ಪತ್ರವನ್ನು ಉಲ್ಲೇಖಿಸಿ ವೆಂಕಟೇಶ್ ನಾಯಕ್ ಅವರು ಏಪ್ರಿಲ್ 21ರಂದು ಕಾರ್ಮಿಕರ ಅಂಕಿಅಂಶ ಕೋರಿ ಅರ್ಜಿ ಸಲ್ಲಿಸಿದ್ದರು. ಮಹಿಳಾ ಕಾರ್ಮಿಕರೂ ಸೇರಿದಂತೆ ವಿವಿಧೆಡೆ ಸಿಲುಕಿಕೊಂಡಿರುವ ಕಾರ್ಮಿಕರ ಮಾಹಿತಿ, ಕ್ಷೇತ್ರವಾರು ಸಂಖ್ಯೆಯ ಮಾಹಿತಿಯನ್ನು ಆರ್‌ಟಿಐ ಅರ್ಜಿಯಲ್ಲಿ ಕೇಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.