ಪರ್ವೇಶ್ ವರ್ಮಾ
ಪಿಟಿಐ ಚಿತ್ರ
ನವದೆಹಲಿ: ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಗರಿಗೆದರಿರುವ ಹೊತ್ತಿನಲ್ಲಿ, ಬಿಜೆಪಿ ನಾಯಕ ಪರ್ವೇಶ್ ವರ್ಮಾ ಅವರು ಲೆಫ್ಟೆನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರನ್ನು ಭೇಟಿಯಾಗಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಶನಿವಾರ ಪ್ರಕಟವಾಗಿದೆ. 70 ವಿಧಾನಸಭೆ ಕ್ಷೇತ್ರಗಳ ಪೈಕಿ 48 ರಲ್ಲಿ ಗೆದ್ದಿರುವ ಬಿಜೆಪಿ, ಭಾರಿ ಬಹುಮತದೊಂದಿಗೆ ಸರ್ಕಾರ ರಚನೆಗೆ ಸಜ್ಜಾಗಿದೆ.
ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬ ಚರ್ಚೆ ಚಾಲ್ತಿಯಲ್ಲಿರುವಾಗಲೇ ಪರ್ವೇಶ್ ಅವರು, ಲೆಫ್ಟೆನೆಂಟ್ ಗವರ್ನರ್ ಅವರ ಅಧಿಕೃತ 'ರಾಜ ನಿವಾಸ'ಕ್ಕೆ ಭೇಟಿ ನೀಡಿದ್ದಾರೆ.
ಎಎಪಿ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ನವದೆಹಲಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಪರ್ವೇಶ್, 4,089 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಫಲಿತಾಂಶದ ಬಳಿಕ ಮಾತನಾಡಿದ್ದ ಅವರು, 'ದೆಹಲಿ ಪಾಲಿಗೆ ಹೊಸ ಅಧ್ಯಾಯ ಆರಂಭವಾಗಿದೆ. ಎಲ್ಲರೂ ಒಟ್ಟಾಗಿ, ಉಜ್ವಲ ಭವಿಷ್ಯ ನಿರ್ಮಿಸೋಣ' ಎಂದು ಕರೆ ನೀಡಿದ್ದರು.
ಬಿಜೆಪಿಯ ಗೆಲುವನ್ನು 'ರಾಷ್ಟ್ರ ರಾಜಧಾನಿಯ ಜನರ ಗೆಲುವು' ಎಂದು ಬಣ್ಣಿಸಿದ್ದ ಅವರು, 'ಇದು ಕೇವಲ ಗೆಲುವಲ್ಲ. ಸುಳ್ಳನ್ನು ತ್ಯಜಿಸಿ ಸತ್ಯವನ್ನು, ಗಿಮಿಕ್‌ಗಳ ಬದಲು ಸಮರ್ಥ ಆಡಳಿತವನ್ನು, ವಂಚನೆಯ ಬದಲು ಅಭಿವೃದ್ಧಿಯನ್ನು ಆಯ್ಕೆ ಮಾಡಿದ ದೆಹಲಿ ಜನರ ಗೆಲುವು' ಎಂದು ಹೇಳಿದ್ದರು.
ಹಾಗೆಯೇ, ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದನ್ನು ಪಕ್ಷದ ಉನ್ನತ ಮಟ್ಟದ ನಾಯಕರು ತೀರ್ಮಾನಿಸಲಿದ್ದಾರೆ ಎಂದು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.