ADVERTISEMENT

ಬಾಂಗ್ಲಾದೇಶ ಹೈ ಕಮಿಷನ್‌ ಕಚೇರಿ ಮುಂದೆ ಸಂಘರ್ಷ

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರಿಂದ ಕಚೇರಿ ಒಳಗೆ ನುಗ್ಗಲು ಯತ್ನ

ಪಿಟಿಐ
Published 24 ಡಿಸೆಂಬರ್ 2025, 0:00 IST
Last Updated 24 ಡಿಸೆಂಬರ್ 2025, 0:00 IST
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ನವದೆಹಲಿಯಲ್ಲಿ ವಿಶ್ವಹಿಂದೂ ಪರಿಷತ್‌ ಹಾಗೂ ಬಜರಂಗದಳದ ಕಾರ್ಯಕರ್ತರು ಬ್ಯಾರಿಕೇಡ್‌ ಹತ್ತಿ ಬಾಂಗ್ಲಾ ಹೈಕಮಿಷನ್‌ ಕಚೇರಿ ಒಳಗೆ ನುಗ್ಗಲು ಯತ್ನಿಸಿದರು–ಪಿಟಿಐ ಚಿತ್ರ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ನವದೆಹಲಿಯಲ್ಲಿ ವಿಶ್ವಹಿಂದೂ ಪರಿಷತ್‌ ಹಾಗೂ ಬಜರಂಗದಳದ ಕಾರ್ಯಕರ್ತರು ಬ್ಯಾರಿಕೇಡ್‌ ಹತ್ತಿ ಬಾಂಗ್ಲಾ ಹೈಕಮಿಷನ್‌ ಕಚೇರಿ ಒಳಗೆ ನುಗ್ಗಲು ಯತ್ನಿಸಿದರು–ಪಿಟಿಐ ಚಿತ್ರ   

ನವದೆಹಲಿ: ಬಾಂಗ್ಲಾ ದೇಶದಲ್ಲಿ ಹಿಂದೂ ಧರ್ಮದ ದೀಪು ಚಂದ್ರದಾಸ್‌ ಎಂಬ ವ್ಯಕ್ತಿಯ ಹತ್ಯೆ ಖಂಡಿಸಿ ದೆಹಲಿಯಲ್ಲಿರುವ ಆ ದೇಶದ ಹೈಕಮಿಷನ್‌ ಕಚೇರಿಯ ಮುಂದೆ ಮಂಗಳವಾರ ಭಾರಿ ಆಕ್ರೋಶ ವ್ಯಕ್ತವಾಗಿದೆ. ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ಸಾವಿರಾರು ಕಾರ್ಯಕರ್ತರು ಹೈಕಮಿಷನ್‌ ಕಚೇರಿಗೆ ನುಗ್ಗಲು ಯತ್ನಿಸಿದ್ದಾರೆ. ಬ್ಯಾರಿಕೇಡ್‌ಗಳನ್ನು ಮುರಿದು ಹಾಕಿದ್ದಾರೆ ಮತ್ತು ತಡೆಯಲು ಬಂದ ಪೊಲೀಸರ ಜೊತೆಗೆ ಸಂಘರ್ಷಕ್ಕೆ ಇಳಿದಿದ್ದಾರೆ. 

ಕೇಸರಿ ಧ್ವಜ ಹಿಡಿದು ಬಾಂಗ್ಲಾದೇಶದ ವಿರುದ್ಧ ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಹತ್ತಿ ಒಳನುಗ್ಗಲು ಯತ್ನಿಸಿದ ವೇಳೆ ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆಸಿದರು. ಪ್ರತಿಭಟನಕಾರರು ಹೆಚ್ಚಾಗಿದ್ದರಿಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹೆಣಗಾಡಿದರು.

ಪ್ರತಿಭಟನೆ ನಡೆಸುವುದಾಗಿ ಹಿಂದೂ ಸಂಘಟನೆಗಳು ಮುಂಚಿತವಾಗಿಯೇ ಘೋಷಿಸಿದ್ದರಿಂದ ಮಂಗಳವಾರ ಬೆಳಿಗ್ಗೆಯಿಂದಲೇ ಹೈ ಕಮಿಷನ್‌ ಕಚೇರಿ ಮುಂದೆ ಬಿಗಿಭದ್ರತೆ ಏರ್ಪಡಿಸಲಾಗಿತ್ತು. ಹಲವು ಸುತ್ತಿನ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಪೊಲೀಸರು ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿತ್ತು. ಒಳನುಗ್ಗುವುದನ್ನು ತಡೆಯಲು ದೆಹಲಿ ನಗರ ಸಾರಿಗೆ ಬಸ್‌ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಲಾಗಿತ್ತು.

