ADVERTISEMENT

ಯುವಜನರ ಸಮರ್ಪಣೆ ವಿಕಸಿತ ಭಾರತದ ದೊಡ್ಡ ಶಕ್ತಿ: 'ಮನದ ಮಾತು' ಹೇಳಿದ ಪ್ರಧಾನಿ ಮೋದಿ

ಪಿಟಿಐ
Published 30 ನವೆಂಬರ್ 2025, 7:41 IST
Last Updated 30 ನವೆಂಬರ್ 2025, 7:41 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ಕೃಪೆ: ಪಿಟಿಐ

ನವದೆಹಲಿ: ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಪಾದನೆಗಳಿಂದ ಕೃಷಿಯವರೆಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ನಡೆದ ಇತ್ತೀಚಿನ ಬೆಳವಣಿಗೆಯನ್ನು ಪ್ರಸ್ತಾಪಿಸಿದ ಪ್ರಧಾನಿ  ನರೇಂದ್ರ ಮೋದಿ ಅವರು,  ‘ದೇಶದ ಯುವಜನರೇ ವಿಕಸಿತ ಭಾರತದ ದೊಡ್ಡ ಶಕ್ತಿಯಾಗಿದ್ದಾರೆ’ ಎಂದು ಹೇಳಿದ್ದಾರೆ. 

ADVERTISEMENT

ತಮ್ಮ ‘ಮನದ ಮಾತು’ ಕಾರ್ಯಕ್ರಮದ 128ನೇ ಸಂಚಿಕೆಯಲ್ಲಿ ‘ವಂದೇ ಮಾತರಂ’ನ 150ನೇ ವರ್ಷಾಚರಣೆ, ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ಸಂವಿಧಾನ ದಿನ ಆಚರಣೆ, ಅಯೋಧ್ಯೆಯ ರಾಮಮಂದಿರ ಮೇಲ್ಭಾಗದಲ್ಲಿ ಧರ್ಮಧ್ವಜ ಸ್ಥಾಪನೆ ಸೇರಿದಂತೆ ಹಲವು ಚಟುವಟಿಕೆಗಳನ್ನು ಉಲ್ಲೇಖಿಸಿದ್ದಾರೆ.

ಹೈದರಬಾದ್‌ನಲ್ಲಿ ವಿಶ್ವದಲ್ಲಿಯೇ ಅತೀ ದೊಡ್ಡದಾದ ವಿಮಾನ ಎಂಜಿನ್‌ಗಳ ನಿರ್ವಹಣೆ, ದುರಸ್ತಿ ಹಾಗೂ ಕಾರ್ಯಾಚರಣೆಯ ಕೇಂದ್ರದ ಉದ್ಘಾಟನೆ, ಭಾರತೀಯ ನೌಕಾಪಡೆಗೆ ಐಎನ್‌ಎಸ್‌ ‘ಮಾಹೆ’ ಸೇರ್ಪಡೆ ಆಗಿರುವುದನ್ನು ಪ್ರಸ್ತಾಪಿಸಿದರು.

‘ಕಳೆದ ವಾರ ‘ಸ್ಕೈರೂಟ್‌ ಇನ್ಫಿನಿಟಿ ಕ್ಯಾಂಪಸ್‌ ಭಾರತೀಯ ಬಾಹ್ಯಾಕಾಶ ಪರಿಸರ ವ್ಯವಸ್ಥೆಗೆ ಹೊಸ
ಉತ್ತೇಜನ ನೀಡಿತು. ಇದು ಭಾರತದ ಹೊಸ ಚಿಂತನೆ, ಸಂಶೋಧನೆ ಹಾಗೂ ಯುವ ಸಮುದಾಯದ ಶಕ್ತಿಯನ್ನು ಪ್ರತಿಬಿಂಬಿಸಿತು’ ಎಂದು ಹೇಳಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಆಯೋಜಿಸಿದ್ದ ಡ್ರೋನ್‌ ಸ್ಪರ್ಧೆಯ ವಿಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಹಂಚಿ ಕೊಂಡಿದ್ದಾರೆ. ‘ಈ ವಿಡಿಯೊದಲ್ಲಿ ಝೆನ್‌–ಜಿ ಯುವಕರು ಮಂಗಳ ಗ್ರಹದಲ್ಲಿ ಇರುವ ಪರಿಸ್ಥಿತಿಯಂತೆಯೇ ಡ್ರೋನ್‌ಗಳನ್ನು ಹಾರಿಸಲು
ಯತ್ನಿಸಿದರು. ಹಲವು ವೈಫಲ್ಯಗಳ ನಂತರ ಯಶಸ್ಸು ಸಾಧಿಸಿದರು. ಚಂದ್ರಯಾನ–2 ಸಂಪರ್ಕ ಕಳೆದು ಕೊಂಡಿದ್ದ ವೇಳೆ ಇಸ್ರೊ ವಿಜ್ಞಾನಿಗಳು ಕೂಡ ತೀವ್ರ ನಿರಾಸೆ ಹೊಂದಿದ್ದರು. ನಂತರ ಚಂದ್ರಯಾನ–3ರಲ್ಲಿ ಯಶಸ್ಸು ಸಾಧಿಸಿದರು’ ಎಂದು ಮೋದಿ ನೆನಪಿಸಿಕೊಂಡಿದ್ದಾರೆ.

