ADVERTISEMENT

ಒಂದೇ ದಿನ 34 ಪ್ರಕರಣ: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 635ಕ್ಕೆ ಏರಿಕೆ

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 635ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2020, 1:17 IST
Last Updated 4 ಮೇ 2020, 1:17 IST
   
""
""
""

ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಒಂದೇ ದಿನ 34 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 635ಕ್ಕೆ ಏರಿಕೆಯಾಗಿದೆ.

ದಾವಣಗೆರೆಯಲ್ಲಿ 21, ಕಲಬುರ್ಗಿಯಲ್ಲಿ 6, ಬೆಂಗಳೂರಿನಲ್ಲಿ 4 ಹಾಗೂ ಬಾಗಲಕೋಟೆಯಲ್ಲಿ 3 ಪ್ರಕರಣಗಳು ಹೊಸದಾಗಿ ವರದಿಯಾಗಿವೆ.ಬೆಂಗಳೂರಿನ ಪಾದರಾಯನಪುರದಿಂದನಾಲ್ಕು ಪ್ರಕರಣಗಳು ವರದಿಯಾಗಿದ್ದು, 350ನೇ ರೋಗಿಯ ಸಂಪರ್ಕದಿಂದ ಮೂವರು ಮಹಿಳೆಯರು ಸೋಂಕಿತರಾಗಿದ್ದಾರೆ. ಕಂಟೈನ್‌ಮೆಂಟ್‌ ವಾರ್ಡ್‌ನಲ್ಲಿ ಸಂಚರಿಸಿದ್ದ 24 ವರ್ಷದ ಯುವಕನಿಗೂ ಸೋಂಕು ತಗುಲಿದೆ. ಇದರಿಂದಾಗಿ ಪಾದರಾಯನಪುರದಲ್ಲಿ ಸೋಂಕಿತರ ಸಂಖ್ಯೆ 35ಕ್ಕೆ ತಲುಪಿದೆ.

ಕಲಬುರ್ಗಿಯಲ್ಲಿ ನಾಲ್ಕು ಮಂದಿಗೆ ಹೇಗೆ ಸೋಂಕು ತಗುಲಿತು ಎಂಬುದು ಪತ್ತೆಯಾಗಿಲ್ಲ. ಅವರು ಶೀತ ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಎದುರಿಸುತ್ತಿದ್ದಾರೆ. 532ನೇ ರೋಗಿಯ ಸಂಪರ್ಕದಿಂದ 13 ವರ್ಷದ ಬಾಲಕಿ ಹಾಗೂ 54 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ADVERTISEMENT

ಬಾಗಲಕೋಟೆಯಲ್ಲಿ 380ನೇ ರೋಗಿಯ ಸಂಪರ್ಕದಿಂದ 68 ವರ್ಷದ ವೃದ್ಧ ಹಾಗೂ 60 ವರ್ಷದ ಮಹಿಳೆ ಸೋಂಕಿತರಾಗಿದ್ದಾರೆ. ಹೊಸದಾಗಿ 22 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಲ್ಲಿ 11 ಮಂದಿ ಮೈಸೂರಿನವರಾಗಿದ್ದಾರೆ. ಪರಿಣಾಮ ಅಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13ಕ್ಕೆ ಇಳಿಕೆಯಾಗಿದೆ. ಈವರೆಗೆ 293 ಮಂದಿ ಗುಣಮುಖರಾಗಿದ್ದಾರೆ. ಭಾನುವಾರ ಒಂದೇ ದಿನ 5,168 ಮಂದಿಯ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಒಂದು ದಿನ ಮಾಡಿದ ಗರಿಷ್ಠ ಪರೀಕ್ಷೆ ಇದಾಗಿದೆ.

ಇಂದಿನಿಂದ ಲಾಕ್‌ಡೌನ್‌ 3.0
ನವದೆಹಲಿ: ದೇಶದಾದ್ಯಂತ ಮೂರನೇ ಹಂತದ ಲಾಕ್‌ಡೌನ್‌ ಸೋಮವಾರದಿಂದ ಜಾರಿಯಾಗಿದ್ದು, ಮೇ 17ರವರೆಗೆ ಮುಂದುವರಿಯಲಿದೆ.

‘ಈ ಬಾರಿ ಸಾಕಷ್ಟು ವಿನಾಯಿತಿಗಳನ್ನು ನೀಡಲಾಗಿದೆ. ಕೊರೊನಾ ವೈರಸ್‌ ನಿಯಂತ್ರಣದಲ್ಲಿ ಈವರೆಗೆ ಆಗಿರುವ ಸಾಧನೆ ವ್ಯರ್ಥವಾಗಬಾರದೆಂಬ ಕಾರಣಕ್ಕೆ ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ನಿರ್ಬಂಧಗಳು ಮುಂದುವರಿಯಲಿವೆ’ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಂಟೈನ್‌ಮೆಂಟ್‌ ಪ್ರದೇಶವನ್ನು ಬಿಟ್ಟು ಉಳಿದ ಎಲ್ಲಾ ವಲಯಗಳಲ್ಲೂ ಬೆಳಿಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಸಾರ್ವಜನಿಕರ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮದ್ಯ ಮಾರಾಟಕ್ಕೆ ಅವಕಾಶ: ಕಂಟೈನ್‌ಮೆಂಟ್‌ ಪ್ರದೇಶವನ್ನು ಬಿಟ್ಟು ಎಲ್ಲಾ ವಲಯಗಳಲ್ಲೂ ಪ್ರತ್ಯೇಕವಾಗಿರುವ ಅಂಗಡಿಗಳಲ್ಲಿ (ಮಾರ್ಕೆಟ್‌ ಅಥವಾ ಮಾಲ್‌ಗಳಲ್ಲಿನ ಮಳಿಗೆ ಬಿಟ್ಟು) ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.