ADVERTISEMENT

‘ಪ್ರತಿಭಟನಾ ಸ್ಥಳದಲ್ಲಿ 1,500ಕ್ಕೂ ಅಧಿಕ ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಹೈ ಕಮಿಷನ್‌ ಕಚೇರಿಯಿಂದ 800 ಮೀಟರ್‌ ದೂರದಲ್ಲಿಯೇ ಪ್ರತಿಭಟನಕಾರರನ್ನು ತಡೆಯಲಾಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಘೋಷಣೆ– ಆಕ್ರೋಶ: ಪ್ರತಿಭಟನಕಾರರು ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿ ಕೇಸರಿ ಧ್ವಜ, ಫಲಕಗಳನ್ನು ಹಿಡಿದು ಬಾಂಗ್ಲಾದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಹಿಂದೂ ರಕ್ತ್‌ ಕೀ ಏಕ್‌ ಏಕ್‌ ಬೂಂದ್‌ ಕಾ ಹಿಸಾಬ್‌ ಚಾಹಿಯೆ (ಹಿಂದೂವಿನ ಪ್ರತಿಯೊಂದು ಹನಿ ರಕ್ತಕ್ಕೂ ಬೆಲೆ ತೆರಬೇಕು) ಸೇರಿದಂತೆ ಮೊಹಮ್ಮದ್‌ ಯೂನುಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಫಲಕಗಳನ್ನು ಪ್ರದರ್ಶಿಸಿದರು.

‘ಹಿಂದೂ ಸಮುದಾಯದ ವ್ಯಕ್ತಿಯ ಮೇಲೆ ಗಂಭೀರವಾದ ದಾಳಿ ನಡೆಸಿ, ಹತ್ಯೆ ಮಾಡಲಾಗಿದೆ. ಈ ಕೃತ್ಯವೆಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಒತ್ತಾಯಿಸಬೇಕು. ಬಾಂಗ್ಲಾದೇಶ ಪೊಲೀಸರು ಕೂಡ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.

‘ಪ್ರತಿಭಟನೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸುವುದಿಲ್ಲ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಹಲವು ಪ್ರತಿಭಟನಕಾರರು ಎಚ್ಚರಿಕೆ ನೀಡಿದ್ದಾರೆ.

‘ಬಾಂಗ್ಲಾದೇಶವು ಜಿಹಾದಿ ಮನಃಸ್ಥಿತಿಯನ್ನು ಹೊಂದಿರುವಾಗ, ನಾವು ಒಬ್ಬೊಬ್ಬರೇ ಏನು ಮಾಡಲಾದೀತು? ಬಾಂಗ್ಲಾದ ಪ್ರತಿ ಹಿಂದೂ ಕುಟುಂಬದ ಜತೆಗೆ ವಿಎಚ್‌ಪಿ, ಬಜರಂಗದಳದ ಸದಸ್ಯರು ನಿಲ್ಲಲಿದ್ದಾರೆ’ ಎಂದು ಹೇಳಿದರು.

ಏನಾಗಿತ್ತು?: ಡಿಸೆಂಬರ್‌ 18ರಂದು  ಧರ್ಮನಿಂದೆಯ ಆರೋಪ ಹೊರಿಸಿ ಜವಳಿ ಕಾರ್ಖಾನೆಯ 25 ವರ್ಷದ ನೌಕರ ದೀಪುದಾಸ್‌ ಮೇಲೆ ಗುಂಪೊಂದು ಕಾರ್ಖಾನೆ ಹೊರಗೆ ಮನಬಂದಂತೆ ಥಳಿಸಿ, ಬಳಿಕ ನೇಣು ಹಾಕಿ ಹತ್ಯೆಗೈದಿತ್ತು. ನಂತರ ಬೇರೆ ಸ್ಥಳಕ್ಕೆ ಕೊಂಡೊಯ್ದು ಮೃತದೇಹಕ್ಕೆ ಬೆಂಕಿ ಇಟ್ಟಿತ್ತು’ ಎಂದು ಪೊಲೀಸರು ತಿಳಿಸಿದ್ದರು.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ನವದೆಹಲಿಯಲ್ಲಿ ವಿಶ್ವಹಿಂದೂ ಪರಿಷತ್‌ ಹಾಗೂ ಬಜರಂಗದಳದ ಕಾರ್ಯಕರ್ತರು ಬ್ಯಾರಿಕೇಡ್‌ ಹತ್ತಿ ಬಾಂಗ್ಲಾ ಹೈ ಕಮಿಷನ್‌ ಕಚೇರಿ ಒಳಗೆ ನುಗ್ಗಲು ಯತ್ನಿಸಿದರು–ಪಿಟಿಐ ಚಿತ್ರ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ನವದೆಹಲಿಯಲ್ಲಿ ವಿಶ್ವಹಿಂದೂ ಪರಿಷತ್‌ ಹಾಗೂ ಬಜರಂಗದಳದ ಕಾರ್ಯಕರ್ತರು ಬ್ಯಾರಿಕೇಡ್‌ ಹತ್ತಿ ಬಾಂಗ್ಲಾ ಹೈ ಕಮಿಷನ್‌ ಕಚೇರಿ ಒಳಗೆ ನುಗ್ಗಲು ಯತ್ನಿಸಿದವರನ್ನು ಪೊಲೀಸರು ತಡೆದರು–ಪಿಟಿಐ ಚಿತ್ರ

