ADVERTISEMENT

ಮಂಗಗಳ ಓಡಿಸಲು ಲಂಗೂರಗಳ ಧ್ವನಿ ಮಿಮಿಕ್ರಿ: ಟೆಂಡರ್ ಆಹ್ವಾನಿಸಿದ ದೆಹಲಿ ಸರ್ಕಾರ

ಪಿಟಿಐ
Published 2 ಜನವರಿ 2026, 14:23 IST
Last Updated 2 ಜನವರಿ 2026, 14:23 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ವಿಧಾನಸಭೆ ಆವರಣ ಪ್ರವೇಶಿಸಿ, ತೊಂದರೆ ನೀಡುತ್ತಿರುವ ಮಂಗಗಳನ್ನು ನಿಯಂತ್ರಿಸಲು ದೆಹಲಿ ಸರ್ಕಾರ ಮುಂದಾಗಿದೆ.

ಇದಕ್ಕಾಗಿ, ಲಂಗೂರ್‌ಗಳ(ಉದ್ದನೆಯ ಬಾಲದ ಏಷ್ಯನ್ ಮರದ ಕೋತಿ/ಮುಸುವ) ಧ್ವನಿಯನ್ನು ಅನುಕರಣೆ ಮಾಡುವವರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದು ಹಾಗೂ ಲಂಗೂರಗಳ ಕಟೌಟ್ ಅಳವಡಿಕೆಗೆ ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ADVERTISEMENT

ಇದಕ್ಕಾಗಿ ಪಿಡಬ್ಲುಡಿ ಈಗಾಗಲೇ ಟೆಂಡರ್‌ ಆಹ್ವಾನಿಸಿದೆ. ತಜ್ಞರು ಲಂಗೂರ್‌ಗಳನ್ನು ಕೂಡ ಸ್ಥಳಕ್ಕೆ ತಂದು, ಅವುಗಳಿಂದ ಮಂಗಗಳನ್ನು ಬೆದರಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಧಾನಸಭೆ ಸಂಕೀರ್ಣದಲ್ಲಿ ಗಣನೀಯ ಸಂಖ್ಯೆಯಲ್ಲಿ ಮಂಗಗಳ ಓಡಾಡವಿದ್ದು ತಂತಿಗಳು, ಡಿಶ್‌ ಆ್ಯಂಟೆನಾಗಳನ್ನು ನಾಶ ಮಾಡುತ್ತಿವೆ. ಶಾಸಕರು, ಸಿಬ್ಬಂದಿ ಹಾಗೂ ಸಂದರ್ಶಕರಿಗೆ ಬೆದರಿಕೆ ಎನಿಸಿವೆ. ಮಂಗಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಲಂಗೂರುಗಳ ಧ್ವನಿಯನ್ನು ಅನುಕರಿಸಿ, ಅವುಗಳನ್ನು ಓಡಿಸಲು ನಿರ್ಧರಿಸಲಾಗಿದೆ ಎಂದೂ ತಿಳಿಸಿದ್ದಾರೆ.

‘ಲಂಗೂರಗಳಂತೆ ಕೂಗುವವರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು. ಗುತ್ತಿಗೆ ಅವಧಿ ಮುಗಿದಿರುವ ಕಾರಣ ಅವರ ನೇಮಕಕ್ಕೆ ಈಗ ಹೊಸದಾಗಿ ಟೆಂಡರ್‌ ಕರೆಯಲಾಗಿದೆ’ ಎಂದು ತಿಳಿಸಿದ್ದಾರೆ.

‘ಈ ಉದ್ದೇಶಕ್ಕೆ ನೇಮಕವಾಗುವವರನ್ನು ಎಲ್ಲ ಕೆಲಸದ ದಿನಗಳು ಹಾಗೂ ಶನಿವಾರಗಳಂದು ನಿಯೋಜನೆ ಮಾಡಲಾಗುತ್ತದೆ. ಒಂದು ಪಾಳಿ ಅವಧಿ 8 ಗಂಟೆ ಇರಲಿದೆ’ ಎಂದಿದ್ದಾರೆ.

2017ರಲ್ಲಿ, ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರ ಕುರಿತು ಚರ್ಚೆ ನಡೆಯುತ್ತಿದ್ದಾಗ, ಮಂಗಗಳು ಸದನ ಪ್ರವೇಶಿಸಿ, ಕಲಾಪಕ್ಕೆ ಅಡ್ಡಿಯನ್ನುಂಟು ಮಾಡಿದ್ದವು ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.