ADVERTISEMENT

ಬೃಹತ್‌ ವೇಶ್ಯಾವಾಟಿಕೆ ಜಾಲ ಪತ್ತೆ: 14,190 ಸಂತ್ರಸ್ತೆಯರು ಸಿಲುಕಿದ್ದಾರೆ!

ಕರ್ನಾಟಕ ಸೇರಿ ಹಲವು ರಾಜ್ಯಗಳ 14,190 ಸಂತ್ರಸ್ತೆಯರು l 17 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 2:37 IST
Last Updated 7 ಡಿಸೆಂಬರ್ 2022, 2:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್‌: ವೇಶ್ಯಾವಾಟಿಕೆ ನಡೆಸುತ್ತಿದ್ದ ಸಂಘಟಿತವಾದ ಬೃಹತ್‌ ಜಾಲವೊಂದನ್ನು ಸೈಬರಾಬಾದ್‌ ಪೊಲೀಸರು ಭೇದಿಸಿದ್ದಾರೆ. ಈ ವೇಶ್ಯಾವಾಟಿಕೆ ಜಾಲದಲ್ಲಿ ಕರ್ನಾಟಕ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ವಿವಿಧ ರಾಜ್ಯಗಳ 14,190 ಸಂತ್ರಸ್ತೆಯರು ಸಿಲುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಜಾಲವು ಎಂಡಿಎಂಎ ಎನ್ನುವ ಮಾದಕವಸ್ತುವಿನ ಬಳಕೆ ಸೇರಿದಂತೆ ಅನೇಕ ಅಪರಾಧ ಪ್ರಕರಣ‌ಗಳಲ್ಲಿ ಭಾಗಿಯಾಗಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ. ಮಾನವಕಳ್ಳ ಸಾಗಣೆ ತಡೆ ಕಾಯ್ದೆ 1956ರ ಅನ್ವಯ 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 34 ಮೊಬೈಲ್‌, ಮೂರು ಕಾರುಗಳು, ಒಂದು ಲ್ಯಾಪ್‌ಟಾಪ್‌ ಹಾಗೂ 2.5 ಗ್ರಾಂ ಎಂಡಿಎಂಎ ಮಾದಕವಸ್ತು ವಶಪಡಿಸಿಕೊಳ್ಳಲಾಗಿದೆ.

ADVERTISEMENT

17 ಮಂದಿ ಬಂಧಿತರಲ್ಲಿ, ಮೊಹಮ್ಮದ್‌ ಅದೀಮ್‌, ಮೊಹಮ್ಮದ್‌ ಸಮೀರ್‌, ಹರ್ಬಿಂದರ್‌ ಕೌರ್‌, ಮೊಹಮ್ಮದ್‌ ಸಲ್ಮಾನ್‌ ಖಾನ್‌, ಮೊಹಮ್ಮದ್‌ ಅಬ್ದುಲ್‌ ಕರೀಮ್‌, ಎರಸಾಗಿ ಯೋಗೇಶ್ವರ್‌ ರಾವ್‌ ಸೇರಿದ್ದಾರೆ. ಕೆಲವು ವಾರಗಳ ಹಿಂದೆ ಪೊಲೀಸರು ಈ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದರು. ಇವರೊಂದಿಗೆ ಹೈದರಾಬಾದ್‌ನ ಪ್ರಖ್ಯಾತ ಹೋಟೆಲ್‌ವೊಂದರ ಮ್ಯಾನೇಜರ್‌ ರಮೇಶ್ ಎಂಬುವವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

