ನವದೆಹಲಿ: ‘ದೇಶದ ನಾಗರಿಕರ ಎಲ್ಲ ಹಕ್ಕುಗಳ ರಕ್ಷಣೆಯಾಗಬೇಕು ಹಾಗೂ ಯಾವುದೇ ಅಪರಾಧಿ ಶಿಕ್ಷೆಯಿಂದ ಪಾರಾಗಬಾರದು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ರಚಿಸಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.
‘ಈ ಹೊಸ ಮೂರು ಕ್ರಿಮಿನಲ್ ಕಾನೂನುಗಳ ರಚನೆಯು ಸ್ವತಂತ್ರ ಭಾರತದಲ್ಲಿ ನ್ಯಾಯದಾನ ಪ್ರಕ್ರಿಯೆಯಲ್ಲಿ ಮಾಡಲಾದ ಅತಿದೊಡ್ಡ ಸುಧಾರಣೆಯೂ ಆಗಿದೆ’ ಎಂದು ಅವರು ಹೇಳಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್), ಭಾರತೀಯ ನಾಗರಿಕ ಸುರಕ್ಷಣಾ ಸಂಹಿತೆ(ಬಿಎನ್‌ಎಸ್‌ಎಸ್) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆ(ಬಿಎಸ್‌ಎ) ಜಾರಿಗೊಂಡು ವರ್ಷ ತುಂಬಿರುವ ಕಾರಣ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಮೂರು ಕಾನೂನುಗಳು ದೇಶದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಮೂರು ಹೊಸ ಕ್ರಿಮಿನಲ್ ಕಾಯ್ದೆಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಲು ಗರಿಷ್ಠ ಮೂರು ವರ್ಷ ಬೇಕಾಗಲಿದೆ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ, ಅಪರಾಧ ಎಸಗಿದ ಯಾವುದೇ ವ್ಯಕ್ತಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ ಎಂಬುದನ್ನು ಈ ಕಾನೂನುಗಳು ಖಾತ್ರಿಪಡಿಸಲಿವೆ’ ಎಂದೂ ಅವರು ಹೇಳಿದರು.
ಯಾವುದೇ ಪ್ರಕರಣ ಸುಪ್ರೀಂ ಕೋರ್ಟ್ ವರೆಗೆ ಹೋದರೂ ಈ ಹೊಸ ಕಾನೂನುಗಳಡಿ ಎಫ್‌ಐಆರ್ ದಾಖಲಾದ ಮೂರು ವರ್ಷಗಳ ಒಳಗಾಗಿ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ಇದೆಅಮಿತ್ ಶಾ, ಕೇಂದ್ರ ಗೃಹ ಸಚಿವ
‘ಬ್ರಿಟಿಷರ ಕಾಲದ ಕಾನೂನುಗಳು ಶಿಕ್ಷೆ ನೀಡುವುದಕ್ಕೆ ಒತ್ತು ನೀಡುತ್ತಿದ್ದವು. ಜನರಿಗೆ ನ್ಯಾಯ ದೊರಕಿಸಿಕೊಡುವುದು ಹೊಸ ಕಾನೂನುಗಳ ಆದ್ಯತೆಯಾಗಿದೆ’ ಎಂದು ಶಾ ತಿಳಿಸಿದರು.
ಹೊಸ ಕಾಯ್ದೆಗಳ ಜಾರಿಗೆ ವರ್ಷ
ಭಾರತೀಯ ದಂಡ ಸಂಹಿತೆ(ಐಪಿಸಿ) ಅಪರಾಧ ಪ್ರಕ್ರಿಯಾ ಸಂಹಿತೆ(ಸಿಆರ್‌ಪಿಸಿ) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆ– 1872ರ ಬದಲಾಗಿ ಕ್ರಮವಾಗಿ ಬಿಎನ್‌ಎಸ್ ಬಿಎನ್‌ಎಸ್‌ಎಸ್ ಹಾಗೂ ಬಿಎಸ್ಎ ಕಳೆದ ವರ್ಷ ಜುಲೈ 1ರಿಂದ ಜಾರಿಗೆ ಬಂದಿವೆ. ಕಳೆದ ವರ್ಷ ಜುಲೈ 1ರಿಂದ ಎಲ್ಲ ಹೊಸ ಎಫ್‌ಐಆರ್‌ಗಳನ್ನು ಬಿಎನ್‌ಎಸ್ ಅಡಿಯೇ ದಾಖಲಿಸಲಾಗುತ್ತಿದೆ. ಇದಕ್ಕೂ ಮೊದಲು ದಾಖಲಾಗಿರುವ ಪ್ರಕರಣಗಳನ್ನು ಅವುಗಳು ವಿಲೇವಾರಿ ಆಗುವವರೆಗೆ ಹಳೆಯ ಕಾಯ್ದೆಯಡಿಯೇ ವಿಚಾರಣೆ ನಡೆಸಲಾಗುತ್ತದೆ. ಹೊಸ ಕಾಯ್ದೆಗಳಡಿ ಆನ್‌ಲೈನ್ ಮೂಲಕ ಪೊಲೀಸರಿಗೆ ದೂರು ಸಲ್ಲಿಸಲು ಅವಕಾಶ ಇದೆ. ಎಸ್‌ಎಂಎಸ್ ಮೂಲಕವೂ ಸಮನ್ಸ್ ಜಾರಿ ಮಾಡಬಹುದು ಹಾಗೂ ಘೋರ ಅಪರಾಧಗಳ ಸ್ಥಳ ಮಹಜರು ವೇಳೆ ವಿಡಿಯೊ ಚಿತ್ರೀಕರಣ ಕಡ್ಡಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.