
ದೆಹಲಿ ಕೆಂಪುಕೋಟೆ ಬಳಿ ಸೋಮವಾರ ಸಂಜೆ ಸಂಭವಿಸಿದ ಸ್ಫೋಟದ ನಂತರ ಸ್ಥಳದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು. ಸ್ಫೋಟದ ತೀವ್ರತೆಗೆ ಸುಟ್ಟು ಕರಕಲಾಗಿರುವ ವಾಹನಗಳು
ಪಿಟಿಐ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಕೆಂಪು ಕೋಟೆ ಬಳಿ ನಡೆದ ಸ್ಫೋಟದ ಬಗ್ಗೆ ದೆಹಲಿ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫರಿದಾಬಾದ್‌ನಲ್ಲಿ ಪತ್ತೆಯಾದ ಭಯೋತ್ಪಾದಕ ಮಾದರಿಗೂ ದೆಹಲಿ ಸ್ಫೋಟಕ್ಕೂ ಸಂಬಂಧವಿದೆ ಎಂಬ ಪ್ರಾಥಮಿಕ ತನಿಖಾ ವರದಿಯ ಜಾಡು ಹಿಡಿದು ದೆಹಲಿಯ ಹಲವೆಡೆ ದಾಳಿ ನಡೆಸಿದ್ದಾರೆ.
ಸ್ಫೋಟದ ತೀವ್ರತೆಗೆ 12 ಜನ ಮೃತಪಟ್ಟು, 20 ಜನ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಗುಪ್ತಚರ ವಿಭಾಗದ ನಿರ್ದೇಶಕ ತಪನ್ ದೇಕಾ, ದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ಮತ್ತು ಎನ್‌ಐಎ ಡಿಜಿ ಸದಾನಂದ ವಸಂತ್ ಡೇಟ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ನಳಿನ್ ಪ್ರಭಾತ್ ಅವರು ವರ್ಚುವಲ್ ಮೂಲಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ಸ್ಫೋಟಕ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣಗಳು ಮತ್ತು ಬಸ್ ಟರ್ಮಿನಲ್‌ಗಳಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ಇರಿಸಲಾಗಿದೆ.
ಬಾಂಬ್ ಸ್ಪೋಟಕ್ಕೂ ಮೊದಲು ಸ್ಫೋಟಗೊಂಡ ಹ್ಯುಂಡೇ ಐ20 ಕಾರನ್ನು ಕಾಶ್ಮೀರದ ಪುಲ್ವಾಮಾ ನಿವಾಸಿಯಾಗಿರುವ ವೈದ್ಯ ಉಮರ್ ಮೊಹಮ್ಮದ್ ಚಾಲನೆ ಮಾಡುತ್ತಿದ್ದ ಎಂದೆನ್ನಲಾಗಿದೆ.
ಕೆಂಪುಕೋಟೆ ಸುತ್ತ ಸುಮಾರು ನೂರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಸ್ಪೋಟ ಸಂಭವಿಸುವ ಮೂರು ಗಂಟೆಗಳ ಮೊದಲಿನಿಂದಲೂ ಕಾರು ಮತ್ತು ಅದನ್ನು ಚಾಲನೆ ಮಾಡುತ್ತಿದ್ದ ವ್ಯಕ್ತಿಯ ಚಲನವಲನಗಳನ್ನು ವೀಕ್ಷಿಸಿದ್ದಾರೆ. ಅದರಲ್ಲಿ ಈ ವ್ಯಕ್ತಿಯ ಚಿತ್ರ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಫರಿದಾಬಾದ್‌ನಲ್ಲಿನ ಭಯೋತ್ಪಾದಕ ಸಂಘಟನೆಯೊಂದಿಗೆ ಆತನಿಗೆ ಸಂಪರ್ಕವಿದೆ ಎಂದೂ ಹೇಳಲಾಗಿದೆ.
ಸ್ಪೋಟಗೊಂಡ ಕಾರಿನ ದೃಶ್ಯಾವಳಿಯಲ್ಲಿ ಮುಖಗವಸು ಧರಿಸಿದ್ದ ವ್ಯಕ್ತಿ ಕಾರನ್ನು ಚಾಲನೆ ಮಾಡುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿರುವ ಪೊಲೀಸರು, ಕೆಂಪು ಕೋಟೆ ಮತ್ತು ಪಕ್ಕದ ರಸ್ತೆಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಶೋಧಿಸಲು ಹಲವು ತಂಡಗಳನ್ನು ರಚಿಸಲಾಗಿದೆ ಎಂದಿದ್ದಾರೆ.
12 ಜನರ ಸಾವಿಗೆ ಕಾರಣವಾದ ಸ್ಫೋಟದಲ್ಲಿ ಅಮೋನಿಯಂ ನೈಟ್ರೇಟ್, ಇಂಧನ ತೈಲ ಮತ್ತು ಡಿಟೋನೇಟರ್‌ಗಳನ್ನು ಬಳಸಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ.
