ADVERTISEMENT

AQI ಎಂದರೆ ತಾಪಮಾನ ಎಂದ ದೆಹಲಿ ಸಿಎಂ: 'ಹೊಸ ವಿಜ್ಞಾನ'ವೆಂದು ಕಾಲೆಳೆದ ಕೇಜ್ರಿವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2025, 16:16 IST
Last Updated 8 ಡಿಸೆಂಬರ್ 2025, 16:16 IST
<div class="paragraphs"><p>ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ</p></div>

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ

   

ಕೃಪೆ: ಪಿಟಿಐ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಿರುವುದು ತೀವ್ರ ಕಳವಳ ಉಂಟುಮಾಡಿದೆ. ಈ ನಡುವೆ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಗಾಳಿಯ ಗುಣಮಟ್ಟ ಸೂಚ್ಯಂಕದ (ಎಕ್ಯೂಐ) ಕುರಿತು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ವಿರೋಧ ಪಕ್ಷಗಳು, ಗುಪ್ತಾ ಕಾಲೆಳೆದಿವೆ.

ADVERTISEMENT

ಗಾಳಿಯಲ್ಲಿ ಬೆರೆತಿರುವ ದೂಳಿನ ಕಣಗಳನ್ನು ಗುರುತಿಸಿ, ಗುಣಮಟ್ಟ ಅಥವಾ ಮಾಲಿನ್ಯ ಮಟ್ಟವನ್ನು 'ವಾಯು ಗುಣಮಟ್ಟ ಸೂಚ್ಯಂಕ'ದ (AQI) ಮೂಲಕ ಅಳೆಯಲಾಗುತ್ತದೆ. ಆದರೆ, ಗುಪ್ತಾ ಅವರು, 'ಎಕ್ಯೂಐ ಎಂಬುದು ತಾಪಮಾನ' ಎಂಬುದಾಗಿ ಹೇಳಿಕೆ ನೀಡಿದ್ದಾರೆ.

ಅವರು ಮಾತನಾಡಿರುವ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಅದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌, 'ಮೊದಲ ವಿಚಾರ – ಎಕ್ಯೂಐ ಮಾನಿಟರ್‌ಗಳನ್ನು ಎಲ್ಲೆಲ್ಲಿ ಅಳವಡಿಸಲಾಗಿದೆಯೋ ಅಲ್ಲೆಲ್ಲಾ, ನೀರು ಚಿಮುಕಿಸುವ ಮೂಲಕ ಮಾಲಿನ್ಯ ಕುರಿತ ವಾಸ್ತವ ದೆಹಲಿ ಜನರಿಗೆ ಗೊತ್ತಾಗದಂತೆ ಮಾಡುತ್ತಿರುವುದಾಗಿ ಮುಖ್ಯಮಂತ್ರಿಯವರೇ ಒಪ್ಪಿಕೊಂಡಿದ್ದಾರೆ. ಅದನ್ನು ಸುಲಭವಾಗಿ ಹೇಳುವುದಾದರೆ, ನೈಜ ದತ್ತಾಂಶಗಳನ್ನು ಮರೆಮಾಡುವ ಮತ್ತು ಗಾಳಿ ಶುದ್ಧವಾಗಿದೆ ಎಂಬುಂತೆ ಪ್ರದರ್ಶಿಸುವ ಆಟಗಳು ನಡೆಯುತ್ತಿವೆ. ಎರಡನೇ ವಿಚಾರ – ವಾಯು ಗುಣಮಟ್ಟ ಸೂಚ್ಯಂಕ ಇದೀಗ ತಾಪಮಾನವಾಗಿ ಬದಲಾಗಿದೆ ಎಂಬ ಹೊಸ ವಿಜ್ಞಾನ ಯಾವಾಗ ಬಂತು' ಎಂದು ವ್ಯಂಗ್ಯವಾಗಿ ಕೇಳಿದ್ದಾರೆ.

ದೆಹಲಿಯಲ್ಲಿ ವಾಯು ಮಾಲಿನ್ಯ ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಗುಪ್ತಾ, ಎಕ್ಯೂಐ ಅನ್ನು ತಾಪಮಾನ ಎಂದು ಹೇಳಿದ್ದರು.

‌ಮಾಲಿನ್ಯದ ವಿಚಾರವಾಗಿ ಸರ್ಕಾರದ ವಿರುದ್ಧ ಇಂಡಿಯಾ ಗೇಟ್‌ ಬಳಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧವೂ ವಾಗ್ದಾಳಿ ನಡೆಸಿ, 'ಮಾಲಿನ್ಯ ಹೊಸ ಸಮಸ್ಯೆ ಅಲ್ಲ. ಸಾಕಷ್ಟು ವರ್ಷಗಳಿಂದಲೂ ಇದೆ. ಈ ಹಿಂದೆ ನಿಮ್ಮ ಪ್ರತಿಭಟನೆಗಳು ಎಲ್ಲಿ ನಡೆಯುತ್ತಿದ್ದವು. ಹಿಂದಿನ ಎಎಪಿ ಸರ್ಕಾರ ಏನು ಮಾಡಿತು? ಸಮಸ್ಯೆ 27 ವರ್ಷಗಳಿಂದ ಇದೆ. ಅದನ್ನು ಸರಿಮಾಡಲು ಸರ್ಕಾರಕ್ಕೆ ಕನಿಷ್ಠ 27 ತಿಂಗಳು ಬೇಕು. ಅದಾದ ನಂತರ ನೀವು, ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಪ್ರಶ್ನಿಸಬಹುದು' ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.