ADVERTISEMENT

ಕಳಪೆ ಗುಣಮಟ್ಟದ ರಸ್ತೆಗಳಿಂದ ಸಾವು: ಸರ್ಕಾರವೇ ಹೊಣೆ ಎಂದ ಬಾಂಬೆ ಹೈಕೋರ್ಟ್

ಪಿಟಿಐ
Published 11 ಆಗಸ್ಟ್ 2023, 12:52 IST
Last Updated 11 ಆಗಸ್ಟ್ 2023, 12:52 IST
ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್   ಪಿಟಿಐ ಚಿತ್ರ

ಮುಂಬೈ: ‘ರಸ್ತೆ ಗುಂಡಿಗಳು, ಮ್ಯಾನ್‌ಹೋಲ್‌ಗಳು ಹಾಗೂ ಕಳಪೆ ಗುಣಮಟ್ಟದ ರಸ್ತೆಗಳ ಕಾರಣದಿಂದ ಪ್ರತಿನಿತ್ಯ ಸಾವುಗಳು ಸಂಭವಿಸುತ್ತಿವೆ. ಇಂಥ ಘಟನೆಗಳು ಜರುಗುತ್ತಿರುವುದು ಸ್ವಾಭಾವಿಕವಾಗಿ ಅಲ್ಲ. ಬದಲಿಗೆ ಇದು ಮಾನವ ನಿರ್ಮಿತ ಸ್ಥಿತಿ. ನೀವು ಇದನ್ನು ನಿಲ್ಲಿಸಬೇಕು. ಇದು ನಿಮ್ಮ ಜವಾಬ್ದಾರಿ’ ಎಂದು ಮಹಾರಾಷ್ಟ್ರ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳನ್ನು ಬಾಂಬೆ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತು.

‘ಗುಣಮಟ್ಟದ ರಸ್ತೆಗಳ ನಿರ್ಮಾಣ, ಸವಾರರ ಸುರಕ್ಷತೆಯನ್ನು ಖಾತರಿ ಪಡಿಸುವುದು ನಿಮ್ಮ (ಮಹಾರಾಷ್ಟ್ರ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು) ಸಂವಿಧಾನಿಕ ಬಾಧ್ಯತೆ. ಈ ಬಗ್ಗೆ ಆದೇಶ ಹೊರಡಿಸುವುದು ನ್ಯಾಯಾಲಯದ ಕಾರ್ಯವಲ್ಲ’ ಎಂದು ಹೇಳಿತು.


‘ಮುಂಬೈ ಹಾಗೂ ಸುತ್ತಮುತ್ತಲ ಪ್ರದೇಶಗಳ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ 2018ರಲ್ಲಿ ನ್ಯಾಯಾಲಯವು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಿತ್ತು. ಆದರೆ, ಈ ನಿರ್ದೇಶನದ ಪಾಲನೆ ಆಗಿಲ್ಲ. ಆದ್ದರಿಂದ ಇದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ ಸ್ಥಳೀಯ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೋರಿ ವಕೀಲ ರಾಜು ಠಕ್ಕೇರ್‌ ಅವರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಾಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ಆರಿಫ್‌ ಡಾಕ್ಟರ್‌ ಅವರಿದ್ದ ಪೀಠವು ಶುಕ್ರವಾರ ನಡೆಸಿತು.

ADVERTISEMENT


ವಿವಿಧ 15 ಪ್ರಾಧಿಕಾರಗಳ ಅಡಿಯಲ್ಲಿರುವ ಮುಂಬೈನ ಎಲ್ಲ ರಸ್ತೆಗಳ ನಿರ್ವಹಣೆ ಹಾಗೂ ದುರಸ್ತಿ ಕಾರ್ಯದ ಜವಾಬ್ದಾರಿಯನ್ನು ಬೃಹನ್‌ಮುಂಬೈ ಮುನಿಸಿಪಲ್‌ ಕಾರ್ಪೊರೇಷನ್‌ (ಬಿಎಂಸಿ)ಗೆ ನೀಡಿ ಎಂದು ಕಳೆದ ವರ್ಷ ನ್ಯಾಯಾಲಯ ನೀಡಿದ್ದ ಸಲಹೆಯ ಕುರಿತು ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದನ್ನು ಪೀಠ ಗಮನಿಸಿತು. ‘ಈ ಬಗ್ಗೆ ಎಂದಿಗೆ ಕ್ರಮ ಕೈಗೊಳ್ಳುತ್ತೀರಿ’ ಎಂದು ಪ್ರಶ್ನಿಸಿತು. ‘ಈ ಬಗ್ಗೆ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕು’ ಎಂದು ಸರ್ಕಾರದ ಪರ ವಕೀಲ ಪಿ.ಪಿ. ಕಾಕಡೆ ಉತ್ತರ ನೀಡಿದರು.


ನ್ಯಾಯಾಲಯ ಕಳೆದ ವರ್ಷ ನೀಡಿದ ಸಲಹೆ ಕುರಿತು ತೆಗೆದುಕೊಂಡಿರುವ ಕ್ರಮಗಳ ಕುರಿತು ವಿಸ್ತೃತ ವರದಿ ನೀಡುವಂತೆ ಎಲ್ಲ ಮುನಿಸಿಪಲ್‌ ಕಾರ್ಪೋರೇಷನ್‌ಗಳಿಗೆ ಪೀಠ ನಿರ್ದೇಶನ ನೀಡಿತ್ತು. ‘ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದಕ್ಕಾಗಿ ರಸ್ತೆಗಳು ಹಾಳಾಗಿವೆ. ರಸ್ತೆಗಳಲ್ಲಿ ಗುಂಡಿ ಬಿದ್ದಿರುವ ವಿಷಯ ತಿಳಿದ ತಕ್ಷಣದಲ್ಲಿ ಡಾಂಬರು ಹಾಕುವ ಕಾರ್ಯ ನಡೆಯುತ್ತಿದೆ’ ಎಂದು ಬಿಎಂಸಿಯ ಆಯುಕ್ತ ಇಕ್ಬಾಲ್‌ ಛಾಚಲ್‌ ಪೀಠಕ್ಕೆ ತಿಳಿಸಿದರು. ಆದರೆ, ಪೀಠವು ಈ ವಾದವನ್ನು ಒಪ್ಪಲಿಲ್ಲ.


ತೆರೆದ ಮ್ಯಾನ್‌ಹೋಲ್‌ಗಳ ಕುರಿತು ಪರಿಶೀಲನೆ ನಡೆಸಿ, ಮೂರು ವಾರಗಳ ಒಳಗೆ ವರದಿ ನೀಡುವಂತೆ ಮುಂಬೈನ 24 ವಾರ್ಡ್‌ಗಳ ವಾರ್ಡ್‌ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿತು. ರಾಜ್ಯ ಸರ್ಕಾರ ಹಾಗೂ ಮುನಿಸಿಪಲ್‌ ಕಾರ್ಪೋರೇಷನ್‌ಗಳಿಗೂ ತಮ್ಮ ವರದಿ ಸಲ್ಲಿಸುವಂತೆ ಪೀಠ ಹೇಳಿತು. ಠಾಣೆ, ಮುಂಬೈ, ನವಿ ಮುಂಬೈ ಸೇರಿದಂತೆ ಆರು ಸ್ಥಳೀಯ ಸಂಸ್ಥೆಗಳ ಆಯುಕ್ತರು ನ್ಯಾಯಾಲಯದಲ್ಲಿ ಹಾಜರಿದ್ದರು. ವಿಚಾರಣೆಯನ್ನು ನ್ಯಾಯಾಲಯವು ಸೆ. 29ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.