ಹೈದರಾಬಾದ್: ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಬಿಜೆಪಿಯು, ಸ್ಪಷ್ಟ ಬಹುಮತದತ್ತ ಮುನ್ನುಗ್ಗಿದ್ದು, ಮತ್ತೊಮ್ಮೆ ಅಧಿಕಾರಕ್ಕೇರುವ ಕನಸು ಕಾಣುತ್ತಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ಕನಸು ಕಮರಿದೆ.
70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಗೆ ಫೆಬ್ರುವರಿ 5ರಂದು ಮತದಾನ ನಡೆದಿತ್ತು. ಈವರೆಗೆ ಒಟ್ಟು 37 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. 24 ಕಡೆ ಗೆಲುವಿನ ನಗೆ ಬೀರಿರುವ ಬಿಜೆಪಿ, ಇನ್ನೂ 23 ಕಡೆ ಮುನ್ನಡೆ ಕಾಯ್ದುಕೊಂಡಿದೆ. ಹೀಗಾಗಿ, ಸ್ಪಷ್ಟ ಬಹುಮತ ಸಾಧಿಸುವುದು ಬಹುತೇಕ ಖಾತ್ರಿಯಾಗಿದೆ. 13 ಸ್ಥಾನಗಳಲ್ಲಿ ಗೆದ್ದಿರುವ ಎಎಪಿ, 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಈ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರು, ಸತತ ಮೂರನೇ ಬಾರಿಯೂ ಒಂದೂ ಸ್ಥಾನ ಗೆಲ್ಲದ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಅಭಿನಂದಿಸಿದ್ದಾರೆ.
'ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸಿದ್ದಕ್ಕಾಗಿ ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳು! ವೆಲ್ ಡನ್' ಎಂದು ಟ್ವೀಟ್ ಮಾಡಿದ್ದಾರೆ.
2024ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಒಂದಾಗಿದ್ದ ಎಎಪಿ ಹಾಗೂ ಕಾಂಗ್ರೆಸ್ ನಡುವೆ, ವಿಧಾನಸಭಾ ಚುನಾವಣೆಗೂ ಮುನ್ನ ಸೀಟು ಹಂಚಿಕೆ ವಿಚಾರವಾಗಿ ಬಿರುಕು ಮೂಡಿತ್ತು. ನಂತರ, ಎರಡೂ ಪಕ್ಷಗಳು ಪ್ರತ್ಯೇಕವಾಗಿ ಕಣಕ್ಕಿಳಿದಿದ್ದವು. ಇದರಿಂದ ಎಎಪಿಗೆ ಹಿನ್ನಡೆಯಾಗಿದೆ ಎಂಬರ್ಥದಲ್ಲಿ ರಾಮರಾವ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.