ಪೊಲೀಸ್
(ಸಾಂದರ್ಭಿಕ ಚಿತ್ರ)
ದಾಚೆಪಲ್ಲಿ, ಪಲ್ನಾಡು (ಆಂಧ್ರ ಪ್ರದೇಶ): ಇಲ್ಲಿನ ಹಿಂದುಳಿದ ವರ್ಗಗಳ ಹಾಸ್ಟೆಲ್‌ನಲ್ಲಿ ಐದು ಮಂದಿ ವಯಸ್ಕ ಹಾಗೂ ಒಬ್ಬ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ಸೇರಿಕೊಂಡು, ಇಬ್ಬರು ದಲಿತ ಬಾಲಕರಿಗೆ ವಿದ್ಯುತ್ ಶಾಕ್ ನೀಡಿದ ಪ್ರಕರಣ ವರದಿಯಾಗಿದೆ.
ಆಗಸ್ಟ್ 7ರಂದೇ ಈ ಪ್ರಕರಣ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಆಗಸ್ಟ್ 9ರಂದು ಈ ವಿಡಿಯೊ ಹರಿದಾಡಿದ ಬಳಿಕ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.
ಹಲ್ಲೆಗೊಳಗಾದವರಲ್ಲಿ ಒಬ್ಬ ವಿದ್ಯಾರ್ಥಿಯು ಬಾಲಕಿಯೊಬ್ಬಳ ಜೊತೆ ಸಂಬಂಧ ಹೊಂದಿದ್ದ. ಈ ವಿಚಾರ ತಿಳಿದ ಆರು ಮಂದಿ ಸೇರಿಕೊಂಡು ಆಕೆಯಿಂದ ಬೇರ್ಪಡಿಸಲು ಈ ರೀತಿ ಮಾಡಿದ್ದಾರೆ.
‘ಆರು ಬಾಲಕರು ಸೇರಿಕೊಂಡು ಇಬ್ಬರು ಬಾಲಕರಿಗೆ ವಿದ್ಯುತ್ ಶಾಕ್ ನೀಡಿರುವುದು ಕಂಡುಬಂದಿದೆ’ ಎಂದು ಪಲ್ನಾಡು ಜಿಲ್ಲೆಯ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಪಿ.ಜಗದೀಶ್ ತಿಳಿಸಿದ್ದಾರೆ.
ಒಬ್ಬ ಬಾಲಕನನ್ನು ಆಗಸ್ಟ್ 22ರವರೆಗೆ ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳನ್ನು ವಶಕ್ಕೆ ನೀಡುವ ಕುರಿತು ನ್ಯಾಯಾಲಯ ನಿರ್ಧರಿಸಬೇಕಿದೆ. ಆರೋಪಿಗಳ ಪೈಕಿ ಇಬ್ಬರು ಹೊರಗಿನವರಾಗಿದ್ದು, ಉಳಿದ ಮೂವರು ಅದೇ ಹಾಸ್ಟೆಲ್‌ನವರಾಗಿದ್ದಾರೆ ಎಂದು ಜಗದೀಶ್ ಹೇಳಿದ್ದಾರೆ.
ಬಾಲಕಿಯ ಜೊತೆ ಸಂಬಂಧ ಕಡಿದುಕೊಳ್ಳುವಂತೆ ದಲಿತ ಬಾಲಕರಿಗೆ ಉಳಿದವರು ಹಲವು ಸಲ ಎಚ್ಚರಿಕೆ ನೀಡಿದ್ದಾರೆ. ನಂತರ, ಇಬ್ಬರಿಗೂ ವಿದ್ಯುತ್ ಶಾಕ್ ನೀಡಿದ್ದಾರೆ. ಹಲ್ಲೆ ನಡೆಸಿದ ದೃಶ್ಯವು ವಿಡಿಯೊದಲ್ಲಿದೆಯಷ್ಟೆ. ವಿದ್ಯುತ್ ಶಾಕ್ ನೀಡಿದ ದೃಶ್ಯವು ಕಂಡುಬಂದಿಲ್ಲ.
ಘಟನೆ ನಡೆದಿರುವುದನ್ನು ಹಾಸ್ಟೆಲ್‌ನ ಮೇಲ್ವಿಚಾರಕಿ ಎಂ. ದೀಪಿಕಾ ಅವರು ಖಚಿತಪಡಿಸಿದ್ದು, ಪೊಲೀಸರು ತ್ವರಿತವಾಗಿ ಕ್ರಮವಾಗಿ ಕೈಗೊಂಡಿದ್ದಾರೆ.
ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆ ಹಾಗೂ ಬಿಎನ್‌ಎಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.