ADVERTISEMENT

ಆಳ-ಅಗಲ: ದೇಶದಲ್ಲಿ ಕೋವಿಡ್ ಲಸಿಕೆ ಕೊರತೆ?

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 19:30 IST
Last Updated 15 ಏಪ್ರಿಲ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

‘ಕೋವಿಡ್‌-19 ಲಸಿಕೆ ಕೊರತೆಯಾಗಿದೆ. ತಕ್ಷಣವೇ ಲಸಿಕೆ ಪೂರೈಸದಿದ್ದರೆ, ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಬೇಕಾಗುತ್ತದೆ’ ಎಂದು ದೇಶದ 10 ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಕೆಲವು ರಾಜ್ಯಗಳಲ್ಲಿ ಹಲವು ಲಸಿಕಾ ಕೇಂದ್ರಗಳನ್ನು ಮುಚ್ಚಲಾಗಿದೆ. ಕೇಂದ್ರ ಸರ್ಕಾರವು ಹಾಕಿಕೊಂಡಿರುವ ಗುರಿಯನ್ನು ಮುಟ್ಟಲು ಭಾರಿ ಪ್ರಮಾಣದಲ್ಲಿ ಲಸಿಕೆಯ ಡೋಸ್‌ಗಳು ಅಗತ್ಯವಿದೆ. ಇವು ಪೂರೈಕೆ ಆಗದಿದ್ದಲ್ಲಿ, ಲಸಿಕೆ ಕಾರ್ಯಕ್ರಮಕ್ಕೆ ಹಿನ್ನಡೆ ಆಗುತ್ತದೆ ಎಂದು ರಾಜ್ಯ ಸರ್ಕಾರಗಳು ವಿವರಿಸಿವೆ.

ಭಾರತವು ಜುಲೈ ಅಂತ್ಯದ ವೇಳೆಗೆ 30 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹಾಕಿಕೊಂಡಿದೆ. 30 ಕೋಟಿ ಜನರಿಗೆ 2 ಡೋಸ್‌ನಂತೆ ಲಸಿಕೆ ನೀಡಿದರೆ, ಒಟ್ಟು 60 ಕೋಟಿ ಡೋಸ್‌ಗಳಷ್ಟು ಲಸಿಕೆ ಬೇಕಾಗುತ್ತದೆ. ಇದರಲ್ಲಿ ಶೇ 6.5ರಷ್ಟು ಲಸಿಕೆ ಪೋಲಿನ ಪ್ರಮಾಣ ಸೇರಿಸಿಕೊಂಡರೆ, 64 ಕೋಟಿ ಡೋಸ್‌ಗಳಷ್ಟು ಲಸಿಕೆ ಬೇಕಾಗುತ್ತದೆ. ಆದರೆ ದೇಶದಲ್ಲಿ ಲಸಿಕೆ ತಯಾರಿಕೆ ಪ್ರಮಾಣ ಈ ಮಟ್ಟದಲ್ಲಿ ಇಲ್ಲದ ಕಾರಣ, ಈ ಕಾಲಮಿತಿಯಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.

ಪ್ರತಿದಿನ ಗರಿಷ್ಠ ಸಂಖ್ಯೆಯಲ್ಲಿ ಕೋವಿಡ್‌ ಲಸಿಕೆ ನೀಡುತ್ತಿರುವ ದೇಶಗಳ ಸಾಲಿನಲ್ಲಿ ಭಾರತವು ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಈಗ ಪ್ರತಿದಿನ ಸರಾಸರಿ 32 ಲಕ್ಷ ಡೋಸ್‌ನಷ್ಟು ಲಸಿಕೆ ನೀಡಲಾಗುತ್ತಿದೆ. ಆದರೆ ಇಷ್ಟೇ ಮಟ್ಟದಲ್ಲಿ ಲಸಿಕೆ ಪೂರೈಕೆ ಆಗುತ್ತಿಲ್ಲವಾದುದರಿಂದ, ಲಸಿಕೆ ಕಾರ್ಯಕ್ರಮಕ್ಕೆ ಹಿನ್ನಡೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿದಿನ ನೀಡಲಾಗುತ್ತಿರುವ ಡೋಸ್‌ಗಳ ಸಂಖ್ಯೆ ಇಳಿಕೆಯಾಗುವ ಅಪಾಯವಿದೆ.

