ADVERTISEMENT

ಸೈಬರ್ ಅಪರಾಧ: 136 ಸಿಮ್ ಕಾರ್ಡ್‌ಗಳನ್ನು ಹೊಂದಿದ್ದ ಆರೋಪಿ ರಾಜಸ್ಥಾನದಲ್ಲಿ ಸೆರೆ

ಪಿಟಿಐ
Published 27 ಸೆಪ್ಟೆಂಬರ್ 2025, 2:24 IST
Last Updated 27 ಸೆಪ್ಟೆಂಬರ್ 2025, 2:24 IST
<div class="paragraphs"><p>ಸೈಬರ್ ಅಪರಾಧ</p></div>

ಸೈಬರ್ ಅಪರಾಧ

   

ಜೈಪುರ: ದೇಶದಾದ್ಯಂತ ಸೈಬರ್‌ ಅಪರಾಧ ಕೃತ್ಯಗಳಿಗೆ ಸಹಕಾರ ನೀಡುತ್ತಿದ್ದ ಆರೋಪದ ಮೇಲೆ 33 ವರ್ಷದ ವ್ಯಕ್ತಿಯನ್ನು ಚೈನ್ನೈನ ಸೈಬರ್‌ ಅಪರಾಧ ತನಿಖಾ ತಂಡ ಹಾಗೂ ರಾಜಸ್ಥಾನದ ಝಲಾವರ್‌ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಬಂಧಿತನನ್ನು ಝಲಾವರ್‌ ನಿವಾಸಿ ಮೋಹಿತ್‌ ಗೋಚರ್‌ ಎಂದು ಗುರುತಿಸಲಾಗಿದೆ. ಈತ ₹ 1.82 ಕೋಟಿ ಹೂಡಿಕೆ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಚೆನ್ನೈನಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಬೇಕಾಗಿದ್ದ ಎಂದು ಎಸ್‌ಪಿ ಅಮಿತ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ADVERTISEMENT

ಗುಪ್ತಚರ ಮತ್ತು ಸ್ಥಳೀಯ ಮೂಲಗಳಿಂದ ದೊರೆತ ಮಾಹಿತಿ ಆಧಾರದ ಮೇಲೆ ಆತನನ್ನು ಪತ್ತೆಹಚ್ಚಲಾಗಿದೆ ಎಂದೂ ಹೇಳಿದ್ದಾರೆ.

ಪೊಲೀಸರ ಪ್ರಕಾರ, ಗೋಚರ್‌ ಸಂಘಟಿತ ಸೈಬರ್‌ ಅಪರಾಧ ಸಮೂಹದ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದ. ಈತ ನಕಲಿ ಆಧಾರ್‌, ಪ್ಯಾನ್‌ ಕಾರ್ಡ್‌ಗಳನ್ನು ಬಳಸಿ ಹಲವು ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿದ್ದ. ಸಾಕಷ್ಟು ನಕಲಿ ಸಿಮ್‌ ಕಾರ್ಡ್‌ಗಳನ್ನೂ ಹೊಂದಿದ್ದ. ಅವೆಲ್ಲವನ್ನೂ ಆನ್‌ಲೈನ್‌ ವಂಚನೆ ಹಾಗೂ ಹಣದ ಅಕ್ರಮ ವರ್ಗಾವಣೆ ಸಲುವಾಗಿ ಸೈಬರ್‌ ಅಪರಾಧ ಕೃತ್ಯವೆಸಗುವವರಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಗೋಚರ್‌ ಬಂಧನದ ವೇಳೆ 136 ಸಿಮ್‌ ಕಾರ್ಡ್‌ಗಳು, ಏಳು ಚೆಕ್‌ ಪುಸ್ತಕಗಳು, ಎರಡು ಬ್ಯಾಂಕ್‌ ಪಾಸ್‌ಬುಕ್‌ಗಳು, ಎಂಟು ಡೆಬಿಟ್ ಕಾರ್ಡ್‌ಗಳು, ಹಾಗೆಯೇ ಕಂಪನಿಯೊಂದರ ಮೊಹರು, ಕ್ಯೂಆರ್‌ ಕೋಡ್‌ಗಳು ಮತ್ತು ಒಂದು ಡೈರಿಯನ್ನು ವಶಕ್ಕೆ ಪಡೆಯಲಾಗಿದೆ. ಆತ ಅಪರಾಧ ಕೃತ್ಯಗಳಲ್ಲಿ ವ್ಯಾಪಕವಾಗಿ ತೊಡಗಿಕೊಂಡಿರುವುದು ಖಚಿತವಾಗಿದೆ ಎಂದೂ ಪೊಲೀಸರು ವಿವರಿಸಿದ್ದಾರೆ.

ಗೋಚರ್‌ಗೆ ಸಂಬಂಧಿಸಿದ ಐಸಿಐಸಿಐ ಬ್ಯಾಂಕ್‌ ಖಾತೆಯಲ್ಲಿ ಅನುಮಾನಾಸ್ಪದ ವಹಿವಾಟುಗಳು ನಡೆದಿರುವುದು ತಿಳಿಯುತ್ತಿದ್ದಂತೆ ತನಿಖೆಯ ಪಥ ಝಲಾವರ್‌ನತ್ತ ಸಾಗಿತ್ತು ಎಂದು ಎಸ್‌ಪಿ ಕುಮಾರ್‌ ತಿಳಿಸಿದ್ದಾರೆ.

ಡಿಎಸ್‌ಪಿ ಆರ್‌. ಪ್ರಿಯದರ್ಶಿನಿ ನೇತೃತ್ವದ ಚೆನ್ನೈ ಸೈಬರ್‌ ಅಪರಾಧ ತಡೆ ತಂಡ, ಝಲಾವರ್‌ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿದೆ. ಹೆಚ್ಚಿನ ವಿಚಾರಣೆ ಸಲುವಾಗಿ ಆರೋಪಿಯನ್ನು ಚೆನ್ನೈಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.