ADVERTISEMENT

Delhi Blast: ಉಗ್ರ ಕೃತ್ಯದ ತನಿಖೆ ಕಾಶ್ಮೀರದತ್ತ

‘ಬಾಂಬ್‌ಗಳನ್ನಷ್ಟೇ ಹಿಂಬಾಲಿಸುತ್ತಿಲ್ಲ, ಮನಸ್ಸುಗಳನ್ನು ಹಿಂಬಾಲಿಸುತ್ತಿದ್ದೇವೆ’

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 23:42 IST
Last Updated 13 ನವೆಂಬರ್ 2025, 23:42 IST
<div class="paragraphs"><p>ದೆಹಲಿ ಸ್ಫೋಟ</p></div>

ದೆಹಲಿ ಸ್ಫೋಟ

   

(ಪಿಟಿಐ ಚಿತ್ರ)

ಶ್ರೀನಗರ: ಕೆಂಪುಕೋಟೆಯಲ್ಲಿ ನಡೆದ ಸ್ಫೋಟ ಹಾಗೂ ಫರೀದಾ ಬಾದ್‌ನಲ್ಲಿ ಸ್ಫೋಟಕ ಸಾಗಣೆಗೆ ಸಂಬಂಧಿಸಿದಂತೆ ತನಿಖೆಯನ್ನು ಮತ್ತಷ್ಟು ವಿಸ್ತರಿಸಿರುವ ತನಿಖಾಧಿಕಾರಿಗಳು, ಭದ್ರತಾ ಸಂಸ್ಥೆಗಳು ತಮ್ಮ ಗಮನವನ್ನು ಕಾಶ್ಮೀರದ ಮೇಲೆ ಕೇಂದ್ರಿಕರಿಸಿದ್ದಾರೆ. ಈಗಾಗಲೇ ಬಂಧಿತರಾದ ವೈದ್ಯರ ಸಂಬಂಧಿಕರು, ಸಹೋದ್ಯೊಗಿಗಳು, ಡಿಜಿಟಲ್‌ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.‌

ADVERTISEMENT

ವೈದ್ಯರಿಂದ ವಶಕ್ಕೆ ಪಡೆದ ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌ಗಳನ್ನು ಸೈಬರ್‌ ತಜ್ಞರು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದು, ವೆಬ್‌ ಸಂಪರ್ಕದ ಮೂಲಕ ಎನ್‌ಕ್ರಿಪ್ಟೆಡ್‌ ಕಮ್ಯೂನಿಕೇಷನ್‌ ಸಂವಹನ ಮಾರ್ಗವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

ಎನ್‌ಕ್ರಿಪ್ಟೆಡ್‌ ಕಮ್ಯೂನಿಕೇಷನ್‌ ಹೆಚ್ಚು ಭದ್ರತೆ ಹೊಂದಿರುವ ಸಂವಹನ ಮಾರ್ಗವಾಗಿದ್ದು, ಬೇರೆಯವರು ಇದನ್ನು ಕದ್ದಾಲಿಕೆ ಮಾಡಲು ಸಾಧ್ಯವಿಲ್ಲ. 

ಕಳೆದ ಮೂರು ದಿನಗಳಿಂದಲೂ ಪುಲ್ವಾಮಾ, ಕುಲ್ಗಾಮ್‌, ಶೋಪಿಯಾನ್‌, ಶ್ರೀನಗರದಲ್ಲಿ ಹಲವೆಡೆ ತನಿಖಾ ತಂಡಗಳು ದಾಳಿ ಮುಂದುವರಿಸಿದ್ದು, ಆರೋಪಿ ಪೈಕಿ ಒಬ್ಬನ ಸಹೋದರಿ ಸೇರಿದಂತೆ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಸ್ಫೋಟದ ಕುರಿತು ವಶಕ್ಕೆ ಪಡೆದ ವ್ಯಕ್ತಿಗಳಿಗೆ ಮುಂಚಿತವಾಗಿ ಮಾಹಿತಿ ತಿಳಿದಿತ್ತೇ ಎಂಬುದರ ಕುರಿತು ಪ್ರಶ್ನಿಸಲಾಗಿದೆ. ಬಂಧಿತ ವೈದ್ಯರ ಜೊತೆಗೆ ಹಣಕಾಸು ವರ್ಗಾವಣೆ, ಆನ್‌ಲೈನ್‌ ಸಂಪರ್ಕ ಹೊಂದಿದ್ದವರ ಕುರಿತು ವಿಚಾರಣೆ ನಡೆಸಲಾಗಿದೆ.