ADVERTISEMENT

10 ರಾಜ್ಯಗಳಲ್ಲಿ ಲಸಿಕೆ ಕೊರತೆ

ನಮಗೆ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪೂರೈಕೆಯಾಗುತ್ತಿಲ್ಲ. ಈಗ ಇರುವ ಲಸಿಕೆ ಮೂರು-ನಾಲ್ಕು ದಿನಗಳಿಗಷ್ಟೇ ಸಾಕಾಗುತ್ತದೆ ಎಂದು 10 ರಾಜ್ಯಗಳು ಹೇಳಿವೆ.

ಮಹಾರಾಷ್ಟ್ರ: ರಾಜ್ಯದಲ್ಲಿ ಇನ್ನು 5 ದಿನಕ್ಕೆ ಆಗುವಷ್ಟು ಲಸಿಕೆ ಮಾತ್ರ ಇದೆ. ಹಲವು ಲಸಿಕಾ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಶನಿವಾರ ಹೇಳಿಕೆ ನೀಡಿತ್ತು

ಪಂಜಾಬ್: ರಾಜ್ಯದಲ್ಲಿ 5.7 ಲಕ್ಷ ಡೋಸ್‌ ಲಸಿಕೆ ಇದ್ದು, ಇದು ಕೇವಲ 5 ದಿನಕ್ಕೆ ಸಾಕಾಗುತ್ತದೆ. ಕೇಂದ್ರ ಸರ್ಕಾರ ಶೀಘ್ರವೇ ಲಸಿಕೆ ಪೂರೈಕೆ ಮಾಡಬೇಕು ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶನಿವಾರ ಮನವಿ ಸಲ್ಲಿಸಿದ್ದರು

ರಾಜಸ್ಥಾನ: ರಾಜ್ಯದಲ್ಲಿ ಲಸಿಕೆ ಕೊರತೆಯಾಗಿದೆ. ಶೀಘ್ರವೇ ಲಸಿಕೆ ಪೂರೈಸಿ ಎಂದು ಶುಕ್ರವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು

ಛತ್ತೀಸಗಡ: ರಾಜ್ಯದಲ್ಲಿ ಇರುವ ಲಸಿಕೆ ಮೂರು ದಿನಗಳಿಗಷ್ಟೇ ಸಾಕಾಗುತ್ತದೆ. ತಕ್ಷಣವೇ ಲಸಿಕೆ ಪೂರೈಸಿ ಎಂದು ಛತ್ತೀಸಗಡ ಸರ್ಕಾರ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸೋಮವಾರ ಪತ್ರ ಬರೆದಿದೆ

ದೆಹಲಿ: ರಾಜ್ಯದಲ್ಲಿರುವ ಲಸಿಕೆ ಸಂಗ್ರಹವು ಇನ್ನು 7 ದಿನಗಳಿಗಷ್ಟೇ ಸಾಕಾಗುತ್ತದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಹೇಳಿದ್ದಾರೆ

ಒಡಿಶಾ: ರಾಜ್ಯದಲ್ಲಿ 4.2 ಲಕ್ಷ ಡೋಸ್‌ನಷ್ಟು ಲಸಿಕೆ ಮಾತ್ರ ಇದೆ. ಇದು ಮೂರು ದಿನಕ್ಕೆ ಸಾಕಾಗುತ್ತದೆ. ತಕ್ಷಣವೇ 25 ಲಕ್ಷ ಡೋಸ್‌ ಪೂರೈಕೆ ಮಾಡಿ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಶುಕ್ರವಾರ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ರಾಜ್ಯದಲ್ಲಿ ಈಗ 11 ಜಿಲ್ಲೆಗಳಲ್ಲಿ ಲಸಿಕೆ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ.