ಹನುಮಾನ್‌ ಚಾಲೀಸಾ, ಧಾರ್ಮಿಕ ಘೋಷಣೆ ಕೂಗಿದ ಪ್ರತಿಭಟನಕಾರರು ಪೊಲೀಸರನ್ನು ತಳ್ಳಿ ಒಳನುಗ್ಗಲು ಯತ್ನ ಶಾಂತಿ ಕಾಪಾಡುವಂತೆ ಪೊಲೀಸರಿಂದ ಮನವಿ

ಸಾವಿರಾರು ಬಾಂಗ್ಲಾದೇಶಿಯರು ಅಕ್ರಮವಾಗಿ ರಾಜಧಾನಿಯಲ್ಲಿ ನೆಲಸಿದ್ದಾರೆ. ಪ್ರತಿ ಭಾರತೀಯ ಶಾಂತಿ ಬಯಸುತ್ತಾರೆ. ಆದರೆ ಬಾಂಗ್ಲಾದೇಶಿಯರು ನಮ್ಮ ಸಹೋದರರನ್ನು ಕೊಲ್ಲುತ್ತಿದ್ದಾರೆ
ಸುಮಿತ್‌ ಕಶ್ಯಪ್‌ ಪ್ರತಿಭಟನಕಾರ
ಬಾಂಗ್ಲಾದೇಶದ ನೂರಾರು ಮಂದಿ ನಮ್ಮ ದೇಶದಲ್ಲಿ ಆಶ್ರಯ ಪಡೆದಿದ್ದಾರೆ. ಒಬ್ಬರೇ ಒಬ್ಬ ವ್ಯಕ್ತಿಗೆ ಜೀವಹಾನಿಯಾಗಿದೆಯೇ? ಬಾಂಗ್ಲಾದಲ್ಲಿ ಭಾರತೀಯರ ಮೇಲಿನ ಹಿಂಸೆಯನ್ನು ಒಪ್ಪಲು ಸಾಧ್ಯವಿಲ್ಲ
ಸತೀಶ್‌ ಗುಪ್ತಾ ಪ್ರತಿಭಟನಕಾರ

