ADVERTISEMENT

‘ಡೆಲ್ಟಾ ಪ್ಲಸ್‌’ ರೂಪಾಂತರಿತ ತಳಿ: ದೇಶದಲ್ಲಿ 22 ಪ್ರಕರಣ ಪತ್ತೆ

ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶದಲ್ಲಿ ಕೊರೊನಾ ರೂಪಾಂತರಿತ ತಳಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 20:36 IST
Last Updated 22 ಜೂನ್ 2021, 20:36 IST
ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಬೆಂಗಳೂರಿನ ನಾಗರಬಾವಿ ಮುಖ್ಯ ರಸ್ತೆ ಬಳಿಯ ಅರೋಗ್ಯ ಕೇಂದ್ರದ ಮುಂದೆ ಮಂಗಳವಾರ ಸೇರಿದ್ದ ಜನಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ.
ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಬೆಂಗಳೂರಿನ ನಾಗರಬಾವಿ ಮುಖ್ಯ ರಸ್ತೆ ಬಳಿಯ ಅರೋಗ್ಯ ಕೇಂದ್ರದ ಮುಂದೆ ಮಂಗಳವಾರ ಸೇರಿದ್ದ ಜನಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ.   

ನವದೆಹಲಿ: ಕೊರೊನಾ ಎರಡನೇ ಅಲೆಯಿಂದ ದೇಶವು ಚೇತರಿಸಿಕೊಳ್ಳುವುದಕ್ಕೂ ಮುನ್ನ, ಅದರ ಇನ್ನೊಂದು ರೂಪಾಂತರಿತ ತಳಿ ‘ಡೆಲ್ಟಾ ಪ್ಲಸ್‌’ ಹಲವೆಡೆ ಕಾಣಿಸಿಕೊಂಡಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಈ ಸೋಂಕಿನ 22 ಪ್ರಕರಣಗಳು ಪತ್ತೆಯಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

22 ಪ್ರಕರಣಗಳ ಪೈಕಿ ಮಹಾರಾಷ್ಟ್ರದ ರತ್ನಗಿರಿ ಹಾಗೂ ಜಲಗಾಂವ್‌ ಜಿಲ್ಲೆಯಲ್ಲಿ 16 ಪ್ರಕರಣಗಳು ವರದಿಯಾಗಿವೆ. ಕೇರಳದ ಪಾಲಕ್ಕಾಡ್‌ ಮತ್ತು ಪತ್ತನಂತಿಟ್ಟ ಜಿಲ್ಲೆಗಳು ಹಾಗೂ ಮಧ್ಯಪ್ರದೇಶದ ಭೋಪಾಲ್‌ ಮತ್ತು ಶಿವಪುರಿ ಜಿಲ್ಲೆಗಳಲ್ಲಿ ಉಳಿದ ಪ್ರಕರಣಗಳು ಕಂಡುಬಂದಿವೆ ಎಂದು ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡೆಲ್ಟಾ ಪ್ಲಸ್‌ ತಳಿ ಕಾಣಿಸಿಕೊಂಡಿರುವ ರಾಜ್ಯಗಳಿಗೆ ಕೆಲವು ಸಲಹೆಗಳನ್ನು ನೀಡಲಾಗಿದೆ. ಕೋವಿಡ್‌ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೋಂಕಿತರ ಸಂಖ್ಯೆಯು ಏರಿಕೆಯಾಗದಂತೆ ನೋಡಿಕೊಳ್ಳಬೇಕು, ಸೋಂಕಿತರ ಮಾದರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಅಧಿಕೃತ ಪ್ರಯೋಗಾಲಯಗಳಿಗೆ ಕಳುಹಿಸಬೇಕು ಎಂದು ರಾಜ್ಯಗಳಿಗೆ ಸೂಚಿಸಲಾಗಿದೆ.