ಆಂಧ್ರ ಪ್ರದೇಶ: ರಾಜ್ಯದಲ್ಲಿರುವ 3 ಲಕ್ಷ ಕೋವಿಡ್‌ ಲಸಿಕೆ ಡೋಸ್‌ಗಳು ಇನ್ನೆರಡು ದಿನದಲ್ಲಿ ಖಾಲಿಯಾಗುತ್ತವೆ. 45 ವರ್ಷ ಮೇಲ್ಪಟ್ಟ 1 ಕೋಟಿ ಜನರು ರಾಜ್ಯದಲ್ಲಿದ್ದಾರೆ. ಲಸಿಕೆಯ ತೀವ್ರ ಕೊರತೆ ಇದೆ ಎಂದು ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ

ಜಾರ್ಖಂಡ್‌: ರಾಜ್ಯದಲ್ಲಿರುವ ಕೋವಿಡ್‌ ಲಸಿಕೆ ಡೋಸ್‌ಗಳು ಎರಡು ದಿನದಲ್ಲಿ ಖಾಲಿಯಾಗುತ್ತವೆ. ತಕ್ಷಣವೇ ಲಸಿಕೆ ಪೂರೈಕೆ ಮಾಡಿ ಎಂದು ರಾಜ್ಯ ಸರ್ಕಾರವು ಮಂಗಳವಾರವಷ್ಟೇ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮನವಿ ಸಲ್ಲಿಸಿದೆ

ಉತ್ತರಾಖಂಡ: ರಾಜ್ಯದಲ್ಲಿರುವ ಲಸಿಕೆಯು ಒಂದೆರಡು ದಿನದಲ್ಲಿ ಖಾಲಿಯಾಗುತ್ತದೆ. ಲಸಿಕೆ ಪೂರೈಸದಿದ್ದರೆ, ಲಸಿಕಾ ಕಾರ್ಯಕ್ರಮ ಸ್ಥಗಿತವಾಗುತ್ತದೆ ಎಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ

ಅಸ್ಸಾಂ: ರಾಜ್ಯದಲ್ಲಿರುವ ಲಸಿಕೆಯು ಒಂದೆರಡು ದಿನದಲ್ಲಿ ಖಾಲಿಯಾಗುತ್ತದೆ. ಲಸಿಕೆ ಪೂರೈಸದಿದ್ದರೆ, ಲಸಿಕಾ ಕಾರ್ಯಕ್ರಮ ಸ್ಥಗಿತವಾಗುತ್ತದೆ ಎಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ

ಭಾರತದಲ್ಲಿ ಲಸಿಕೆ ಕೊರತೆಗೆ ಕಾರಣಗಳು

ಭಾರತದಲ್ಲಿ ಕೋವಿಡ್‌ ಲಸಿಕೆ ಕೊರತೆಯಾಗಲು ಹಲವು ಕಾರಣಗಳನ್ನು ಗುರುತಿಸಲಾಗಿದೆ. ವಿಶ್ವದ ಅತ್ಯಂತ ದೊಡ್ಡ ಲಸಿಕೆ ತಯಾರಿಕಾ ಕಂಪನಿಯಾದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತದಲ್ಲಿ ಕೋವಿಡ್‌ ಲಸಿಕೆ ಉತ್ಪಾದಿಸುತ್ತಿದೆ. ಬ್ರಿಟನ್‌ನ ಆಸ್ಟ್ರಾಜೆನೆಕಾ ಕಂಪನಿಯ ಕೋವಿಶೀಲ್ಡ್‌ ಲಸಿಕೆಯನ್ನು ಸೀರಂ ತಯಾರಿಸುತ್ತಿದೆ.