ಡೆಪ್ಯುಟಿ ಹೈಕಮಿಷನ್‌ ಕಚೇರಿಗೆ ಮುತ್ತಿಗೆ ಯತ್ನ

ಕೋಲ್ಕತ್ತ : ಇಲ್ಲಿನ ಬಾಂಗ್ಲಾದೇಶದ ಡೆಪ್ಯೂಟಿ ಹೈ ಕಮಿಷನ್‌ ಕಚೇರಿ ಪ್ರವೇಶಿಸಲು ಹಿಂದೂ ಸಂಘಟನೆಯ ನೂರಾರು ಕಾರ್ಯಕರ್ತರು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ತಡೆಯಲು ಮುಂದಾದರು. ಮಧ್ಯ ಕೋಲ್ಕತ್ತದ ಬೆಕ್‌ ಬಾಗಾನ್‌ ಪ್ರದೇಶದಲ್ಲಿರುವ ಕಚೇರಿ ಸಮೀಪವೇ ಪ್ರತಿಭಟನಕಾರರು ಬಂದ  ಸಂದರ್ಭದಲ್ಲಿ ಜಲಫಿರಂಗಿಯ ಮೂಲಕ ಚದುರಿಸಲು ಯತ್ನಿಸಿದರು. ಬಳಿಕ 12 ಮಂದಿ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದರು. ಈ ವೇಳೆ ಹಲವು ಪ್ರತಿಭಟನಕಾರರು ಗಾಯಗೊಂಡರೆ ಕೆಲವು ಪೊಲೀಸರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ‘ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ 12 ಮಂದಿಯನ್ನು ಬಂಧಿಸಲಾಗಿದೆ. ಕಚೇರಿಯ ಒಳಭಾಗದಲ್ಲಿರುವ ಸಿಬ್ಬಂದಿಯ ರಕ್ಷಣೆಗಾಗಿ ಹೆಚ್ಚುವರಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿದೆ’ ಎಂದು ಕೋಲ್ಕತ್ತದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಮ್ಮು ರಜೌರಿಯಲ್ಲಿ ಪ್ರತಿಭಟನೆ: ದೀಪುದಾಸ್‌ ಹತ್ಯೆ ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್‌ ವಕೀಲರ ಸಂಘದ ಸದಸ್ಯರು ಮಂಗಳವಾರ ಜಮ್ಮುವಿನಲ್ಲಿ ಪ್ರತಿಭಟನೆ ನಡೆಸಿದರು.

ಭಾರತದ ಹೈ ಕಮಿಷನರ್‌ಗೆ ಸಮನ್ಸ್

ಢಾಕಾ: ಭಾರತದಲ್ಲಿರುವ ತನ್ನ ಹೈ ಕಮಿಷನ್ ಕಚೇರಿಗಳ ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಭಾರತದ ಹೈ ಕಮಿಷನರ್ ಪ್ರಣಯ್ ವರ್ಮ ಅವರಿಗೆ ಮಂಗಳವಾರ ಸಮನ್ಸ್‌ ನೀಡಿದೆ. ಭಾರತದಲ್ಲಿರುವ ತನ್ನ ಹೈಕಮಿಷನ್ ಕಚೇರಿ ವೀಸಾ ಕೇಂದ್ರಗಳ ಎದುರು ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಬಗ್ಗೆ ಬಾಂಗ್ಲಾದೇಶ ಕಳವಳ ವ್ಯಕ್ತಪಡಿಸಿದೆ. ಇಂಥ ಘಟನೆಗಳ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಬಾಂಗ್ಲಾದೇಶದ ಹೈಕಮಿಷನ್ ಮತ್ತು ಇತರ ರಾಜತಾಂತ್ರಿಕ ಕಚೇರಿಗಳ ಭದ್ರತೆಗೆ ಕ್ರಮವಹಿಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದೆ. ಕಳೆದ 10 ದಿನಗಳಲ್ಲಿ ವರ್ಮಾ ಅವರಿಗೆ ಎರಡನೇ ಬಾರಿಗೆ ಸಮನ್ಸ್‌ ನೀಡಲಾಗಿದೆ. ಪತ್ರಕರ್ತರ ಕಳವಳ: ಬಾಂಗ್ಲಾದೇಶದ ಮಾಧ್ಯಮಗಳು ಕಷ್ಟದ ಪರಿಸ್ಥಿತಿಯಲ್ಲಿವೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಜೀವಿಸುವ ಹಕ್ಕನ್ನು ರಕ್ಷಿಸಿಕೊಳ್ಳಬೇಕಾಗಿದೆ ಎಂದು ಬಾಂಗ್ಲಾದೇಶದ ಪ್ರಮುಖ ಪತ್ರಿಕೆಗಳ ಸಂಪಾದಕರು ಆತಂಕ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಸಂಸದರಿಂದ ಖಂಡನೆ

ನ್ಯೂಯಾರ್ಕ್‌/ವಾಷಿಂಗ್ಟನ್:  ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿ ಕೊಂದಿರುವುದನ್ನು ಅಮೆರಿಕ ಸಂಸದರು ಖಂಡಿಸಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸುವಂತೆ ಮತ್ತು ಕಾನೂನು ಸುವ್ಯವಸ್ಥೆ ಪುನರ್‌ಸ್ಥಾಪನೆ ಮಾಡುವಂತೆ ಬಾಂಗ್ಲಾದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಂಸದರಾದ ರಾಜಾ ಕೃಷ್ಣಮೂರ್ತಿ ಮತ್ತು ಜೆನಿಫರ್ ರಾಜ್‌ಕುಮಾರ್‌ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.