ADVERTISEMENT

ಕೋವ್ಯಾಕ್ಸಿನ್‌: ಉತ್ಪಾದನೆ, ಪೂರೈಕೆಗೆ 4 ತಿಂಗಳು ಬೇಕು, ಭಾರತ್‌ ಬಯೋಟೆಕ್‌

​ಪ್ರಜಾವಾಣಿ ವಾರ್ತೆ
Published 28 ಮೇ 2021, 14:50 IST
Last Updated 28 ಮೇ 2021, 14:50 IST
   

ನವದೆಹಲಿ: ಲಸಿಕೆ ಉತ್ಪಾದಿಸಿ ಅಂತಿಮವಾಗಿ ಪೂರೈಸಲು 4 ತಿಂಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಪರೀಕ್ಷೆ, ತಂತ್ರಜ್ಞಾನ ಮತ್ತು ಅನುಮತಿ ಪ್ರಕ್ರಿಯೆ ಮೇಲೆ ಉತ್ಪಾದನೆಯ ಅವಧಿ ನಿರ್ಧಾರವಾಗುತ್ತದೆ ಎಂದು ಭಾರತ್‌ ಬಯೋಟೆಕ್‌ ಶುಕ್ರವಾರ ಮಾಹಿತಿ ನೀಡಿದೆ.

ಕೋವ್ಯಾಕ್ಸಿನ್‌ ಲಸಿಕೆಯ ಉತ್ಪಾದನೆ, ಪರೀಕ್ಷೆ ಮತ್ತು ಬಿಡುಗಡೆ ಪ್ರಕ್ರಿಯೆಗೆ ಸುಮಾರು 120 ದಿನಗಳು ಬೇಕಾಗುತ್ತದೆ. ತಂತ್ರಜ್ಞಾನದ ಚೌಕಟ್ಟು, ನಿಯಮಗಳ ಚೌಕಟ್ಟು ಮತ್ತು ಅನುಮತಿ ಪಡೆಯಲು ತೆಗೆದುಕೊಳ್ಳುವ ಸಮಯಗಳ ಮೇಲೆ ಈ ಅವಧಿ ನಿರ್ಧಾರವಾಗುತ್ತದೆ. ಲಸಿಕೆ ಉತ್ಪಾದನೆ ವೇಳೆ ನೂರಾರು ಹಂತಗಳಿರುತ್ತವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಭಾರತ್‌ ಬಯೋಟೆಕ್‌ ತಿಳಿಸಿದೆ.

ಈ ವರ್ಷ ಮಾರ್ಚ್‌ ತಿಂಗಳಲ್ಲಿ ಆರಂಭಿಸಿದ ಲಸಿಕೆ ಉತ್ಪಾದನೆಯ ಪೂರೈಕೆಯು ಜೂನ್‌ ತಿಂಗಳಿನಲ್ಲಷ್ಟೇ ಸಾಧ್ಯವಾಗಲಿದೆ ಎಂದು ಭಾರತ್‌ ಬಯೋಟೆಕ್‌ ಸ್ಪಷ್ಟ ಪಡಿಸಿದೆ.

ADVERTISEMENT

ಲಸಿಕೆ ಹಾಕಿಸುವ ಪ್ರಕ್ರಿಯೆ ಪರಿಣಾಮಕಾರಿಯಾಗಿ ಯಶಸ್ವಿಯಾಗಬೇಕಾದರೆ ಅಂತಾರಾಷ್ಟ್ರೀಯ ಪೂರೈಕೆ ಸರಪಳಿ, ಉತ್ಪಾದಕರು, ನಿಯಂತ್ರಕರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಏಜೆನ್ಸಿಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಭಾರತ್‌ ಬಯೋಟೆಕ್‌ ಕಿವಿಮಾತು ಹೇಳಿದೆ.

ಸೆಂಟ್ರಲ್‌ ಡ್ರಗ್ಸ್‌ ಸ್ಟಾಂಡರ್ಡ್‌ ಕಂಟ್ರೊಲ್‌ ಆರ್ಗನೈಸೇಷನ್‌(ಸಿಡಿಎಸ್‌ಸಿಒ) ಮಾರ್ಗಸೂಚಿಗೆ ಅನುಸಾರವಾಗಿ ಎಲ್ಲ ಲಸಿಕೆಗಳನ್ನು ಪರೀಕ್ಷಿಸಿ ಕೇಂದ್ರ ಸರ್ಕಾರದ ಸೆಂಟ್ರಲ್‌ ಡ್ರಗ್ಸ್‌ ಲ್ಯಾಬೊರೇಟರಿಗೆ ಕಳುಹಿಸಲಾಗುತ್ತದೆ. ಕೇಂದ್ರ ಸರ್ಕಾರದಿಂದ ನಿಗದಿಪಡಿಸಿದ ಲಸಿಕೆಗಳ ಆಧಾರದಲ್ಲಿ ರಾಜ್ಯ ಮತ್ತು ಕೇಂದ್ರಕ್ಕೆ ಪೂರೈಕೆ ಮಾಡಲಾಗುತ್ತದೆ. ಭಾರತ್‌ ಬಯೋಟೆಕ್‌ ಕೇಂದ್ರದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಲಸಿಕಾ ಕೇಂದ್ರಗಳಿಗೆ ಪೂರೈಕೆ ಮಾಡಲು ಎರಡು ದಿನಗಳು ಬೇಕಾಗುತ್ತದೆ. ಸರ್ಕಾರದಿಂದ ಜಿಲ್ಲೆಗಳಿಗೆ, ತಾಲೂಕು ಕೇಂದ್ರಗಳಿಗೆ ಪೂರೈಕೆಯಾಗಲು ಹೆಚ್ಚುವರಿ ಕಾಲಾವಧಿ ತೆಗೆದುಕೊಳ್ಳುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.