ಡೆಲ್ಟಾ ಪ್ಲಸ್‌ ತಳಿಯು ಹೆಚ್ಚಿನ ಪ್ರಸರಣದ ಸಾಮರ್ಥ್ಯವನ್ನು ಹೊಂದಿದೆ. ಇನ್ನಷ್ಟು ಗಟ್ಟಿಯಾಗಿ ಶ್ವಾಸಕೋಶಕ್ಕೆ ಅಂಟಿಕೊಳ್ಳುವ ಶಕ್ತಿ ಹೊಂದಿದೆ ಹಾಗೂ ಪ್ರತಿಕಾಯ ಚಿಕಿತ್ಸೆಗೆ ಸ್ಪಂದಿಸದಷ್ಟು ಶಕ್ತಿಯುತವಾಗಿದೆ. ಆದರೆ, ಸದ್ಯಕ್ಕೆ ಅದರ ಹರಡುವಿಕೆಯ ಪ್ರಮಾಣ ಕಡಿಮೆ ಇದೆಎಂದು ಕೊರೊನಾ ವೈರಾಣುಗಳ ಮ್ಯಾಪಿಂಗ್‌ ಮಾಡುವ ಭಾರತೀಯ ವಿಜ್ಞಾನಿಗಳು ಸಚಿವಾಲಯಕ್ಕೆ ತಿಳಿಸಿದ್ದಾರೆ.

‘ಕೆ417ಎನ್‌’ ಎಂದು ಗುರುತಿಸಲಾಗುವ ಈ ತಳಿಯು ಭಾರತವಲ್ಲದೆ ಅಮೆರಿಕ, ಬ್ರಿಟನ್‌, ಪೋರ್ಚುಗಲ್‌, ಸ್ವಿಡ್ಜರ್ಲೆಂಡ್‌, ಜಪಾನ್‌, ಪೋಲಂಡ್‌, ನೇಪಾಳ, ಚೀನಾ ಹಾಗೂ ರಷ್ಯಾದಲ್ಲೂ ಕಾಣಿಸಿದೆ.

ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆಗಳು ಈ ತಳಿಯ ವಿರುದ್ಧವೂ ಪರಿಣಾಮಕಾರಿ ಎನಿಸಬಲ್ಲವು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಪ್ರಕರಣ ಇಳಿಕೆ:
‘ದೇಶದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಮೇ 7ರಂದು ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿದ್ದವು. ಆ ದಿನದ ಸಂಖ್ಯೆಗೆ ಹೋಲಿಸಿದರೆ ಪ್ರತಿನಿತ್ಯ ವರದಿಯಾಗುವ ಪ್ರಕರಣಗಳ ಸಂಖ್ಯೆಯಲ್ಲಿ ಶೇ 90ರಷ್ಟು ಇಳಿಕೆ ಕಂಡು ಬಂದಿದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ 8ಗಂಟೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 42,640 ಪ್ರಕರಣಗಳು ವರದಿಯಾಗಿವೆ. ಇದು ಕಳೆದ 91 ದಿನಗಳಲ್ಲಿ ವರದಿಯಾದ ಕನಿಷ್ಠ ಸಂಖ್ಯೆಯಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ಲಸಿಕೆ ನೀಡಿಕೆ: ಹೊಸ ದಾಖಲೆ

ನವದೆಹಲಿ: ಜೂನ್‌ 21ರಂದು ಹಮ್ಮಿಕೊಂಡಿದ್ದ ಲಸಿಕೆ ಮೇಳದಲ್ಲಿ ದಾಖಲೆಯ 88.09 ಲಕ್ಷ ಡೋಸ್‌ಗಳನ್ನು ನೀಡಲಾಗಿದ್ದು, ಇದೊಂದು ಮೈಲುಗಲ್ಲು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ನಗರ ಪ್ರದೇಶಗಳಿಗೆ ಹೋಲಿಸಿದರೆ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಜನರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ನಗರ ಪ್ರದೇಶದಲ್ಲಿ ಶೇ 36.32ರಷ್ಟು ಜನರಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ 63.68ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದೆ.

ಕೋವಿಡ್‌ ಲಸಿಕೆಯ ಹೆಚ್ಚು ಡೋಸ್‌ಗಳನ್ನು ನೀಡಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ, ಬಿಹಾರ, ಹರಿಯಾಣ, ಗುಜರಾತ್‌, ರಾಜಸ್ಥಾನ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಅಸ್ಸಾಂ ಇವೆ ಎಂದು ಸಚಿವಾಲಯದ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ತಿಳಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.