ಕೋವಿಡ್‌ ಲಸಿಕೆ ಪೂರೈಕೆ ಬದ್ಧತೆಯ ಕೋವ್ಯಾಕ್ಸ್‌ ಕಾರ್ಯಕ್ರಮದ ಅಡಿ ಕೋವಿಶೀಲ್ಡ್‌ ಅನ್ನು ತಯಾರಿಸುವ ಗುತ್ತಿಗೆ ಸೀರಂಗೆ ದೊರೆತಿದೆ. ಈ ಒಪ್ಪಂದದ ಪ್ರಕಾರ ಸೀರಂ ಕಂಪನಿಯು, ಕೋವಿಶೀಲ್ಡ್‌ ಲಸಿಕೆಯ100 ಕೋಟಿ ಡೋಸ್‌ಗಳನ್ನು ಕೋವ್ಯಾಕ್ಸ್‌ಗೆ ಪೂರೈಕೆ ಮಾಡಬೇಕಿದೆ. ಇದರಲ್ಲಿ 2020ರ ಡಿಸೆಂಬರ್‌ ಅಂತ್ಯದ ವೇಳೆಗೆ 40 ಕೋಟಿ ಡೋಸ್‌ಗಳನ್ನು ಪೂರೈಕೆ ಮಾಡಬೇಕಿತ್ತು. ಆದರೆ ಏಪ್ರಿಲ್ 14ರ ಅಂತ್ಯದ ವೇಳೆಗೆ 2.8 ಕೋಟಿ ಡೋಸ್‌ಗಳನ್ನು ಮಾತ್ರ ಪೂರೈಕೆ ಮಾಡಿದೆ. ನಿಗದಿತ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡುತ್ತಿಲ್ಲ ಎಂದು ಆಸ್ಟ್ರಾಜೆನೆಕಾ ಕಂಪನಿ ಸೀರಂಗೆ ನೋಟಿಸ್ ನೀಡಿತ್ತು.

ಸೀರಂ ಕಂಪನಿಯು ಪ್ರತಿ ತಿಂಗಳು ಗರಿಷ್ಠ 10 ಕೋಟಿ ಡೋಸ್‌ನಷ್ಟು ಲಸಿಕೆ ತಯಾರಿಸುವ ಸಾಮರ್ಥ್ಯ ಹೊಂದಿದೆ. ಆದರೆ, ವಿವಿಧ ಕಾರಣಗಳಿಂದ ಈಗ ಪ್ರತಿ ತಿಂಗಳು 6ರಿಂದ 6.5 ಕೋಟಿ ಡೋಸ್‌ನಷ್ಟು ಲಸಿಕೆ ಮಾತ್ರ ತಯಾರಿಸುತ್ತಿದೆ. ಭಾರತ್ ಬಯೋಟೆಕ್ ಕಂಪನಿಯು ಪ್ರತಿ ತಿಂಗಳು 1.5 ಕೋಟಿ ಡೋಸ್‌ನಷ್ಟು ಕೋವ್ಯಾಕ್ಸಿನ್ ಲಸಿಕೆ ತಯಾರಿಸುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಜುಲೈ ಅಂತ್ಯದ ವೇಳೆಗೆ ಎರಡೂ ಕಂಪನಿಗಳು 28 ಕೋಟಿ ಡೋಸ್‌ಗಳನ್ನಷ್ಟೇ ತಯಾರಿಸುತ್ತವೆ. ಅಷ್ಟೂ ಡೋಸ್‌ಗಳು ಭಾರತಕ್ಕೇ ಲಭ್ಯವಾಗುತ್ತವೆ ಎಂಬ ಖಾತರಿ ಇಲ್ಲ. ಏಕೆಂದರೆ ಒಡಂಬಡಿಕೆ ಪ್ರಕಾರ ಕೋವ್ಯಾಕ್ಸ್‌ಗೆ ಲಸಿಕೆ ಪೂರೈಕೆ ಮಾಡಬೇಕಿದೆ.