‘ಬಂಧಿತರ ಮೇಲೆ ವೇಶ್ಯಾವಾಟಿಕೆ ನಡೆಸಿದ ಆರೋಪದ ಹಲವು ಪ್ರಕರಣಗಳು ಈಗಾಗಲೇ ಇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಜಾಹೀರಾತು ಮೂಲಕ ಗಿರಾಕಿಗಳಿಗೆ ಗಾಳ: ‘ಆರೋಪಿಗಳು ವೆಬ್‌ಸೈಟ್‌ಗಳ ಮೂಲಕ ಜಾಹೀರಾತು ನೀಡುತ್ತಿದ್ದರು. ನಂತರ, ಕಾಲ್‌ ಸೆಂಟರ್‌ಗಳ ಮೂಲಕ ಗಿರಾಕಿಗಳನ್ನು ಸಂಪರ್ಕಿಸಲಾಗುತ್ತಿತ್ತು. ವ್ಯವಹಾರ ಕೂಡಿಬಂದರೆ, ಗಿರಾಕಿಗಳನ್ನು ಹಾಗೂ ಸಂತ್ರಸ್ತೆಯರನ್ನು ಜಾಲನಡೆಸುತ್ತಿದ್ದವರು ಹೋಟೆಲ್‌ ಕೊಠಡಿ
ಗಳಿಗೆ ಕರೆದೊಯ್ಯುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಬೆಂಗಳೂರು, ನವದೆಹಲಿ, ಹೈದರಾಬಾದ್‌ಗಳಲ್ಲಿ ಕಾಲ್‌ ಸೆಂಟರ್‌ಗಳು ಕೆಲಸ ಮಾಡುತ್ತಿದ್ದವು. ಫೋನ್‌ಪೇ, ಪೇಟಿಎಂ ಮೂಲಕ ಗಿರಾಕಿಗಳಿಂದ ಹಣ ಪಡೆದುಕೊಳ್ಳಲಾಗುತ್ತಿತ್ತು. ಇದರಲ್ಲಿ ಶೇ 30ರಷ್ಟನ್ನು ಸಂತ್ರಸ್ತೆಯರಿಗೆ ನೀಡಲಾಗುತ್ತಿತ್ತು. ಉಳಿದ ಶೇ 35ರಷ್ಟು ಜಾಹೀರಾತಿಗೆ ಹಾಗೂ ಕಾಲ್‌ ಸೆಂಟರ್‌ಗಳಲ್ಲಿ ಕೆಲಸ ಮಾಡುವವರಿಗೆ ಮತ್ತು ಶೇ 35ರಷ್ಟು ಜಾಲ ನಡೆಸುತ್ತಿದ್ದವರ ನಡುವೆ ಹಂಚಿಕೆಯಾಗುತ್ತಿತ್ತು’ ಎಂದು ಪೊಲೀಸರು ಹೇಳಿದ್ದಾರೆ.

‘Locanto, Skokka, Hyderabadescorts, callgirlsinHyderabad, Luxuryescortservices, myheavenmodels, natasharoy.in. ಎಂಬ ಈ ಕೆಲವು ವೆಬ್‌ಸೈಟ್‌ಗಳ ಮೂಲಕ ವೇಶ್ಯಾವಾಟಿಕೆಯನ್ನು
ನಡೆಸಲಾಗುತ್ತಿತ್ತು’ ಎಂದರು.

ಸಂಘಟಿತ ಕೃತ್ಯ: ‘ವಿಚಾರಣೆ ನಡೆಸಿದಾಗ ಆರೋಪಿಗಳಿಂದ ಹಲವು ವಿಚಾರಗಳು ಹೊರಬಂದಿವೆ. ವಾಟ್ಸ್‌ಆ್ಯಪ್‌ ಮೂಲಕ
ವಿವಿಧ ರಾಜ್ಯಗಳಲ್ಲಿ ಅಸಂಖ್ಯ ದಲ್ಲಾಳಿಗಳು ಕೆಲಸ ಮಾಡುತ್ತಿದ್ದರು. ಜೊತೆಗೆ ಇಡೀ ಜಾಲವನ್ನು ಸಂಘಟಿಸಿದವರು, ಪೂರೈಕೆದಾರರು, ಜಾಹೀರಾತು ನೀಡುವವರು, ವೆಬ್‌ಸೈಟ್‌ನವರು ಮತ್ತು ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡುವವರು ಹೀಗೆ ಎಲ್ಲರೂ ಪ್ರತ್ಯೇಕ ವಾಟ್ಸ್‌ಆ್ಯಪ್‌ ಗುಂಪುಗಳನ್ನು ರಚಿಸಿಕೊಂಡಿದ್ದರು.

---

ಸಂತ್ರಸ್ತೆಯರಿಗೆ ವಿಲಾಸಿ ಜೀವನದ ಆಮಿಷ

‘ಐಷಾರಾಮಿ ಜೀವನ, ಸುಲಭವಾಗಿ ದುಡ್ಡು ಮಾಡುವ, ಉದ್ಯೋಗ ಕೊಡಿಸುವ ಆಮಿಷ ತೋರಿಸಿ, ಯುವತಿಯರನ್ನು, ಮಹಿಳೆಯರನ್ನು ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಸಲಾಗುತ್ತಿತ್ತು’ ಎಂದು ಸೈಬರಾಬಾದ್‌ ಪೊಲೀಸರು ವಿವರಿಸಿದರು.