ಚಂದ್ರಯಾನ–2 ಯೋಜನೆ ವಿಫಲವಾದಾಗ ಇಸ್ರೊ ವಿಜ್ಞಾನಿಗಳೂ ಬೇಸರಗೊಂಡಿದ್ದರು. ಆದಾದ ನಂತರ ಚಂದ್ರಯಾನ–3ರಲ್ಲಿ ಯಶಸ್ಸು ಸಾಧಿಸಿದ್ದರು. ಆಗ ವಿಜ್ಞಾನಿಗಳ ಕಣ್ಣಲ್ಲಿ ಕಂಡಂತಹ ಹೊಳಪನ್ನು, ಡ್ರೋನ್‌ ಹಾರಿಸುವಲ್ಲಿ ಯಶಸ್ವಿಯಾದ ಯುವಕರ ಕಣ್ಣಲ್ಲಿಯೂ ಕಾಣಬಹುದಾಗಿದೆ ಎಂದಿದ್ದಾರೆ.

'ಯುವಜನರ ಸಮರ್ಪಣಾ ಭಾವ, ವಿಜ್ಞಾನಿಗಳ ಬದ್ಧತೆಯನ್ನು ಕಂಡಾಗಲೆಲ್ಲ ನನ್ನ ಹೃದಯ ತುಂಬಿ ಬರುತ್ತದೆ. ಯುವಕರ ಈ ಸಮರ್ಪಣಾ ಭಾವವೇ ವಿಕಸಿತ ಭಾರತದ ಬಹುದೊಡ್ಡ ಶಕ್ತಿಗಳಲ್ಲಿ ಒಂದಾಗಿದೆ' ಎಂದು ಪ್ರತಿಪಾದಿಸಿದ್ದಾರೆ.‌

'ವಂದೇ ಮಾತರಂ' ಗೀತೆಯ 150ನೇ ವರ್ಷಾಚರಣೆ, ಸಂವಿಧಾನ ದಿನಾಚರಣೆ, ಅಯೋಧ್ಯೆಯ ರಾಮ ಮಂದಿರದ ಮೇಲೆ ಹಾರಿಸಿದ ಧರ್ಮಧ್ವಜದ ಕುರಿತಾಗಿ ಸ್ಫೂರ್ತಿದಾಯಕ ಮಾತುಗಳನ್ನಾಡಿರುವ ಮೋದಿ, ಜೇನು ಕೃಷಿಗೆ ಸಂಬಂಧಿಸಿದಂತೆ ದೇಶದಾದ್ಯಂತ ಕೈಗೊಂಡಿರುವ ಉಪಕ್ರಮಗಳು, ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಳು, 2030ರಕ್ಕೆ ಕಾಮನ್‌ವೆಲ್ತ್‌ ಗೇಮ್ಸ್‌ ಆತಿಥ್ಯ ವಹಿಸಲು ಬಿಡ್‌ನಲ್ಲಿ ಯಶಸ್ವಿಯಾಗಿರುವುದೂ ಸೇರಿದಂತೆ ಹಲವು ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ.

ಮನದ ಮಾತಿನಲ್ಲಿ ಪ್ರಸ್ತಾಪಿಸಿದ ವಿಚಾರಗಳು

  • ಕರ್ನಾಟಕ ಸೇರಿದಂತೆ ದೇಶದಾದ್ಯಂತ ನಡೆಯುವ ಜೇನುಕೃಷಿ ಪ್ರಸ್ತಾಪ

  • ಕ್ರೀಡಾ ಕ್ಷೇತ್ರದಲ್ಲಿ ಭಾರತೀಯ ಕ್ರೀಡಾಪಟುಗಳ ಸಾಧನೆಯೂ ಉಲ್ಲೇಖ

  • 2030ರಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟ ಆಯೋಜಿಸುವ ಬಿಡ್ಡಿಂಗ್‌ ಪಡೆದ ಭಾರತ

  • ದಕ್ಷಿಣ ಆಫ್ರಿಕಾ, ಜಿ–20 ಶೃಂಗಸಭೆ, ಭೂತಾನ್‌ ಪ್ರವಾಸದ ವಿವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.