ಪ್ರತಿ ತಿಂಗಳು 10 ಕೋಟಿ ಡೋಸ್‌ ತಯಾರಿಸುವ ಸಾಮರ್ಥ್ಯ ಇದ್ದರೂ, ಸೀರಂ ಕಂಪನಿ ಈಗ 65 ಕೋಟಿ ಡೋಸ್‌ಗಳನ್ನಷ್ಟೇ ಉತ್ಪಾದಿಸುತ್ತಿದೆ. ಲಸಿಕೆ ತಯಾರಿಕೆಗೆ ಅಗತ್ಯವಾದ ಬಾಟಲಿ, ಫಿಲ್ಟರ್‌ ಮತ್ತಿತರ ಪೂರಕ ವಸ್ತುಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕು. ಈ ವಸ್ತುಗಳ ರಫ್ತನ್ನು ಅಮೆರಿಕವು ಈಗ ನಿಷೇಧಿಸಿದೆ. ಈ ಕಾರಣದಿಂದ ಈ ಕಚ್ಚಾವಸ್ತುಗಳ ಕೊರತೆ ಉಂಟಾಗಿದೆ. ಹೀಗಾಗಿಯೇ ಗರಿಷ್ಠ ಪ್ರಮಾಣದಲ್ಲಿ ಲಸಿಕೆ ತಯಾರಿಸಲು ಸಾಧ್ಯವಾಗುತ್ತಿಲ್ಲ ಎಂದು ಸೀರಂ ವಿವರಿಸಿದೆ.

ಲಸಿಕೆಗಳಿಗೆ ಅನುಮತಿ

ಇನ್ನೂ ಮೂರು-ನಾಲ್ಕು ಕೋವಿಡ್‌ ಲಸಿಕೆಗಳ ಬಳಕೆಗೆ ಕೇಂದ್ರ ಸರ್ಕಾರವು ಶೀಘ್ರವೇ ಅನುಮತಿ ನೀಡುವ ಸಾಧ್ಯತೆ ಇದೆ. ಅನುಮತಿ ದೊರೆತರೆ, ಈ ಲಸಿಕೆಗಳ ತಯಾರಿಕೆ ಆರಂಭವಾಗುತ್ತದೆ. ಆಗ ದೇಶದಲ್ಲಿ ಲಸಿಕೆ ಪೂರೈಸುವಲ್ಲಿ ಯಾವುದೇ ತೊಡಕು ಆಗುವುದಿಲ್ಲ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬುಧವಾರ ಹೇಳಿದ್ದಾರೆ.

‘ಸ್ಪುಟ್ನಿಕ್–ವಿ’ ಲಸಿಕೆ

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಬಳಿಕ ಇದೀಗ ಭಾರತದಲ್ಲಿ ಮೂರನೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ಸಿಕ್ಕಿದೆ. ರಷ್ಯಾದ ‘ಸ್ಪುಟ್ನಿಕ್–ವಿ’ ಲಸಿಕೆಯು ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ. ದೇಶದಲ್ಲಿ ಉಂಟಾಗಿರುವ ಲಸಿಕೆ ಅಭಾವ ಒಂದಿಷ್ಟು ಕಡಿಮೆಯಾಗುವ ವಿಶ್ವಾಸ ವ್ಯಕ್ತವಾಗಿದೆ.

ಲಸಿಕೆಯು ಶೇ 91.6ರಷ್ಟು ಪರಿಣಾಮಕಾರಿ ಎಂದು ರಷ್ಯಾ ಹೇಳಿದೆ. ‘21 ದಿನಗಳ ಅಂತರದಲ್ಲಿ ಎರಡು ಡೋಸ್‌ಗಳನ್ನು ನೀಡಲಾಗುತ್ತದೆ. ಎರಡೂ ಡೋಸ್‌ಗಳಲ್ಲಿ ಬಳಸಿರುವ ಫಾರ್ಮುಲಾ ಬೇರೆ ಬೇರೆ. ಇದರಿಂದ ಮನುಷ್ಯನ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ’ ಎಂದು ಲಸಿಕೆ ಪೂರೈಸುವ ರಷ್ಯಾದ ಆರ್‌ಡಿಐಎಫ್ ತಿಳಿಸಿದೆ.