‘ಟೆಲಿಗ್ರಾಂ ಖಾತೆ, ಪ್ರೋಟಾನ್‌ ಮೇಲ್‌ಗಳ ಮೂಲಕ ರಹಸ್ಯ ಸಂವಹನ ನಡೆಸಿರುವುದು, ಖಾಸಗಿ ಖಾತೆಗಳ ಮೂಲಕ ಹಣದ ವಹಿವಾಟು ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಮೂಲಗಳು ತಿಳಿಸಿವೆ. 

‘ನಾವು ಬಾಂಬ್‌ಗಳನ್ನಷ್ಟೇ ಹಿಂಬಾ ಲಿಸುತ್ತಿಲ್ಲ, ಅವರನ್ನು ಬೆಂಬಲಿಸಿದ ಮನಸ್ಸುಗಳನ್ನು ಹಿಂಬಾಲಿಸುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿ ಸ್ಫೋಟದ ಬಳಿಕ ಫರೀದಾಬಾದ್‌ನ ಅಲ್‌– ಅಲ್‌–ಫಲಾಹ್‌ ವಿಶ್ವವಿದ್ಯಾಲಯದಲ್ಲಿ ಹಲವು ವೈದ್ಯರ ಬಂಧನ, 2,900 ಕೆ.ಜಿ. ಸ್ಫೋಟಕಗಳನ್ನು ವಶಕ್ಕೆ ಪಡೆದ ಬಳಿಕ ಜಮ್ಮು ಮತ್ತು ಕಾಶ್ಮೀರದ ಪೊಲೀಸರು, ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಡಾ. ಮುಜಮ್ಮಿಲ್‌ ಗನಿ (ಮಾಸ್ಟರ್‌ಮೈಂಡ್‌)

35 ವರ್ಷದ ಡಾ. ಮುಜಮ್ಮಿಲ್‌ ಗನಿ ಫರೀದಾಬಾದ್‌ನ ಅಲ್‌–ಫಲಾಹ್‌ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ. ಪುಲ್ವಾಮಾ ಮೂಲದ ಈತನೇ ದೆಹಲಿ ಸ್ಫೋಟದ ಪ‍್ರಧಾನ ಸಂಚುಕೋರನಾಗಿದ್ದು, ಉಳಿದವರ ಜೊತೆಗೆ ಸಂಯೋಜಕನಾಗಿ ಕೆಲಸ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಫರೀದಾಬಾದ್‌ನ ದೌಜ್‌ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಈತನ ಮನೆಯಿಂದಲೇ 358 ಕೆ.ಜಿ. ಅಮೋನಿಯಂ ನೈಟ್ರೇಟ್‌, ಒಂದು ಎ.ಕೆ.–47 ರೈಫಲ್ಸ್‌, ಮೂರು ಮ್ಯಾಗಜೀನ್‌, 91 ಜೀವಂತ ಗುಂಡುಗಳು, ಪಿಸ್ತೂಲ್‌, ಟೈಮರ್‌, ರಿಮೋಟ್‌ ಕಂಟ್ರೋಲ್‌ ಡಿಟೋನೇಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಲವು ಸಲ ಕೆಂಪು ಕೋಟೆಗೆ ಭೇಟಿ ನೀಡಿದ್ದ ಈತ, ಜನದಟ್ಟಣೆಯ ಜೊತೆಗೆ, ಭದ್ರತಾ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದ್ದ. ಗಣರಾಜ್ಯೋತ್ಸವದ ದಿನವೇ ದಾಳಿ ನಡೆಸುವ ಕುರಿತು ಸಂಚು ರೂಪಿಸಿದ್ದ. ಈತನ ಸಹೋದರಿ ಡಾ. ಅಸ್ಮತ್‌ ಶಕೀಲ್‌ ಅಲಿಯಾಸ್‌ ಜಸೀಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಸಹೋದರನಿಗೆ ಆರ್ಥಿಕ ನೆರವು ಹಾಗೂ ಸಂವಹನ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರೇ ಎಂಬುದರ ಕುರಿತು ವಿಚಾರಣೆ ಮುಂದುವರಿಸಿದ್ದಾರೆ.

ಡಾ. ಮುಜಮ್ಮಿಲ್‌ ಗನಿ

ಡಾ. ಆದಿಲ್‌ ಅಹಮ್ಮದ್‌ (ಲಾಜಿಸ್ಟಿಕ್‌ ಹ್ಯಾಂಡ್ಲರ್‌)

ಕಾಶ್ಮೀರದ ಕುಲ್ಗಾಮ್‌ ಮೂಲಕ ಡಾ.ಆದಿಲ್‌ ಅಹಮ್ಮದ್‌ ಕೂಡ ಅಲ್–ಫಲಾಹ್‌ ವಿಶ್ವವಿದ್ಯಾಲಯದ ವೈದ್ಯ. ಸ್ಫೋಟಕಗಳನ್ನು ಸಾಗಿಸಲು ನೆರವಾಗಿದ್ದ. ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ. 