‘ಯುವತಿಯರನ್ನು ಪೂರೈಕೆ ಮಾಡುವ ವ್ಯಕ್ತಿ (ಬ್ರೋಕರ್‌) ಮೊದಲು ಸಂತ್ರಸ್ತೆಯನ್ನು ಭೇಟಿ ಮಾಡುತ್ತಿದ್ದ. ನಂತರ ಸಂತ್ರಸ್ತೆಯರ ಫೋಟೊಗಳನ್ನು ಜಾಲ ನಡೆಸುತ್ತಿದ್ದವರ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿಗೆ ಹಾಕುತ್ತಿದ್ದ. ಜಾಲ ನಡೆಸುತ್ತಿದ್ದವರಿಗೆ ಫೋಟೊಗಳು ಒಪ್ಪಿಗೆಯಾದರೆ, ಸಂತ್ರಸ್ತೆಯರಿಗೆ ಹೋಟೆಲ್‌ ಕೊಠಡಿಗಳನ್ನು, ವಿಮಾನದ ಟಿಕೆಟ್‌ಗಳನ್ನು ಮಾಡಿಸುತ್ತಿದ್ದರು’ ಎಂದರು.

‘ಸಂತ್ರಸ್ತೆಯರು ಹೋಟೆಲ್‌ ತಲುಪಿದ ಮೇಲೆ, ಜಾಲ ನಡೆಸುತ್ತಿದ್ದವರು ಎಲ್ಲಾ ವೆಬ್‌ಸೈಟ್‌, ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿಗೆ ಸಂತ್ರಸ್ತೆಯರ ಫೋಟೊಗಳನ್ನು ಹಾಕುತ್ತಿದ್ದರು. ಜಾಹೀರಾತುಗಳನ್ನೂ ನೀಡಲಾಗುತ್ತಿತ್ತು. ಜಾಹೀರಾತು ನೋಡಿದ ಗಿರಾಕಿಗಳು ವಾಟ್ಸ್‌ಆ್ಯಪ್‌ ಸಂಖ್ಯೆಗೆ ಸಂದೇಶ ಕಳುಹಿಸುತ್ತಿದ್ದರು. ನಂತರ, ಕಾಲ್‌ ಸೆಂಟರ್‌ ವ್ಯಕ್ತಿಯು ಈ ಗಿರಾಕಿಗಳಿಗೆ ಕರೆ ಮಾಡುತ್ತಿದ್ದರು ಮತ್ತು ಹೋಟೆಲ್‌ಗಳ ವಿಳಾಸವನ್ನು ನೀಡುತ್ತಿದ್ದರು’ ಎಂದರು.

ಶೇ 50ರಷ್ಟು ಸಂತ್ರಸ್ತೆಯರು ಬಂಗಾಳದವರು

‘ಈ ಜಾಲದಲ್ಲಿ ಸಿಲುಕಿಕೊಂಡ ಶೇ 50ರಷ್ಟು ಸಂತ್ರಸ್ತೆಯರು ಪಶ್ಚಿಮ ಬಂಗಾಳದವರು. ಶೇ 20ರಷ್ಟು ಕರ್ನಾಟಕ, ಶೇ 15ರಷ್ಟು ಮಹಾರಾಷ್ಟ್ರ ಹಾಗೂ ಶೇ 7ರಷ್ಟು ದೆಹಲಿಯವರಾಗಿದ್ದಾರೆ. ಭಾರತದವರಲ್ಲದೆ, ಶೇ 3ರಷ್ಟು ಸಂತ್ರಸ್ತೆಯರು ಬಾಂಗ್ಲಾದೇಶ, ನೇಪಾಳ, ಥಾಯ್ಲೆಂಡ್‌, ಉಜ್ಬೆಕಿಸ್ತಾನ್‌, ರಷ್ಯಾಕ್ಕೆ ಸೇರಿದವರಾಗಿದ್ದಾರೆ’ ಎಂದು ಸೈಬರಾಬಾದ್‌ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.