ADVERTISEMENT

ಇಂಧನ ದರ ಏರಿಕೆ ದಿನನಿತ್ಯದ ಸುಲಿಗೆಯಾಗಿದೆ: ಕೇಂದ್ರದ ವಿರುದ್ಧ ಕಾಂಗ್ರೆಸ್ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮಾರ್ಚ್ 2022, 6:33 IST
Last Updated 30 ಮಾರ್ಚ್ 2022, 6:33 IST
ರಣದೀಪ್ ಸುರ್ಜೇವಾಲ (ಪಿಟಿಐ ಚಿತ್ರ)
ರಣದೀಪ್ ಸುರ್ಜೇವಾಲ (ಪಿಟಿಐ ಚಿತ್ರ)   

ನವದೆಹಲಿ: ನಿರಂತರವಾಗಿ ಇಂಧನ ದರ ಏರಿಕೆ ಮಾಡುವ ಮೂಲಕ ನರೇಂದ್ರ ಮೋದಿ ಸರ್ಕಾರವು ಜನರನ್ನು ಪ್ರತಿ ದಿನ ಸುಲಿಗೆ ಮಾಡುತ್ತಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ, ‘ಜನಸಾಮಾನ್ಯರ ಬಜೆಟ್‌ ಮೇಲೆ ಮೋದಿ ಸರ್ಕಾರದ ದಿನನಿತ್ಯದ ದಾಳಿ... ಸುಲಿಗೆ... ಶೋಷಣೆ ಮುಂದುವರಿದಿದೆ’ ಎಂದು ಉಲ್ಲೇಖಿಸಿದ್ದಾರೆ.

‘ಎಂಟು ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಲಾಗಿದ್ದು, ಒಟ್ಟು ಪ್ರತಿ ಲೀಟರಿಗೆ ₹5.60ರಷ್ಟು ಹೆಚ್ಚಿಸಿದಂತಾಗಿದೆ. ಈ ‘ಲೂಟಿ’ಗೆ ಕೊನೆಯೆಂದು? ಇದಕ್ಕೆ ಪ್ರಧಾನಿ ಹೊಣೆಗಾರರಲ್ಲವೇ? ಉತ್ತರ ಎಲ್ಲಿದೆ’ ಎಂದು ಸುರ್ಜೇವಾಲ ಪ್ರಶ್ನಿಸಿದ್ದಾರೆ.

ಮೋದಿ ಸರ್ಕಾರವು ಪೆಟ್ರೋಲ್ ದರದ ಶತಕ ಬಾರಿಸಿದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಬರೆದಿರುವ ಅವರು, ದೇಶದ ಪ್ರಮುಖ ನಗರಗಳ ಇಂದಿನ ಪೆಟ್ರೋಲ್ ದರವನ್ನು ಉಲ್ಲೇಖಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಇಂದೂ ಸಹ (ಬುಧವಾರ) ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಲೀಟರಿಗೆ ತಲಾ 80 ಪೈಸೆಯಷ್ಟು ಹೆಚ್ಚಿಸಿವೆ. ಇದರೊಂದಿಗೆ, ಕಳೆದ ಒಂಬತ್ತು ದಿನಗಳಲ್ಲಿ ಎಂಟು ಬಾರಿ ತೈಲ ದರದಲ್ಲಿ ಏರಿಕೆ ಮಾಡಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.