ADVERTISEMENT

ಪಂಜಾಬ್‌ ಪೊಲೀಸರು ನನ್ನನ್ನು ಭಯೋತ್ಪಾದಕನಂತೆ ಬಂಧಿಸಿದರು: ತಜಿಂದರ್‌ ಬಗ್ಗಾ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಮೇ 2022, 9:09 IST
Last Updated 7 ಮೇ 2022, 9:09 IST
ಬಿಜೆಪಿ ನಾಯಕ ತಜಿಂದರ್‌ ಪಾಲ್ ಸಿಂಗ್ ಬಗ್ಗಾ ಬಿಡುಗಡೆ ಬಳಿಕ ಅವರ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು –ಪಿಟಿಐ ಚಿತ್ರ
ಬಿಜೆಪಿ ನಾಯಕ ತಜಿಂದರ್‌ ಪಾಲ್ ಸಿಂಗ್ ಬಗ್ಗಾ ಬಿಡುಗಡೆ ಬಳಿಕ ಅವರ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು –ಪಿಟಿಐ ಚಿತ್ರ   

ನವದೆಹಲಿ: ಪಂಜಾಬ್ ಪೊಲೀಸರು ನಮ್ಮ ಮನೆಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಳಿ ನಡೆಸಿದ್ದರು. ನನ್ನನ್ನು ಭಯೋತ್ಪಾದಕನಂತೆ ಬಂಧಿಸಿದರು ಎಂದು ಬಿಜೆಪಿ ನಾಯಕ ತಜಿಂದರ್‌ ಪಾಲ್ ಸಿಂಗ್ ಬಗ್ಗಾ ಆರೋಪಿಸಿದ್ದಾರೆ.

ಇಂದು ಬೆಳಗ್ಗೆ ಸುದ್ದಿಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿದ ಬಗ್ಗಾ, ತಮ್ಮ ಬಂಧನ ಕುರಿತು ಮಾಹಿತಿ ವಿವರಿಸಿದ್ದಾರೆ.

‘ನಮ್ಮ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದ ಸಂದರ್ಭದಲ್ಲಿ ಯಾವುದೇ ವಾರೆಂಟ್ ತೋರಿಸಲಿಲ್ಲ. 8ಕ್ಕೂ ಹೆಚ್ಚು ಮಂದಿ ಪೊಲೀಸರು ನನ್ನನ್ನು ಹಿಡಿದುಕೊಂಡಿದ್ದರು. ನನಗೆ ಪೇಟ ಧರಿಸೋದಕ್ಕೂ ಸಮಯ ನೀಡಲಿಲ್ಲ. ಕನಿಷ್ಟ ಪಕ್ಷ ಚಪ್ಪಲಿಯನ್ನಾದರೂ ಧರಿಸುತ್ತೇನೆ ಎಂದು ಹೇಳಿದೆ. ಅದಕ್ಕೂ ಪೊಲೀಸರು ಅವಕಾಶ ನಿರಾಕರಿಸಿದರು. ನನ್ನನ್ನು ಅವರ ವಾಹನದೊಳಗೆ ಎಸೆದರು. ಪಂಜಾಬ್ ಪೊಲೀಸರು ನನ್ನನ್ನು ಬಂಧಿಸುವ ಬಗ್ಗೆ ಸ್ಥಳೀಯ ಪೊಲೀಸರಿಗೂ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ದಾಳಿಯಲ್ಲಿ 50ಕ್ಕೂ ಹೆಚ್ಚು ಪೊಲೀಸರು ಭಾಗಿಯಾಗಿದ್ದರು’ ಎಂದು ಬಗ್ಗಾ ಹೇಳಿಕೊಂಡಿದ್ದಾರೆ.

‘ನಮ್ಮ ಮನೆ ಮುಂದೆ 10ಕ್ಕೂ ಹೆಚ್ಚು ಪೊಲೀಸ್ ವಾಹನಗಳು ನಿಂತಿದ್ದವು. ಆ ದೃಶ್ಯಗಳು ಸಿಸಿಟಿವಿ ದಾಖಲಾಗಿವೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಯಾರಾದರೂ ಮಾತನಾಡಿದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ. ಉ್ರಗರ ರೀತಿ ಪರಿಗಣಿಸುತ್ತೇವೆ ಎಂಬ ಸಂದೇಶವನ್ನು ರವಾನಿಸುವ ರೀತಿಯಲ್ಲಿ ಈ ದಾಳಿ ನಡೆದಿದೆ’ ಎಂದು ಬಗ್ಗಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ನನ್ನನ್ನು ಬಂಧಿಸಲು ಪಂಜಾಬ್ ಪೊಲೀಸರು ದೆಹಲಿಗೆ ಬಂದಿದ್ದರು. ಆದರೆ, ಆ ಸಮಯದಲ್ಲಿ ನಾನು ಲಖನೌನಲ್ಲಿದ್ದ ಕಾರಣ ಬಂಧನ ಸಾಧ್ಯವಾಗಿರಲಿಲ್ಲ. ಆಗಲೂ ಅವರು (ಪಂಜಾಬ್ ಪೊಲೀಸರು) ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದಿದ್ದಾರೆ.

ಇದೀಗ ಪಂಜಾಬ್ ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಬೆನ್ನು ಹಾಗೂ ಭುಜದ ಮೇಲೆ ಗಾಯಗಳಾಗಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ಸದ್ಯ ದೆಹಲಿ ಪೊಲೀಸರು ನಮಗೆ ಭದ್ರತೆ ಒದಗಿಸಿದ್ದಾರೆ ಎಂದು ಬಗ್ಗಾ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.