‘ಸುಮಾರು 360 ಕೆ.ಜಿ.ಯಷ್ಟು ಅಮೋನಿಯಂ ನೈಟ್ರೇಟ್ ಪತ್ತೆಯಾದ ಫರಿದಾಬಾದ್ ಭಯೋತ್ಪಾದಕ ಮಾದರಿಗೂ ಹಾಗೂ ದೆಹಲಿ ಸ್ಫೋಟಕ್ಕೂ ಸಂಬಂಧವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಂತಿಮ ವರದಿಗಾಗಿ ಕಾಯಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ಫರಿದಾಬಾದ್‌ನಲ್ಲಿ ವಶಪಡಿಸಿಕೊಂಡ 2,900 ಕೆ.ಜಿ. ಸ್ಫೋಟಕ ವಸ್ತುಗಳಲ್ಲಿ ಅಮೋನಿಯಂ ನೈಟ್ರೇಟ್, ಪೊಟ್ಯಾಷಿಯಂ ನೈಟ್ರೇಟ್ ಮತ್ತು ಸಲ್ಫರ್ ಇದ್ದವು. ಇದರಲ್ಲಿ 360 ಕೆ.ಜಿ. ಅಮೋನಿಯಂ ನೈಟ್ರೇಟ್ ಎಂದೆನ್ನಲಾದ ಸ್ಫೋಟಕ ವಸ್ತು ಮತ್ತು ಕೆಲವು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದಲ್ಲಿ ಗಾಯಗೊಂಡು ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿದ ಅಮಿತ್ ಶಾ, ಅವರ ಆರೋಗ್ಯ ವಿಚಾರಿಸಿದರು. ಜತೆಗೆ ತನಿಖೆಯನ್ನು ತೀವ್ರಗೊಳಿಸುವ ಭರವಸೆ ನೀಡಿದರು.
ದೆಹಲಿಯ ಕೆಂಪು ಕೋಟೆ ಬಳಿಯ ಮೆಟ್ರೋ ನಿಲ್ದಾಣದ ಹತ್ತಿರವಿರುವ ಟ್ರಾಫಿಕ್ ಸಿಗ್ನಲ್‌ನಲ್ಲಿ ಸೋಮವಾರ ಸಂಜೆ ನಿಧಾನವಾಗಿ ಚಲಿಸುತ್ತಿದ್ದ ಕಾರೊಂದು ಪ್ರಬಲವಾಗಿ ಸ್ಫೋಟಿಸಿದ ಪರಿಣಾಮ 12 ಜನರು ಮೃತಪಟ್ಟು, 20 ಜನರು ಗಾಯಗೊಂಡಿದ್ದಾರೆ. ಹಲವು ವಾಹನಗಳು ಸುಟ್ಟು ಕರಕಲಾಗಿವೆ. ಇದರ ಬೆನ್ನಲ್ಲೇ ದೇಶದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.
ದೆಹಲಿ ಸ್ಫೋಟ ಸಂಭವಿಸುವ ಕೆಲವೇ ಗಂಟೆಗಳ ಮೊದಲು ಮೂವರು ವೈದ್ಯರು ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿತ್ತು. ‘ವೈಟ್ ಕಾಲರ್’ ಭಯೋತ್ಪಾದಕ ಮಾದರಿ ಎಂದೇ ಕರೆಯಲಾಗಿರುವ ವಿದ್ವಂಸಕ ಕೃತ್ಯವನ್ನು ಪೊಲೀಸರು ಬಯಲಿಗೆಳೆದಿದ್ದರು.
ಈ ಭಯೋತ್ಪಾದಕ ಮಾದರಿಯ ಹಿಂದಿರುವ ತಾರೀಕ್ ಅಹ್ಮದ್, ಅಮೀರ್ ರಶೀದ್ ಮತ್ತು ಉಮರ್ ರಶೀದ್ ಎಂಬುವವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ದೆಹಲಿ ಸ್ಫೋಟದಲ್ಲಿ ಭಾಗಿಯಾಗಿದ್ದ ಎನ್ನಲಾದ ಡಾ. ಉಮರ್ ಉ ನಬಿ ಎಂಬಾತನ ಕುಟುಂಬ ಸದಸ್ಯರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ವೃತ್ತಿಯಲ್ಲಿ ವೈದ್ಯನಾಗಿರುವ ಉಮರ್ ಮೊಹಮ್ಮದ್, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ಎಂದು ಅವರು ಹೇಳಿದ್ದಾರೆ.
ಬಂಧಿತ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ತಾರಿಕ್, ಕೃತ್ಯಕ್ಕೆ ಬಳಸಿದ್ದ ಹ್ಯುಂಡೇ ಐ20 ಕಾರನ್ನು ಉಮರ್‌ಗೆ ನೀಡಿದ್ದ ಎನ್ನಲಾಗಿದೆ.