ಭಾರತದ ಡಾ. ರೆಡ್ಡೀಸ್ ಲ್ಯಾಬೊರೇಟರಿ ಜೊತೆ ರಷ್ಯಾ ಒಪ್ಪಂದ ಮಾಡಿಕೊಂಡಿದೆ. ಆರಂಭದಲ್ಲಿ ರಷ್ಯಾದಿಂದ ಲಸಿಕೆ ಆಮದಾಗಲಿದ್ದು, ಮೇ ತಿಂಗಳ ಮಧ್ಯಭಾಗದಲ್ಲಿ ಭಾರತಕ್ಕೆ ಬರಲಿವೆ. ಸೆಪ್ಟೆಂಬರ್ ಹೊತ್ತಿಗೆ ಭಾರತದಲ್ಲೇ ಲಸಿಕೆ ಉತ್ಪಾದನೆಯಾಗಲಿದೆ. ವಿವಿಧ ಔಷಧ ಉತ್ಪಾದಕ ಸಂಸ್ಥೆಗಳ ಜೊತೆ ರಷ್ಯಾ ಮಾತುಕತೆ ನಡೆಸುತ್ತಿದೆ. ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಸಹ ಲಸಿಕೆ ಉತ್ಪಾದನೆಗೆ ಒಲವು ತೋರಿದೆ.

ವಾರ್ಷಿಕವಾಗಿ 85 ಕೋಟಿ ಡೋಸ್ ಲಸಿಕೆ ಉತ್ಪಾದಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಲಸಿಕೆ ಬಂದ ಬಳಿಕ ದೇಶದ ಲಸಿಕಾ ಕಾರ್ಯಕ್ರಮಕ್ಕೆ ಇನ್ನಷ್ಟು ವೇಗ ಸಿಗುವ ವಿಶ್ವಾಸದಲ್ಲಿ ಸರ್ಕಾರ ಇದೆ. ಸ್ಪುಟ್ನಿಕ್ ವಿ ಲಸಿಕೆಗೆ ಜಗತ್ತಿನ ಸುಮಾರು 60 ದೇಶಗಳು ಅನುಮತಿ ನೀಡಿದ್ದು, ಜಗತ್ತಿನ ಶೇ 40ರಷ್ಟು ಜನರಿಗೆ ಈ ಲಸಿಕೆ ಲಭ್ಯವಾಗಲಿದೆ.

ರೆಮ್‌ಡಿಸಿವಿರ್ ಔಷಧದ ಕೊರತೆ

ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಅತ್ಯಗತ್ಯ ಎನಿಸಿರುವ ರೆಮ್‌ಡಿಸಿವಿರ್ ಔಷಧದ ಅಭಾವ ಕಾಡಲಾರಂಭಿಸಿದೆ. ಕೋವಿಡ್ ಎರಡನೇ ಅಲೆ ವ್ಯಾಪಿಸಿರುವ ಈ ಹೊತ್ತಿನಲ್ಲಿ ರೆಮ್‌ಡಿಸಿವಿರ್‌ ಅಲಭ್ಯತೆಯು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬಹುತೇಕ ಆಸ್ಪತ್ರೆಗಳು ರೆಮ್‌ಡಿಸಿವಿರ್ ಇಲ್ಲದ ಕಾರಣ ಚಿಕಿತ್ಸೆಯನ್ನು ಮುಂದೂಡಬೇಕಾದ ಪರಿಸ್ಥಿತಿ ಬಂದೊದಗಿದೆ. ಪ್ರತಿ ರೋಗಿಯ ಚಿಕಿತ್ಸೆಗೆ 8–10 ರೆಮ್‌ಡಿಸಿವಿರ್ ಶೀಶೆಗಳು ಅಗತ್ಯ.

ಅತಿಯಾದ ಬೇಡಿಕೆಯೇ ಔಷಧದ ಅಭಾವಕ್ಕೆ ಕಾರಣ. ಪ್ರಸಕ್ತ ಮೈಕ್ರೊಲ್ಯಾಬ್ಸ್, ಮೈಲಾನ್ ಮತ್ತು ಜುಬಿಲಂಟ್ ಕಂಪನಿಗಳು ಮಾತ್ರ ಈ ಔಷಧವನ್ನು ಉತ್ಪಾದಿಸುತ್ತಿವೆ. ಆದರೂ ಬೇಡಿಕೆಗೆ ತಕ್ಕಷ್ಟು ಔಷಧ ಪೂರೈಕೆಯಾಗುತ್ತಿಲ್ಲ.

