ADVERTISEMENT

ಆರ್ಥಿಕ ಬಿಕ್ಕಟ್ಟು: ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ ಪಿ.ಚಿದಂಬರಂ ವಾಗ್ದಾಳಿ

ಏಜೆನ್ಸೀಸ್
Published 30 ಜುಲೈ 2020, 13:21 IST
Last Updated 30 ಜುಲೈ 2020, 13:21 IST
ಕಾಂಗ್ರೆಸ್ ಹಿರಿಯ ಮುಖಂಡ ಪಿ. ಚಿದಂಬರಂ
ಕಾಂಗ್ರೆಸ್ ಹಿರಿಯ ಮುಖಂಡ ಪಿ. ಚಿದಂಬರಂ   

ನವದೆಹಲಿ: ತೀವ್ರವಾದ ಆರ್ಥಿಕ ಬಿಕ್ಕಟ್ಟು ಉಂಟಾಗಿರುವ ಕುರಿತು ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಗುರುವಾರ ಟೀಕಿಸಿದ್ದಾರೆ.ಎರಡು ಪ್ರಮುಖ ಉದ್ಯಮಗಳಾದ ಟೆಲಿಕಾಂ ಮತ್ತು ವಾಯುಯಾನವು ಕುಸಿತದ ಹಾದಿಯಲ್ಲಿದೆ ಎಂದು ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕಳೆದ 12 ತಿಂಗಳುಗಳಲ್ಲಿ ಲಕ್ಷಾಂತರ ಜನರು ತಮ್ಮ ಉದ್ಯೋಗ ಅಥವಾ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ.ಎರಡು ಪ್ರಮುಖ ಉದ್ಯಮಗಳ ಕುಸಿತದಿಂದಾಗಿ ಇನ್ನೂ ಸಾವಿರಾರು ನೇರ ಮತ್ತು ಪರೋಕ್ಷವಾಗಿ ಉದ್ಯೋಗಗಳಿಗೆ ಕುತ್ತುಂಟಾಗಲಿದೆ ಎಂದು ಹೇಳಿದರು.

ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟಿನ ಗಂಭೀರತೆಯನ್ನು ಬಿಜೆಪಿ ಸರ್ಕಾರ ಯಾವಾಗ ಒಪ್ಪಿಕೊಳ್ಳುತ್ತದೆ? ಪ್ರಧಾನ ಮಂತ್ರಿಗಳ ವೈಫಲ್ಯ ಮತ್ತು ಅವರ ಆರ್ಥಿಕ ವ್ಯವಸ್ಥಾಪಕರ ವೈಫಲ್ಯವನ್ನು ಪ್ರಧಾನಿ ಯಾವಾಗ ಸ್ವೀಕರಿಸುತ್ತಾರೆ? ಎಂದು ಚಿದಂಬರಂ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ADVERTISEMENT

ವಿಮಾನಯಾನ ಉದ್ಯಮವು ಭಾರಿ ನಷ್ಟವನ್ನು ಅನುಭವಿಸಿದೆ ಮತ್ತು ಕೇಂದ್ರ ಸರ್ಕಾರವು ರಕ್ಷಣಾ ಯೋಜನೆಯೊಂದಿಗೆ ಹೆಜ್ಜೆ ಹಾಕದ ಕಾರಣ ಅದು ಅನಿಶ್ಚಿತ ಭವಿಷ್ಯವನ್ನು ಎದುರಿಸುವಂತಾಗಿದೆ ಎಂದು ಅವರು ಹೇಳಿದರು.

ನಮ್ಮ ಪ್ರಮುಖ ಟೆಲಿಕಾಂ ಕಂಪೆನಿಗಳಲ್ಲಿ ಒಂದೊಂದು ಸದ್ಯ ಕುಸಿತದ ಹಾದಿಯಲ್ಲಿದೆ ಮತ್ತು ಉಳಿಯಲು ಹೆಣಗಾಡುತ್ತಿರುವ ಟೆಲಿಕಾಂ ಉದ್ಯಮವನ್ನು ಉಳಿಸುವ ಯೋಚನೆಯೇ ಸರ್ಕಾರಕ್ಕೆ ಇಲ್ಲವೆಂಬುದನ್ನು ಸರ್ಕಾರ ಅರಿತುಕೊಳ್ಳುವುದೇ? ವಾಯುಯಾನ ಉದ್ಯಮವು ಭಾರಿ ನಷ್ಟವನ್ನು ಅನುಭವಿಸಿದೆ ಮತ್ತು ಸರ್ಕಾರವು ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಇತರ ಕಂಪನಿಗಳೂಏರ್ ಇಂಡಿಯಾ ದಾರಿಯಲ್ಲಿ ಹೋಗಬೇಕಾಗುತ್ತದೆ ಎಂಬುದನ್ನು ಸರ್ಕಾರ ಅರಿತುಕೊಳ್ಳುವುದೇ? ಎಂದಿದ್ದಾರೆ.

ದೇಶದ ಪ್ರಮುಖ ಖಾಸಗಿ ಟೆಲಿಕಾಂ ಸೇವಾ ಸಂಸ್ಥೆಯಾದ ಭಾರ್ತಿ ಏರ್‌ಟೆಲ್, ಮೊದಲ ತ್ರೈಮಾಸಿಕದಲ್ಲಿ ಒಟ್ಟಾರೆ ₹ 15,933 ಕೋಟಿ ನಷ್ಟವಾಗಿದೆ ಎಂದು ವರದಿಯಲ್ಲಿ ಹೇಳಿದೆ. ಸರಕಾರಕ್ಕೆ ಸಲ್ಲಿಸಬೇಕಿರುವ ತೆರಿಗೆ ಬಾಕಿ ಮತ್ತು ಸುಪ್ರೀಂಕೋರ್ಟ್ ಆದೇಶದಿಂದಾಗಿ ಇತರೆ ಬಾಕಿ ಪಾವತಿ ಏರ್‌ಟೆಲ್‌ಗೆ ದುಬಾರಿಯಾಗಿ ಪರಿಣಮಿಸಿದೆ. ಈ ಬೆನ್ನಲ್ಲೇ ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಮಧ್ಯೆ, ವಾಯುಯಾನ ಉದ್ಯಮ ಕೂಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸದ್ಯ ಹಲವಾರು ಪ್ರಯಾಣ ನಿರ್ಬಂಧಗಳು ಮುಂದುವರೆದಿದೆ ಮತ್ತು ಕೊರೊನಾವೈರಸ್ ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದು ಆರ್ಥಿಕತೆ ಮತ್ತು ವ್ಯವಹಾರಗಳಿಗೆ ಅಡ್ಡಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.