ADVERTISEMENT

ರಕ್ಷಣೆಗೆ ₹3 ಲಕ್ಷ ಕೋಟಿ ಬಂಪರ್‌ ಅನುದಾನ

ಷೇರುಪೇಟೆಯಲ್ಲಿ ಜಿಗಿತ ಕಂಡ ರಕ್ಷಣಾ ಕ್ಷೇತ್ರದ ಕಂಪನಿಗಳ ಷೇರು ಬೆಲೆ

ಪಿಟಿಐ
Published 3 ಜುಲೈ 2019, 10:16 IST
Last Updated 3 ಜುಲೈ 2019, 10:16 IST
   

ನವದೆಹಲಿ : ರಕ್ಷಣಾ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಎನ್‌ಡಿಎ ಸರ್ಕಾರ ₹3 ಲಕ್ಷ ಕೋಟಿ ಅನುದಾನ ಘೋಷಿಸಿದೆ.

‘ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಕ್ಷಣಾ ಕ್ಷೇತ್ರದ ಬಜೆಟ್‌ ₹3 ಲಕ್ಷ ಕೋಟಿ ದಾಟಿದೆ. ದೇಶದ ಗಡಿ ರಕ್ಷಣೆಗೆ ನಮ್ಮ ಸರ್ಕಾರ ಆದ್ಯತೆ ನೀಡಿದೆ. ದೇಶದ ಗಡಿಗಳನ್ನು ಸುರಕ್ಷಿತವಾಗಿರಿಸಲು ಮತ್ತು ರಕ್ಷಣಾ ಸನ್ನದ್ಧತೆಯ ನಿರ್ವಹಣೆಗೆ ಅಗತ್ಯವಿದ್ದಲ್ಲಿ ಹೆಚ್ಚುವರಿ ಅನುದಾನವನ್ನೂ ಒದಗಿಸಲಾಗುವುದು’ ಎಂದು ಅವರು ತಿಳಿಸಿದರು.

ರಕ್ಷಣೆ ಮತ್ತು ರಾಷ್ಟ್ರೀಯ ಭದ್ರತೆ ಬಲಪಡಿಸುವ ಬಗ್ಗೆ ಉಲ್ಲೇಖಿಸಿದ ಸಚಿವರು, ‘ನಮ್ಮ ಸೈನಿಕರು ಕಠಿಣ ಪರಿಸ್ಥಿತಿಯಲ್ಲೂ ದೇಶದ ಗಡಿಗಳನ್ನು ರಕ್ಷಿಸಿದ್ದಾರೆ. ನಾವು ಸೈನಿಕರ ಬಗ್ಗೆ ಕಾಳಜಿ ತೆಗೆದುಕೊಂಡಿದ್ದೇವೆ. 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ‘ಒಂದು ರ‍್ಯಾಂಕ್‌, ಒಂದು ಶ್ರೇಣಿ’ ಬೇಡಿಕೆಯನ್ನು ನಾವು ಸಂಪೂರ್ಣ ಅನುಷ್ಠಾನಗೊಳಿಸಿದ್ದೇವೆ’ ಎಂದರು.

ADVERTISEMENT

‘ಹಿಂದಿನ ಸರ್ಕಾರ ಮೂರು ಬಜೆಟ್‌ಗಳಲ್ಲೂ ಈ ಬಗ್ಗೆ ಭರವಸೆ ನೀಡುತ್ತಿತ್ತು. 2014–15ರ ಮಧ್ಯಂತರ ಬಜೆಟ್‌ನಲ್ಲಿ ₹500 ಕೋಟಿಯನ್ನು ಮಾತ್ರ ಬಿಡುಗಡೆ ಮಾಡಿತು. ಆದರೆ ನಾವು ಈ ಯೋಜನೆ ಜಾರಿಗೆ ತಂದ ಮೇಲೆ ಕಳೆದ ಮೂರು ವರ್ಷಗಳಿಂದ ₹35,000 ಕೋಟಿಯನ್ನು ಸೈನಿಕರಿಗೆ ತಲುಪಿಸಿದ್ದೇವೆ. ಇದು ನಿಜವಾದ ಕಾಳಜಿ’ ಎಂದು ತಿಳಿಸಿದರು.

ಷೇರು ಬೆಲೆ ಏರಿಕೆ

ರಕ್ಷಣಾ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ದಾಖಲೆಯ ಅನುದಾನವನ್ನು ಮೀಸಲಿಡುತ್ತಿದ್ದಂತೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳ ಷೇರು ಬೆಲೆಗಳು ಮುಂಬೈ ಷೇರುಪೇಟೆಯಲ್ಲಿ ಶೇ 5ರವರೆಗೆ ಏರಿಕೆಯಾಗಿವೆ.

ವಾಲ್‌ಚಂದ್‌ನಗರ್‌ ಇಂಡಸ್ಟ್ರೀಸ್‌ ಷೇರುಗಳು ಶೇ 4.71ರಷ್ಟು ಜಿಗಿತ ಕಂಡಿದ್ದರೆ, ಭಾರತ್‌ ಎಲೆಕ್ಟ್ರಾನಿಕ್ಸ್‌ (ಬಿಇ) ಷೇರುಗಳು ಶೇ 2.98, ಬಿಇಎಂಎಲ್‌ಷೇರುಗಳು 2.79 ಮತ್ತು ಭಾರತ್‌ ಡೈನಾಮಿಕ್ಸ್ ಷೇರುಗಳು ಶೇ 1.76ರಷ್ಟು ಬೆಲೆ ಏರಿಕೆಯಾಗಿವೆ.

ಅಂಕಿ ಅಂಶ

₹3.05 ಲಕ್ಷ ಕೋಟಿ -ಈ ವರ್ಷದ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ನೀಡಿರುವ ಅನುದಾನ

₹2.85 ಲಕ್ಷ ಕೋಟಿ -ಕಳೆದ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.