ಈ ಹಿಂದೆ ಅನಂತ್‌ನಾಗ್‌ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ವೈದ್ಯನಾಗಿ ಕೆಲಸ ಮಾಡಿದ್ದ. ಈತನ ಲಾಕರ್‌ನಿಂದ ಎ.ಕೆ.–47 ಬಂದೂಕು ವಶಕ್ಕೆ ಪಡೆಯಲಾಗಿದೆ. ಫರೀದಾಬಾದ್‌ನಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿಟ್ಟು, ನಂತರ ದೆಹಲಿಗೆ ಸಾಗಣೆ ಮಾಡಲು ನೆರವಾಗಿದ್ದ. ತನ್ನ ವೈದ್ಯ ವೃತ್ತಿಯನ್ನೇ ಮುಂದಿಟ್ಟುಕೊಂಡು, ಅಂತರರಾಜ್ಯ ಪ್ರವಾಸ ಮಾಡಿದ್ದ. ಬಂಧನದ ವೇಳೆ ಸಹರಾನ್‌ಪುರದ ವಿ–ಬ್ರೊಸ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಈ ಆಸ್ಪತ್ರೆಯು ಆಸ್ಕರ್‌ ಸಮೂಹ ಆಸ್ಪತ್ರೆಗಳ ಘಟಕವಾಗಿದೆ.

ಡಾ. ಆದಿಲ್‌ ಅಹಮ್ಮದ್‌

ಡಾ. ಉಮರ್‌ ನಬಿ (ಶಂಕಿತ ಸ್ಫೋಟ ಕಾರ್ಯಗತಗೊಳಿಸಿದವ)

ಪುಲ್ವಾಮಾ ಮೂಲದ ಈತ ತನ್ನ ಐ–20 ಕಾರಿನಲ್ಲಿಯೇ ಸ್ಫೋಟಕಗಳನ್ನು ತೆಗೆದುಕೊಂಡು ಹೋಗಿ ಕೆಂಪೊಕೋಟೆಯಲ್ಲಿ ದಾಳಿಯ ಅಂತಿಮ ಹಂತದ ಕಾರ್ಯಗತಗೊಳಿಸಿದ ಶಂಕೆ ಇದೆ. ಮುಜಮ್ಮಿಲ್‌ ಗನಿ ಹಾಗೂ ಡಾ.ಆದಿಲ್‌ ಅಹಮ್ಮದ್‌ ನಿರಂತರ ಸಂಪರ್ಕ ಹೊಂದಿದ್ದ ಈತ ಡಿಟೋನೇಟರ್ ವ್ಯವಸ್ಥೆಯ ನಿರ್ವಹಣೆ ಜೊತೆಗೆ ಸ್ಫೋಟಕ ಸಾಗಣೆಗೂ ನೆರವಾಗಿದ್ದ.

ಪದೇ ಪದೇ ಫೋನ್‌ ಹಾಗೂ ವಿಳಾಸ ಬದಲಾಯಿಸಿದ್ದರಿಂದ ಆತನನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.

ಕೆಂಪುಕೋಟೆಯಲ್ಲಿ ಸ್ಫೋಟ ಸಂಭವಿಸಿದ ಕಾರಿನಲ್ಲಿ ಆತ ಕೂಡ ಇದ್ದ ಎಂಬುದು ಡಿಎನ್‌ಎ ಪರೀಕ್ಷೆ ಮೂಲಕ ದೃಢಪಟ್ಟಿದೆ.

ಡಾ. ಉಮರ್‌ ನಬಿ

ಡಾ. ನಿಸಾರ್‌ ಅಲ್‌ ಹಸನ್‌ (ಮಿಸ್ಸಿಂಗ್‌ ಲಿಂಕ್‌)

ದೇಶದ ಭದ್ರತೆಗೆ ಹಾನಿಯುಂಟು ಮಾಡಿದ ಆರೋಪದ ಮೇಲೆ ಶ್ರೀನಗರದ ಡಾ. ಹಸನ್‌ ಅವರನ್ನು 2023ರ ನವೆಂಬರ್‌ ತಿಂಗಳಲ್ಲಿ ಕೆಲಸದಿಂದಲೇ ವಜಾಗೊಳಿಸಲಾಗಿತ್ತು. ಇದಾದ ಬಳಿಕ ಫರೀದಾಬಾದ್‌ನ ಅಲ್‌–ಫಲಾಹ್‌ ವಿಶ್ವವಿದ್ಯಾಲಯದ ಸೇರಿದ್ದ.

ಸ್ಫೋಟದ ಬಳಿಕ ಹಸನ್‌ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ, ಈ ಸ್ಫೋಟದ ಬಗ್ಗೆ ಮುಂಚಿತವಾಗಿ ಸಂಪೂರ್ಣ ಮಾಹಿತಿ ಆತನಿಗಿತ್ತು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.