
ನವದೆಹಲಿ: ದೆಹಲಿಯಲ್ಲಿ ನಡೆಸಿದ ಮೋಡ ಬಿತ್ತನೆ ಪರೀಕ್ಷೆ ಯಶಸ್ವಿಯಾಗಿದೆ ಎಂದು ಪರಿಸರ ಇಲಾಖೆ ಸಚಿವ ಮಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ. ಇದೇ ವೇಳೆ, ಬಿಜೆಪಿ ನೇತೃತ್ವದ ಸರ್ಕಾರದ ಈ ಯಶಸ್ಸು ಕಂಡು ಪ್ರತಿಪಕ್ಷ ಎಎಪಿಗೆ ಅಸೂಯೆ ಮೂಡಿದೆ ಎಂದಿದ್ದಾರೆ.
ಚಳಿಗಾಲದಲ್ಲಿ ದೆಹಲಿಯಲ್ಲಿ ಉಂಟಾಗುವ ವಾಯುಮಾಲಿನ್ಯ ತಡೆಗಟ್ಟುವುದಕ್ಕಾಗಿ ಐಐಟಿ–ಕಾನ್ಪುರದ ಸಹಯೋಗದಲ್ಲಿ ದೆಹಲಿ ಸರ್ಕಾರ ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಮೋಡಬಿತ್ತನೆ ಕಾರ್ಯ ಕೈಗೊಂಡಿತ್ತು. ಇದರ ಪರಿಣಾಮ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಪ್ರದೇಶಗಳಲ್ಲಿ ತಂತುರು ಮಳೆಯಾಗಿದೆ.
ಪಿಟಿಐ ಜತೆ ಮಾತನಾಡಿದ ಸಿರ್ಸಾ, ಈ ಹಿಂದಿನ ಸರ್ಕಾರ ಮೋಡ ಬಿತ್ತನೆಯನ್ನು ಕೈಗೊಂಡಿತ್ತು ಆದರೆ ಯಶಸ್ವಿಯಾಗಿರಲಿಲ್ಲ ಎಂದರು.
ಈ ಪ್ರಕ್ರಿಯೆಗೆ ತಗುಲಿದ ವೆಚ್ಚದ ಕುರಿತು ವಿವರಿಸಿದ ಸಿರ್ಸಾ, 'ಒಂದು ಪರೀಕ್ಷೆಗೆ ₹20–25 ಲಕ್ಷವನ್ನು ವ್ಯಯಿಸಲಾಗಿದೆ. 9,10ನೇ ಪರೀಕ್ಷೆಯ ನಂತರ, ಮೋಡ ಬಿತ್ತನೆ ಮಾಡಿದ ಬಳಿಕ ಯಾವ ಪ್ರಮಾಣದಲ್ಲಿ ಮಳೆ ಸುರಿಯಲಿದೆ, ಯಾವ ತೇವಾಂಶದಲ್ಲಿ ಮಳೆಯನ್ನು ಪ್ರಚೋದಿಸಬಹುದು ಎಂಬುದನ್ನು ತಿಳಿದುಕೊಳ್ಳುತ್ತೇವೆ ಎಂದರು.
‘ಮಳೆ ಬರುವಂತೆ ಮಾಡಲು ಅಗತ್ಯವಿರುವ ತೇವಾಂಶದ ಬಗ್ಗೆ ಐಐಟಿ-ಕಾನ್ಪುರ ನಿರ್ದಿಷ್ಟ ಮಾಹಿತಿಯನ್ನು ಪಡೆದ ನಂತರ, ಅಗತ್ಯವಿದ್ದಾಗ ದೆಹಲಿಯಲ್ಲಿ ಕೃತಕ ಮಳೆ ಸುರಿಯಂತೆ ಮಾಡಲು ಸಾಧ್ಯವಾಗುತ್ತದೆ’ ಎಂದರು.
ಕೃತಕ ಮಳೆಯ ಬಗ್ಗೆ ಹೇಳಿಕೊಂಡರೂ ಯಾವುದೇ ಮಳೆ ದಾಖಲಾಗಿಲ್ಲ ಎಂದು ಎಎಪಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಸಿರ್ಸಾ, ‘ಎಎಪಿ ಖಂಡಿತವಾಗಿ ಪ್ರಶ್ನೆ ಎತ್ತಲಿದೆ. ಏಕೆಂದರೆ ಕಳೆದ 10 ವರ್ಷದಲ್ಲಿ ಅವರು ಮೋಡ ಬಿತ್ತನೆಯಲ್ಲಿ ಯಶಸ್ವಿಯಾಗಿಲ್ಲ. ಜತೆಗೆ ದೆಹಲಿಯನ್ನೂ ಹಾಳು ಮಾಡಿದ್ದಾರೆ’ ಎಂದರು.
‘ಈಗ ಯಮುನಾ ನದಿಯ ಬಳಿ ಛತ್ ಪೂಜೆ ನಡೆಯುತ್ತಿದೆ, ಆದರೂ ನದಿ ಸ್ವಚ್ಛವಾಗಿದೆ. ವಾಯು ಮಾಲಿನ್ಯವೂ ನಿಯಂತ್ರಣದಲ್ಲಿದ್ದು, ಹಸಿರು ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ಇದನೆಲ್ಲ ಅವರು (ಎಎಪಿ) ಹೇಗೆ ಸಹಿಸಿಕೊಳ್ಳುತ್ತಾರೆ. ಈ ಯಶಸ್ಸು ಅವರ ಅಸೂಯೆಗೆ ಕಾರಣವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.