ಭಯೋತ್ಪಾದಕ ಸಂಘಟನೆಯ ಭಾಗವಾಗಿದ್ದ ತನ್ನ ಸಹ ವೈದ್ಯನನ್ನು ಬಂಧಿಸಿದ ನಂತರ, ಬಂಧನ ಭೀತಿಯಿಂದ ಉಮರ್ ಮೊಹಮ್ಮದ್ ಈ ಆತ್ಮಾಹುತಿ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸ್ಫೋಟದ ನಂತರ ದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ದೆಹಲಿಗೆ ಪ್ರವೇಶಿಸುವ ಎಲ್ಲಾ ವಾಹನಗಳು, ಖಾಸಗಿ ಅಥವಾ ವಾಣಿಜ್ಯ ವಾಹನಗಳಾಗಿದ್ದರೂ, ಭದ್ರತಾ ಕ್ರಮಗಳ ಭಾಗವಾಗಿ ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಸ್ಫೋಟ ಸಂಭವಿಸುವ ಮೊದಲು ವಾಹನವನ್ನು ಹತ್ತಿರದ ಪಾರ್ಕಿಂಗ್ ಸ್ಥಳದಲ್ಲಿ ಮೂರು ಗಂಟೆಗಳ ಕಾಲ ನಿಲ್ಲಿಸಲಾಗಿತ್ತು ಎಂದು ನಮಗೆ ತಿಳಿದುಬಂದಿದೆ. ವಿವಿಧ ಪಾರ್ಕಿಂಗ್ ಸ್ಥಳಗಳ ದೃಶ್ಯಗಳನ್ನು ಸಹ ಪರಿಶೀಲಿಸಲಾಗುತ್ತಿದೆ‘ ಎಂದು ಪೊಲೀಸರು ಹೇಳಿದ್ದಾರೆ.
ಶಂಕಿತರನ್ನು ಪತ್ತೆಹಚ್ಚಲು ದರಿಯಾಗಂಜ್ ಮತ್ತು ಪಹರ್‌ಗಂಜ್ ಪ್ರದೇಶಗಳ ಹೋಟೆಲ್‌ಗಳು ಮತ್ತು ಅತಿಥಿ ಗೃಹಗಳಲ್ಲಿ ರಾತ್ರಿಯಿಡೀ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಹೋಟೆಲ್‌ನಲ್ಲಿರುವ ರಿಜಿಸ್ಟರ್‌ಗಳು, ನಮೂದುಗಳನ್ನು ಪರಿಶೀಲಿಸಲಾಗಿದೆ. ಶಂಕಿತನ ವಿವರಣೆಗೆ ಹೊಂದಿಕೆಯಾಗುವವರನ್ನು ಪತ್ತೆ ಮಾಡಲು ಅಲ್ಲಿನ ಸಿಬ್ಬಂದಿಗಳನ್ನು ಪ್ರಶ್ನಿಸಲಾಗಿದೆ ಎಂದು ಅವರು ಹೇಳಿದರು.
‘ರಾಷ್ಟ್ರ ರಾಜಧಾನಿಯ ಎಲ್ಲಾ ಪೊಲೀಸ್ ಠಾಣೆಗಳು ಕಟ್ಟೆಚ್ಚರ ವಹಿಸಲು, ಮೆಟ್ರೊ ನಿಲ್ದಾಣ, ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಎಲ್ಲಾ ತುರ್ತು ಕರೆಗಳಿಗೆ ಹಾಜರಗಬೇಕು, ನಿಯೋಜಿತ ಪ್ರದೇಶಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ತಕ್ಷಣ ವರದಿ ಮಾಡುವಂತೆಯೂ ತಿಳಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
ಇದು ಆತ್ಮಹತ್ಯಾ ಬಾಂಬ್ ದಾಳಿಯೇ ಅಥವಾ ದೊಡ್ಡ ಭಯೋತ್ಪಾದಕ ಕೃತ್ಯದ ಪಿತೂರಿಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಯಾಣಿಕರಿಗೆ ಕೆಂಪು ಕೋಟೆ ಮೆಟ್ರೋ ನಿಲ್ದಾಣವನ್ನು ಮುಚ್ಚಲಾಗಿದ್ದು, ಆ ಪ್ರದೇಶದಲ್ಲಿ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ. ನೇತಾಜಿ ಸುಭಾಷ್ ಮಾರ್ಗದಲ್ಲಿ ಚಟ್ಟಾ ರೈಲು ಕಟ್‌ನಿಂದ ಸುಭಾಷ್ ಮಾರ್ಗ ಕಟ್ ವರೆಗೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ದೆಹಲಿ ಮೆಟ್ರೊ ಪ್ರಕಟಣೆಯನ್ನು ಹೊರಡಿಸಿದ್ದು, ‘ಸೇವೆಯ ನವೀಕರಣ. ಭದ್ರತಾ ಕಾರಣಗಳಿಂದಾಗಿ ಲಾಲ್ ಕಿಲಾ ಮೆಟ್ರೋ ನಿಲ್ದಾಣವನ್ನು ಮುಚ್ಚಲಾಗಿದೆ. ಉಳಿದ ಎಲ್ಲಾ ನಿಲ್ದಾಣಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ’ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.