ಸಿಪ್ಲಾ, ಡಾ. ರೆಡ್ಡೀಸ್ ಲ್ಯಾಬ್, ಜುಬಿಲಂಟ್ ಸೇರಿದಂತೆ ಹಲವು ಕಂಪನಿಗಳು ಈ ಔಷಧವನ್ನು ಉತ್ಪಾದಿಸುತ್ತಿದ್ದವು. 2020ರ ಸೆಪ್ಟೆಂಬರ್‌ನಲ್ಲಿ ಒಟ್ಟು 24.4 ಲಕ್ಷ ಶೀಶೆಗಳನ್ನು ಉತ್ಪಾದಿಸಿದ್ದವು. ಈ ಪ್ರಮಾಣವನ್ನು 31.6 ಲಕ್ಷ ಶೀಶೆಗಳಿಗೆ ಹೆಚ್ಚಿಸಲಾಗಿತ್ತು. ಆದರೆ,ಡಿಸೆಂಬರ್‌ ಹೊತ್ತಿಗೆ ಕೋವಿಡ್ ಪ್ರಕರಣಗಳು ತಗ್ಗಲು ಆರಂಭವಾಗಿ, ಔಷಧದ ಬೇಡಿಕೆ ಕುಸಿಯಿತು. ಬಳಕೆಯಾಗದ ರೆಮ್‌ಡಿಸಿವಿರ್‌ ಔಷಧಗಳು ವಾಪಸ್ ಬರಲಾರಂಭಿಸಿದ್ದರಿಂದ ಉತ್ಪಾದನೆ ಸ್ಥಗಿತಗೊಳಿಸಲಾಯಿತು.

ಇದೀಗ ಎರಡನೇ ಅಲೆ ತೀವ್ರವಾಗುತ್ತಿದ್ದು, ರೆಮ್‌ಡಿಸಿವಿರ್‌ಗೆ ಹಾಹಾಕಾರ ಉಂಟಾಗಿದೆ.ಆದರೆ ಅಲ್ಲಿ ಉತ್ಪಾದನೆ ನಿಂತುಹೋಗಿದೆ. ಈಗ ಹೊಸದಾಗಿ ಉತ್ಪಾದನೆ, ಸಾಗಣೆ, ಪೂರೈಕೆ, ವಿತರಣೆಯ ಚಕ್ರ ತಿರುಗಬೇಕಿದೆ. ಕಾಳಸಂತೆಯಲ್ಲಿ ಮಾರಾಟ ಆರಂಭವಾಗಿದ್ದ ಕಾರಣ, ಕಳೆದ ವಾರವಷ್ಟೇ ಕೇಂದ್ರ ಸರ್ಕಾರವು ರೆಮ್‌ಡಿಸಿವಿರ್ ರಫ್ತು ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು.

ಮೂಲತಃ ಎಬೋಲಾ ವೈರಸ್ ಮತ್ತು ರಕ್ತಸ್ರಾವದ ಜ್ವರ ಚಿಕಿತ್ಸೆಗಾಗಿ 2014ರಲ್ಲಿ ತಯಾರಿಸಲಾದ ರೆಮ್‌ಡೆಸಿವಿರ್, ಈ ಎರಡೂ ಕಾಯಿಲೆಗಳಿಗೆ ಪರಿಣಾಮಕಾರಿ ಎನಿಸಲಿಲ್ಲ. ಆದರೆ ಇದು ಕೋವಿಡ್‌ ವಿರುದ್ಧ ಫಲಪ್ರದ ಎನಿಸಿತು. ಹೀಗಾಗಿ ಕೋವಿಡ್ ಚಿಕಿತ್ಸೆಯಲ್ಲಿ ಇದನ್ನು ಬಳಸುವಂತೆ ಸರ್ಕಾರವು ಮಾರ್ಗಸೂಚಿಯಲ್ಲಿ ತಿಳಿಸಿತ್ತು.

ವರದಿ: ಜಯಸಿಂಹ ಆರ್‌., ಅಮೃತಕಿರಣ ಬಿ.ಎಂ., ಪ್ರ.ವಾ. ಗ್ರಾಫಿಕ್ಸ್‌: ವಿಜಯಕುಮಾರಿ ಆರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.