ADVERTISEMENT

ಮೇಲ್ಜಾತಿಯವರು ತಯಾರಿಸಿದ ಬಿಸಿಯೂಟ ತಿನ್ನದೆ ದಲಿತ ವಿದ್ಯಾರ್ಥಿಗಳಿಂದ ಪ್ರತಿರೋಧ

ಪಿಟಿಐ
Published 26 ಡಿಸೆಂಬರ್ 2021, 15:32 IST
Last Updated 26 ಡಿಸೆಂಬರ್ 2021, 15:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಿಥೋರಗಢ: ಪರಿಶಿಷ್ಟ ಜಾತಿಗೆ ಸೇರಿದಮಧ್ಯಾಹ್ನದ ಬಿಸಿಯೂಟ ತಯಾರಕಿಯನ್ನು ಕೆಲಸದಿಂದ ತೆಗೆದು ಹಾಕಿ, ಮೇಲ್ಜಾತಿಗೆ ಸೇರಿದ ಅಡುಗೆ ತಯಾರಕಿಯನ್ನು ನೇಮಿಸಿದ್ದಕ್ಕೆ ಪ್ರತಿರೋಧ ತೋರಿರುವ ದಲಿತ ವಿದ್ಯಾರ್ಥಿಗಳು ಊಟವನ್ನು ತ್ಯಜಿಸಿದ್ದಾರೆ.

ಉತ್ತರಾಖಂಡದ ಚಂಪಾವತ್‌ ಜಿಲ್ಲೆಯ ಸರ್ಕಾರಿ ಇಂಟರ್‌-ಕಾಲೇಜಿನಲ್ಲಿ ಬಿಸಿಯೂಟದ ವಿಚಾರವಾಗಿ ಮೇಲ್ಜಾತಿ ವಿದ್ಯಾರ್ಥಿಗಳು ಮತ್ತು ದಲಿತ ವಿದ್ಯಾರ್ಥಿಗಳ ನಡುವೆ ಊಟ ನಿರಾಕರಣೆಯ ಹೋರಾಟ ನಡೆದಿದೆ.

ಈ ಮೊದಲುಮಧ್ಯಾಹ್ನದ ಬಿಸಿಯೂಟ ತಯಾರಕಿಯಾಗಿ ಸುಖಿ ದಂಗ್‌ ಎಂಬ ಮಹಿಳೆ ಕೆಲಸ ಮಾಡುತ್ತಿದ್ದರು. ಈಕೆ ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ 6-8ನೇ ತರಗತಿ ವರೆಗಿನ 43 ವಿದ್ಯಾರ್ಥಿಗಳು ಬಿಸಿಯೂಟ ನಿರಾಕರಿಸಿದ್ದರು. ಬಳಿಕ ಸುಖಿ ದಂಗ್‌ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು.

ADVERTISEMENT

ಬಿಸಿಯೂಟ ತಯಾರಕಿಯ ನೇಮಕ ಪ್ರಕ್ರಿಯೆಯಲ್ಲಿನ ಲೋಪಗಳ ಕಾರಣ ಕೊಟ್ಟು, ಚಂಪಾವತ್‌ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸುಖಿ ದಂಗ್‌ ಅವರನ್ನು ಶಾಲೆಯಿಂದ ಹೊರದಬ್ಬಿದ್ದಾರೆ. ಆಕೆಯ ಸ್ಥಾನಕ್ಕೆ ಮೇಲ್ಜಾತಿಗೆ ಸೇರಿದ ಮಹಿಳೆಯನ್ನು ನೇಮಿಸಲಾಗಿದೆ.

ಇದೀಗ ಹೊಸ ಬಿಸಿಯೂಟ ತಯಾರಕಿ ಮಾಡಿದ ಊಟವನ್ನು ಸೇವಿಸಲು 23 ದಲಿತ ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ.

'ಈ ವಿಚಾರವಾಗಿ ತನಿಖೆ ನಡೆಯುತ್ತಿದೆ. ದಲಿತ ವಿದ್ಯಾರ್ಥಿಗಳು ನಾಳೆಯಿಂದ ಮಧ್ಯಾಹ್ನದ ಭೋಜನ ಸೇವಿಸುತ್ತಾರೆ ಎಂದು ಭಾವಿಸಿದ್ದೇನೆ' ಎಂದು ಚಂಪಾವತ್‌ ಜಿಲ್ಲೆಯ ಮ್ಯಾಜಿಸ್ಟ್ರೇಟ್‌ ವಿನೀತ್‌ ಥೋಮರ್‌ ಹೇಳಿದ್ದಾರೆ.

ದಲಿತ ಬಿಸಿಯೂಟ ತಯಾರಕಿಯನ್ನು ಕೆಲಸದಿಂದ ಕಿತ್ತುಹಾಕಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಪ್ರದೀಪ್‌ ಟಮ್ಟಾ ಚಳವಳಿ ನಡೆಸುವುದಾಗಿ ಹೇಳಿದ್ದಾರೆ. ದಲಿತ ಮಹಿಳೆಯನ್ನು ಮರು ನೇಮಕ ಮಾಡದಿದ್ದರೆ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಅವರಿಗೆ ಘೇರವ್‌ ಹಾಕುವುದಾಗಿ ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ರಾವಣ್‌ ತಿಳಿಸಿದ್ದಾರೆ.

ಎರಡೂ ಸಮುದಾಯದ ಸದಸ್ಯರು ಮಾತುಕತೆ ನಡೆದಿದ್ದು, ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಜಿಲ್ಲಾಡಳಿತ ಭಾನುವಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.